ಮಗನ ಆರೋಗ್ಯ ಪ್ರಾರ್ಥಿಸಿ ಕೇಶಮುಂಡನ ಮಾಡಿಸಿದ ಡಿಸಿಎಂ ಪತ್ನಿ ತಿರುಪತಿ ಭಕ್ತೆ!

ಅವರ ಮಗ ರಜೆ ಕಾಲದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಲು ಸಿಂಗಾಪುರಕ್ಕೆ ತೆರಳಿದ್ದ. ಅವನ ವಯಸ್ಸು ಬರಿ ಎಂಟು ವರ್ಷ. ಅಲ್ಲಿ ಶಿಬಿರ ನಡೆಯುತ್ತಿದ್ದ ಕಟ್ಟಡವೇ ಅಗ್ನಿ ಅನಾಹುತಕ್ಕೆ ಸಿಲುಕಿತ್ತು. ಅದರಲ್ಲಿ ಇದ್ದ ಮಕ್ಕಳಲ್ಲಿ ಒಂದು ಮಗುವಿನ ಹೆಸರೇ ಮಾರ್ಕ್ ಶಂಕರ್. ಆ ಬಾಲಕ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಪುತ್ರ. ಯಾವಾಗ ಬೆಂಕಿ ಅವಘಡದ ಸುದ್ದಿ ಡಿಸಿಎಂ ಅವರಿಗೆ ಸಿಕ್ಕಿತೋ ತಕ್ಷಣ ಇಡೀ ಕುಟುಂಬ ಸಿಂಗಾಪುರಕ್ಕೆ ಧಾವಿಸಿದೆ. ಸಹೋದರ ಚಿರಂಜೀವಿ ಕೂಡ ತಮ್ಮನ ಜೊತೆ ಅಲ್ಲಿ ಇದ್ದರು. ಪವನ್ ಕಲ್ಯಾಣ್ ಪತ್ನಿ ಅನ್ನಾ ಅವರು ಮಗನ ರಕ್ಷಣೆಗಾಗಿ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದರು. ದೇವರ ದಯೆಯಿಂದ ಮಾರ್ಕ್ ಶಂಕರ್ ಪ್ರಾಣಾಪ್ರಾಯದಿಂದ ಪಾರಾಗಿದ್ದಾನೆ.
ಅದರಂತೆ ಅನ್ನಾ ತಿರುಪತಿ ದೇವಸ್ಥಾನಕ್ಕೆ ತೆರಳಿ ಅಲ್ಲಿ ತಾನು ಬಾಲಾಜಿ ತಿಮ್ಮಪ್ಪನ ಭಕ್ತೆ ಮತ್ತು ನಂಬಿಕೆ ಇಟ್ಟಿರುವುದಾಗಿ ಲಿಖಿತವಾಗಿ ಪ್ರಕ್ರಿಯೆಗಳನ್ನು ಸಂಪೂರ್ಣಗೊಳಿಸಿದ ನಂತರ ಅವರ ಕೇಶ ಮುಂಡನ ನಡೆದಿದೆ. ಅಲ್ಲಿ ಅವರ ಕುಟುಂಬದಿಂದ ಅನ್ನದಾನ ಸೇವೆಯೂ ನಡೆಯಿತು. ಅವರು ದೇವಳದ ಟ್ರಸ್ಟಿಗೆ ತಮ್ಮ ಮಗನ ಹೆಸರಿನಲ್ಲಿ ಅನ್ನದಾನ ಸೇವೆಗೆ 17 ಲಕ್ಷ ರೂಪಾಯಿಗಳನ್ನು ನೀಡಿದರು. ಅವರಿಗೆ ದೇವಳದ ವತಿಯಿಂದ ಸ್ವಾಗತಿಸಲಾಯಿತು. ಅವರಿಗೆ ತೀರ್ಥ ಪ್ರಸಾದ ನೀಡಿ ದೇವರ ಆರ್ಶೀವಾದ ಬೇಡಲಾಯಿತು. ಅವರು ಅನ್ನ ಛತ್ರಕ್ಕೆ ತೆರಳಿ ಭಕ್ತಾದಿಗಳಿಗೆ ಸಾಂಕೇತಿಕವಾಗಿ ಬಡಿಸಿದರು.
ಅನ್ನಾ ಮೂಲತ: ಕ್ರಿಶ್ಚಿಯನ್. ರಷ್ಯಾ ಮೂಲದವರು. ಪವನ್ ಕಲ್ಯಾಣ್ ಅವರನ್ನು ವರಿಸಿದ ನಂತರ ಅವರು ಹಿಂದೂ ಧರ್ಮದ ಆಚಾರ, ಸಂಪ್ರದಾಯಗಳನ್ನು ಪಾಲಿಸುತ್ತಿದ್ದಾರೆ. ಅವರು ತಿರುಪತಿ ತಿಮ್ಮಪ್ಪನ ಭಕ್ತೆಯಾಗಿದ್ದ ಕಾರಣ ಮಗನಿಗೆ ಬೆಂಕಿ ಅವಘಡದಲ್ಲಿ ತೊಂದರೆ ಆಗಿದೆ ಎಂದು ಅರಿತ ತಕ್ಷಣ ತಿರುಪತಿ ತಿಮ್ಮಪ್ಪನ ಮೊರೆ ಹೋಗಿದ್ದಾರೆ. ತಾಯಿಯ ಕೋರಿಕೆಯನ್ನು ವೆಂಕಟರಮಣ ಈಡೇರಿಸಿದ್ದಾನೆ. ನಂಬಿದವರ ಕೈ ಬಿಡಲ್ಲ ವೆಂಕಟರಮಣ ಎನ್ನುವುದು ಮತ್ತೆ ಸಾಬೀತಾಗಿದೆ. ಮಾರ್ಕ್ ಶಂಕರ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಈಗ ಹೈದ್ರಾಬಾದಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾರ್ಕ್ ಶಂಕರ್ ಶೀಘ್ರದಲ್ಲಿ ಸಂಪೂರ್ಣ ಗುಣಮುಖರಾಗಿ ಆಟಪಾಠಗಳಲ್ಲಿ ತೊಡಗಲಿ ಎನ್ನುವುದು ಪವನ್ ಕಲ್ಯಾಣ್ ಅವರ ಅಸಂಖ್ಯಾತ ಅಭಿಮಾನಿಗಳ ಹಾರೈಕೆ.
Leave A Reply