ಇನ್ನು ರೈಲಿನ ಒಳಗೆ ಎಟಿಎಂನಲ್ಲಿ ಹಣ ವಿದ್ ಡ್ರಾ!

ರೈಲಿನಲ್ಲಿ ಪ್ರಯಾಣಿಸುತ್ತಿದ್ದೀರಿ. ಅರ್ಜೆಂಟಾಗಿ ಹಣದ ಅವಶ್ಯಕತೆ ಇದೆ. ಪೆಟಿಎಂ, ಗೂಗಲ್ ಪೇ ಇರಬಹುದು. ಆದರೆ ವರ್ಕ್ ಆಗುತ್ತಾ ಇಲ್ಲ ಅಥವಾ ಹಾರ್ಡ್ ಕ್ಯಾಶ್ ಅಗತ್ಯ ಇದೆ. ಅಂತಹ ಸಂದರ್ಭದಲ್ಲಿ ಯಾರ ಬಳಿ ಹಣ ಕೇಳುವುದು ಎನ್ನುವುದಕ್ಕೆ ಈಗ ಉತ್ತರ ಸಿಕ್ಕಿದೆ. ಭಾರತೀಯ ರೈಲ್ವೆ ಮೊದಲ ಬಾರಿಗೆ ರೈಲಿನೊಳಗೆ ಎಟಿಎಂ ಸೌಲಭ್ಯ ಕಲ್ಪಿಸುವ ಮೂಲಕ ಪ್ರಯಾಣಿಕರಿಗೆ ಖುಷಿ ಸುದ್ದಿ ನೀಡಿದೆ. ಇನ್ನು ನಿಮಗೆ ಅಗತ್ಯ ಇದ್ದರೆ ರೈಲಿನೊಳಗೆ ಹಣವನ್ನು ವಿದ್ ಡ್ರಾ ಮಾಡಬಹುದು.
ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಇಂತಹ ಸೇವೆಯನ್ನು ಆರಂಭಿಸಲಾಗಿದೆ. ಮಹಾರಾಷ್ಟ್ರದಲ್ಲಿ ಮುಂಬೈ ಮತ್ತು ಮನಮಾಡ್ ನಡುವೆ ಸಂಚರಿಸುವ ಪಂಚವಟಿ ಎಕ್ಸಪ್ರೆಸ್ ರೈಲಿನ ಎಸಿ ಬೋಗಿಯಲ್ಲಿ ಎಟಿಎಂ ಅನ್ನು ಅಳವಡಿಸಲಾಗಿದೆ. ರೈಲಿನ 22 ಬೋಗಿಯ ಪ್ರಯಾಣಿಕರು ಸೌಲಭ್ಯ ಪಡೆಯಬಹುದು. ಅಂತರ್ಜಾಲ ಸಿಗ್ನಲ್ ಅತ್ಯಂತ ಕಡಿಮೆ ಇರುವ ಕೆಲವು ಪ್ರದೇಶಗಳನ್ನು ಹೊರತುಪಡಿಸಿದರೆ ಪ್ರಾಯೋಗಿಕ ಪರೀಕ್ಷೆ ವೇಳೆ ಮಾರ್ಗದುದ್ದಕ್ಕೂ ಎಟಿಎಂ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಎಟಿಎಂನಿಂದ ಕೇವಲ ಹಣ ವಿದ್ ಡ್ರಾ ಮಾತ್ರವಲ್ಲ, ಇದರ ಜೊತೆಗೆ ಚೆಕ್ ಬುಕ್ ಆರ್ಡರ್ ಪಡೆಯಬಹುದು ಮತ್ತು ಬ್ಯಾಂಕ್ ಸ್ಟೇಟ್ ಮೆಂಟ್ ಕೂಡ ಪಡೆಯಬಹುದು. ಇನ್ನು ಎಟಿಎಂ ಸುರಕ್ಷತೆ ದೃಷ್ಟಿಯಿಂದಲೂ ಕ್ರಮ ಕೈಗೊಳ್ಳಲಾಗಿದ್ದು, ಎಟಿಎಂಗೆ ಶಟರ್ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ 24 ಗಂಟೆಯೂ ಸಿಸಿಟಿವಿ ಕಣ್ಗಾವಲು ಇದಕ್ಕೆ ಇರಲಿದೆ. 1987 ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಎಟಿಎಂ ಜಾರಿಗೆ ಬಂದಿತು. ಅದಾಗಿ 38 ವರ್ಷಗಳ ಬಳಿಕ ರೈಲಿನಲ್ಲಿ ಎಟಿಎಂ ಅನುಷ್ಟಾನಕ್ಕೆ ಬಂದಿದ್ದು, ಯಶಸ್ವಿಯಾದರೆ ಇತರ ರೈಲಿನಲ್ಲಿಯೂ ಈ ಸೌಲಭ್ಯ ಸಿಗಲಿದೆ.
ಇವತ್ತಿನ ಆಧುನಿಕ ಯುಗದಲ್ಲಿ ಮೊಬೈಲಿನಿಂದಲೇ ಆರ್ಥಿಕ ವ್ಯವಹಾರಗಳು ಬಹುತೇಕ ನಡೆಯುತ್ತಿದ್ದು, ಎಟಿಎಂ ಕೇಂದ್ರಗಳು ಅಷ್ಟಾಗಿ ಉಪಯೋಗಕ್ಕೆ ಬರುವುದು ಕಡಿಮೆಯಾಗಿರುವ ಈ ಕಾಲದಲ್ಲಿ ರೈಲಿನಲ್ಲಿ ಇದರ ಉಪಯುಕ್ತತೆ ಎಷ್ಟರಮಟ್ಟಿಗೆ ಫಲಪ್ರದವಾಗುತ್ತದೆ ಎನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕು.
Leave A Reply