ಹೆಂಡತಿ ಕೊಂದ ಎಂದು ಗಂಡ ಜೈಲಿನಲ್ಲಿ! 5 ವರ್ಷಗಳ ಬಳಿಕ ಹೆಂಡತಿ ಪ್ರೇಮಿಯೊಂದಿಗೆ ಪತ್ತೆ!

ಇದು ಯಾವುದೇ ಸಿನೆಮಾಗಿಂತಲೂ ಕಡಿಮೆ ಇಲ್ಲದ ಲವ್ ಸ್ಟೋರಿ. ಇದನ್ನೇ ಇಟ್ಟುಕೊಂಡು ಒಂದು ಸಿನೆಮಾ ಮಾಡಿದರೆ ಬಹಳ ರಸವತ್ತಾದ ನೈಜಕಥೆಯನ್ನು ತೆರೆಯ ಮೇಲೆ ತೋರಿಸಿದ ಹಾಗೆ ಆಗುತ್ತದೆ. ಯಾಕೆಂದರೆ ಇದರಲ್ಲಿ ಎಲ್ಲಾ ರೀತಿಯ ಮಸಾಲೆ ಇದೆ. ಬದುಕೇ ಹೀಗೆನಾ ಅಥವಾ ಅವನ ಗ್ರಹಚಾರವೇ ಹಾಗಿತ್ತಾ? ಒಟ್ಟಿನಲ್ಲಿ ತಾನು ಏನೂ ತಪ್ಪು ಮಾಡದಿದ್ದು ಗಂಡಸೊಬ್ಬ ಜೈಲಿನಲ್ಲಿ ಕಳೆಯುವ ಪರಿಸ್ಥಿತಿ ಬಂದದ್ದೇ ಈ ಸುದ್ದಿಯ ಜೀವಾಳ.
ಅದು ಕರ್ನಾಟಕದ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಬಸವನಹಳ್ಳಿ ಎನ್ನುವ ಗ್ರಾಮ. ಸುರೇಶ್ ಎನ್ನುವ ಒಬ್ಬ ವ್ಯಕ್ತಿ ತನ್ನ ಹೆಂಡತಿಯೊಂದಿಗೆ ಖುಷಿಯಿಂದಲೇ ಜೀವನ ಸಾಗಿಸುತ್ತಿದ್ದ. 2019 ರ ತನಕ ಎಲ್ಲವೂ ಚೆನ್ನಾಗಿಯೇ ಇತ್ತು. ಒಂದು ದಿನ ಹೆಂಡತಿ ಅಚಾನಕ್ ಆಗಿ ಮನೆಯಿಂದ ನಾಪತ್ತೆಯಾಗುತ್ತಾಳೆ. ಸುರೇಶ್ ತನ್ನ ಕುಟುಂಬಸ್ಥರ, ಹಿತೈಷಿಗಳ ಸಹಕಾರದಿಂದ ಎಲ್ಲಾ ಕಡೆ ಹುಡುಕುತ್ತಾನೆ. ಆದರೆ ಆಕೆ ಸಿಗುವುದಿಲ್ಲ. ಮಕ್ಕಳಿಗಾಗಿಯಾದರೂ ಬಾ ಎಂದು ಆತ ಗೋಗರೆದರೂ ಆಕೆ ಬರುವುದಿಲ್ಲ. ನಂತರ ಬೇರೆ ದಾರಿ ಕಾಣದೇ ಆತ ತಾನು ಏನಾದರೂ ಮಾಡಿ ಅವಳನ್ನು ಮುಗಿಸಿರಬಹುದು ಎನ್ನುವ ಶಂಕೆಯಿಂದ ಪೊಲೀಸರು ತನ್ನನ್ನು ಬಂಧಿಸಬಹುದು ಎಂದು ಹೆದರಿ ಕುಶಾಲನಗರ ಠಾಣೆಯಲ್ಲಿ ದೂರು ಕೊಡುತ್ತಾನೆ. 2021 ರಲ್ಲಿ ನಾಪತ್ತೆ ಪ್ರಕರಣ ದಾಖಲಾಗುತ್ತದೆ.
2022 ರಲ್ಲಿ ಪೊಲೀಸರು ಸುರೇಶನನ್ನು ಕರೆದು ನಿನ್ನ ಹೆಂಡತಿ ಮಲ್ಲಿಗೆಯ ಶವದ ಗುರುತು ಪತ್ತೆ ಮಾಡು ಎಂದು ಕರೆಯುತ್ತಾರೆ. ಬೆಟ್ಟದಪುರ ಎನ್ನುವ ಜಾಗದಲ್ಲಿ ತನ್ನ ಅತ್ತೆಯೊಂದಿಗೆ ತೆರಳಿದ ಸುರೇಶ ಅಲ್ಲಿ ಸಿಕ್ಕಿದ ಅಸ್ಥಿಪಂಜರವನ್ನು ನೋಡಿ ಪತ್ನಿಯೆಂದೇ ಎನ್ನುವ ತೀರ್ಮಾನಕ್ಕೆ ಬರುತ್ತಾನೆ. ಅದರಂತೆ ಅದರ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ. ತಕ್ಷಣ ಪೊಲೀಸರು ಗಂಡನೇ ಪತ್ನಿಯ ಕೊಲೆ ಮಾಡಿದ್ದಾನೆ ಎನ್ನುವ ತೀರ್ಮಾನಕ್ಕೆ ಬಂದು ಸುರೇಶನನ್ನು ಬಂಧಿಸುತ್ತಾರೆ. ತಾನು ಪತ್ನಿಯನ್ನು ಕೊಂದಿಲ್ಲ ಎಂದು ಎಷ್ಟೇ ಬೇಡಿಕೊಂಡರೂ ಪೊಲೀಸರು ಕೇಳುವುದಿಲ್ಲ. ಹೆಂಡತಿಯ ಕೊಲೆ ಆರೋಪದಲ್ಲಿ ಗಂಡನನ್ನು ಬಂಧಿಸಿ ಜೈಲಿಗೆ ಅಟ್ಟಲಾಗುತ್ತದೆ.
ನಂತರ ಅಸ್ಥಿಪಂಜರದ ಡಿಎನ್ ಎ ಪರೀಕ್ಷೆ ಮಾಡಿ ಆ ಡೆಡ್ ಬಾಡಿಗೂ ಮಲ್ಲಿಗೆಯ ಕುಟುಂಬದ ಡಿಎನ್ ಎಗೂ ತಾಳೆಯಾಗುವುದಿಲ್ಲ ಎಂದು ಗೊತ್ತಾದ ನಂತರ ಅವನನ್ನು ಆರೋಪದಿಂದ ಮುಕ್ತನಾಗಿ ಮಾಡಿ ಕಳುಹಿಸಲಾಗುತ್ತದೆ.
ಅದರ ನಂತರ ನಡೆದದ್ದೇ ಕೌತುಕ. 2025 ರ ಎಪ್ರಿಲ್ 1 ರಂದು ಸುರೇಶನ ಪತ್ನಿ ಮಲ್ಲಿಗೆ ತನ್ನ ಪ್ರಿಯಕರನೊಂದಿಗೆ ಮಡಿಕೇರಿಯ ಹೋಟೇಲಿನಲ್ಲಿ ತಿಂಡಿ ತಿನ್ನುವುದನ್ನು ಸುರೇಶನ ಗೆಳೆಯರು ನೋಡುತ್ತಾರೆ.
ತಕ್ಷಣ ಆಕೆಯ ಇರುವಿಕೆಯ ಬಗ್ಗೆ ಆತನ ಗೆಳೆಯರು ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಆಕೆಯನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಈ ವಿಷಯದಲ್ಲಿ ಅವಳನ್ನು ವಿಚಾರಿಸಿದಾಗ ತಾನು ತನ್ನ ಗಂಡನಾಗಿದ್ದ ಸುರೇಶನ ಮನೆಯಿಂದ 25 – 30 ಕಿಲೋ ಮೀಟರ್ ದೂರ ಇರುವ ಇನ್ನೊಂದು ಮನೆಯಲ್ಲಿ ಬೇರೆ ಮದುವೆಯಾಗಿ ಜೀವನ ಮಾಡುತ್ತಿದ್ದೆ. ತನಗೆ ಸುರೇಶನನ್ನು ಬಂಧಿಸಿದ್ದ ವಿಷಯ ಗೊತ್ತೆ ಇರಲಿಲ್ಲ ಎಂದಿದ್ದಾಳೆ. ಆದರೆ ಇವಳ ಈ ಕೃತ್ಯದಿಂದ ಸುರೇಶ ಮಾತ್ರ ಒಂದೂವರೆ ವರ್ಷಕ್ಕಿಂತ ಹೆಚ್ಚು ಸಮಯ ಜೈಲಿನಲ್ಲಿ ಇರಬೇಕಾದದ್ದು ಮಾತ್ರ ಸತ್ಯ.
ಹಾಗಾದ್ರೆ ಮಲ್ಲಿಗೆಯ ಡೆಡ್ ಬಾಡಿ ಎಂದು ಪೊಲೀಸರು ತೋರಿಸಿದ್ದು ಯಾರ ಶವ? ಅದರ ವಾರಿಸುದಾರರು ಯಾರು?ಅದು ಕೊಲೆನಾ? ಹಾಗಾದ್ರೆ ಕೊಂದದ್ದು ಯಾರು? ಆ ಹತ್ಯೆಯನ್ನು ಸುರೇಶನ ತಲೆಗೆ ಕಟ್ಟಲಾಯಿತಾ? ಈಗ ಮಲ್ಲಿಗೆ ಸಿಕ್ಕಿದ ನಂತರ ಈ ಎಲ್ಲಾ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಸಮಗ್ರ ವರದಿ ನೀಡುವಂತೆ ನ್ಯಾಯಾಲಯ ಕೊಡಗು ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಆದೇಶಿಸಿದೆ.
Leave A Reply