ಮಮುಟ್ಟಿ ಆರೋಗ್ಯಕ್ಕಾಗಿ ಅಯ್ಯಪ್ಪನ ಮೊರೆ ಹೋದ ಮೋಹನ್ ಲಾಲ್! ಉಷಾ ಪೂಜೆಯಲ್ಲಿ ಭಾಗಿ…

ಕೇರಳ ಸಿನೆಮಾ ರಂಗದಲ್ಲಿ ಮೋಹನಲಾಲ್ ಹಾಗೂ ಮಮುಟ್ಟಿ ಎರಡು ಬಹುದೊಡ್ಡ ಹೆಸರುಗಳು. ಇವರಿಬ್ಬರು ಆತ್ಮೀಯರೂ ಹೌದು. ಸ್ಟಾರ್ ಫ್ಯಾನ್ ವಾರ್ ಏನೇ ಇರಲಿ, ಇವರಿಬ್ಬರ ನಂಟಿಗೆ ಯಾವುದೂ ಇಲ್ಲಿಯ ತನಕ ಅಡ್ಡಿ ಬಂದಿಲ್ಲ. ಇತ್ತೀಚೆಗೆ ಮಮುಟ್ಟಿ 73 ವರ್ಷ ದಾಟಿದರೂ ಇನ್ನೂ ಕೂಡ ನಾಯಕನಟನಾಗಿ ನಟಿಸುತ್ತಾ, ಫೈಟ್ ಸೀನ್ ಗಳಲ್ಲಿ ಭಾಗವಹಿಸುತ್ತಾ ಕಲಾವಿದರ ಪಾಲಿಗೆ ಸೋಜಿಗವೇ ಆಗಿದ್ದಾರೆ. ಅವರ ಸಿನೆಮಾಗಳಿಗೆ ಇವತ್ತಿಗೂ ಕೇರಳದಲ್ಲಿ ಬಹುದೊಡ್ಡ ಬೇಡಿಕೆ ಇದೆ.
ಇಂತಹ ಹೊತ್ತಿನಲ್ಲಿ ಮಮುಟ್ಟಿಯವರಿಗೆ ಕ್ಯಾನ್ಸರ್ ಎನ್ನುವ ಕಾಯಿಲೆ ತಗುಲಿದೆ ಎಂದು ಗುಸುಗುಸು ಸುದ್ದಿ ಹಬ್ಬಿತ್ತು. ಅದನ್ನು ಅವರ ಆಪ್ತವರ್ಗ ಅಲ್ಲಗಳೆಯುತ್ತಾ ಬಂದಿದೆ. ರಮ್ಜಾನ್ ತಿಂಗಳಾಗಿರುವುದರಿಂದ ಆ ಮತದ ಅನುಯಾಯಿ ಮಮುಟ್ಟಿ ಈ ಮಾಸದಲ್ಲಿ ಹೆಚ್ಚಾಗಿ ಹೊರಗೆ ಕಾಣಿಸಲ್ಲ, ಅಷ್ಟೇ ಎಂದು ಅವರ ಆತ್ಮೀಯ ಬಳಗ ಹೇಳುತ್ತಾ ಬರುತ್ತಿದೆ.
ಈ ನಡುವೆ ಮೋಹನ್ ಲಾಲ್ ಅವರು ಶಬರಿಮಲೆಯಲ್ಲಿ ಅಯ್ಯಪ್ಪ ದೇವರ ಸನ್ನಿಧಿಯಲ್ಲಿ ಮಮುಟ್ಟಿ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಉಷಾ ಪೂಜೆ ಸಲ್ಲಿಸಿದ್ದು, ಅದರಿಂದ ಮಮುಟ್ಟಿ ಆರೋಗ್ಯದ ಬಗ್ಗೆ ಇರುವ ಸಂದೇಹಗಳಿಗೆ ರೆಕ್ಕೆಪುಕ್ಕ ಬಂದಿದೆ. ದೇಗುಲದ ರಸೀದಿಯಲ್ಲಿ ಮೊಹಮ್ಮದ್ ಕುಟ್ಟಿ ಎಂದು ಬರೆಸಿರುವ ವಿಷಯ ಬಹಿರಂಗವಾಗಿದೆ. ಇದರೊಂದಿಗೆ ಜನ್ಮ ನಕ್ಷತ್ರ ವಿಶಾಖ ಎಂದು ಉಲ್ಲೇಖಿಸಲಾಗಿದೆ.
ಇಷ್ಟೇ ವಿಷಯ ಆಗಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಕೆಲವರಿಗೆ ಇದನ್ನು ವಿವಾದ ಮಾಡುವ ಹಂಬಲ. ಪತ್ರಕರ್ತ ಅಬ್ದುಲ್ಲಾ ಎನ್ನುವವರು ಇದರಲ್ಲಿ ಮತ ಧರ್ಮವನ್ನು ಹುಡುಕಿ ದೊಡ್ಡ ಸುದ್ದಿ ಮಾಡಿದ್ದಾರೆ. ಮಮುಟ್ಟಿಯವರಿಗೆ ತಮ್ಮ ಪರವಾಗಿ ಹಿಂದೂ ದೇವಾಲಯದಲ್ಲಿ ಪೂಜೆ ಆಗುತ್ತಿರುವ ಬಗ್ಗೆ ಮೊದಲೇ ಗೊತ್ತಿದ್ದರೆ ಕ್ಷಮೆಯಾಚಿಸಬೆಕು ಎಂದು ಹೇಳಿದ್ದಾರೆ.
ಇನ್ನು ಮುಂದುವರೆಸಿ ಮಮುಟ್ಟಿಗೆ ತಿಳಿಯದೇ ಮೋಹನ್ ಲಾಲ್ ಪೂಜೆ ಮಾಡಿಸಿದ್ದರೆ ತಪ್ಪಿಲ್ಲ. ಮೋಹನ್ ಲಾಲ್ ಅಯ್ಯಪ್ಪನ ಭಕ್ತಿಯಿಂದ ಮಾಡಿಸಿರಬಹುದು. ಆದರೆ ಮಮುಟ್ಟಿಗೆ ತಿಳಿಸಿ ಪೂಜೆ ಮಾಡಿದ್ದರೆ ಅದು ಇಸ್ಲಾಂವಿಗೆ ವಿರೋಧ ಎಂದಿದ್ದಾರೆ. ಅದರೊಂದಿಗೆ ಅಲ್ಲಾಹುವಿಗೆ ಹೊರತುಪಡಿಸಿ ಇತರರಿಗೆ ಏನನ್ನೂ ಅರ್ಪಿಸಬಾರದು. ಇದು ಇಸ್ಲಾಂ ನಿಯಮದ ಉಲ್ಲಂಘನೆ ಎಂದಿದ್ದಾರೆ. ಆದರೆ ಅಬ್ದುಲ್ಲಾ ಹೇಳಿಕೆಯನ್ನು ಮುಸ್ಲಿಮರೇ ವಿರೋಧಿಸಿದ್ದಾರೆ. ತಮ್ಮ ನೆಚ್ಚಿನ ನಟ ಹೇಗಾದರೂ ಗುಣಮುಖರಾದರೆ ಸಾಕು. ಇದರಲ್ಲಿ ತಪ್ಪು ಹುಡುಕಬಾರದು. ಎಲ್ಲಾ ಮತ ಧರ್ಮ ಒಂದೇ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Leave A Reply