ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!

ತಮಿಳಿನ ಖ್ಯಾತ ನಾಯಕ ನಟ ಜಯಂ ರವಿ ಎಂದೇ ಪ್ರಖ್ಯಾತರಾಗಿರುವ ರವಿ ಮೋಹನ್ ಹಾಗೂ ಅವರ ಪತ್ನಿ ಆರತಿ ಅವರ ವಿಚ್ಚೇದನ ಪ್ರಕರಣ ಈಗ ನ್ಯಾಯಾಲಯದ ಮೆಟ್ಟಲೇರಿದೆ. ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿರುವ ದಂಪತಿಯ ವಿಚಾರಣೆ ನ್ಯಾಯಾಲಯದಲ್ಲಿ ಆರಂಭವಾಗಿದೆ. ವಿಚ್ಚೇದನವಾದ ಬಳಿಕ ಕೌಟುಂಬಿಕ ನಿರ್ವಹಣೆಗಾಗಿ ತನಗೆ ಪ್ರತಿ ತಿಂಗಳು 40 ಲಕ್ಷ ರೂಪಾಯಿ ಪರಿಹಾರ ದೊರಕಿಸಿಕೊಡುವಂತೆ ಅವರು ಆರತಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ನ್ಯಾಯಾಲಯ ಇಬ್ಬರಿಗೂ ಕೌನ್ಸಿಲಿಂಗ್ ಮಾಡಿ ಹೊಂದಾಣಿಕೆ ಬರುವ ವಿಷಯದಲ್ಲಿ ಪ್ರಸ್ತಾಪಿಸಿತಾದರೂ ಜಯಂ ರವಿ ಸ್ಪಷ್ಟ ಮನವಿಯ ಮೂಲಕ ಆರತಿ ಜೊತೆಗೆ ಯಾವುದೇ ಹೊಂದಾಣಿಕೆ ಸಾಧ್ಯವಿಲ್ಲವೆಂದು ತಿಳಿಸಿರುವುದಾಗಿ ವರದಿ ಆಗಿದೆ. ರವಿಯವರ ಪರ ವಕೀಲರು ವಿಚ್ಚೇದನ ಕರುಣಿಸುವಂತೆ ಮನವಿ ಮಾಡಿದರು. ಇದರ ಬೆನ್ನಲ್ಲೇ ಆರತಿ ಜೀವನಾಂಶದ ಮೊತ್ತ ಕೇಳಿ ಮನವಿ ಸಲ್ಲಿಸಿದ್ದಾರೆ. ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜೂನ್ 12 ಕ್ಕೆ ಮುಂದೂಡಿದೆ.
ಜಯಂ ರವಿ ಕಳೆದ ವರ್ಷವೇ ತಾವು ವಿಚ್ಚೇದನ ಪಡೆಯುವುದಾಗಿ ಬಹಿರಂಗವಾಗಿ ಘೋಷಿಸಿದ್ದರು.
ಆದರೆ ಈ ಬಗ್ಗೆ ಬಹಿರಂಗವಾಗಿ ಮಾತನಾಡುವ ಮೊದಲು ಈ ಬಗ್ಗೆ ತಮ್ಮ ಬಳಿ ಯಾವುದೇ ಸಮಾಲೋಚನೆ ಮಾಡಿಲ್ಲ ಎಂದು ಆರತಿ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾಲಿವುಡ್ ಪ್ರಕಾರ ಗಾಯಕಿ ಕೆನಿಶಾ ಜೊತೆಗಿನ ಜಯಂ ರವಿಯವರ ಆಪ್ತತೆಯಿಂದಾಗಿ ಅವರ ಸಂಸಾರದಲ್ಲಿ ಬಿರುಕು ಬಿಟ್ಟಿದೆ ಎಂದು ಹೇಳಲಾಗಿದೆ. ಇಬ್ಬರೂ ಇತ್ತೀಚೆಗೆ ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ನಡುವೆ ಆರತಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದು, 18 ವರ್ಷಗಳ ದಾಂಪತ್ಯ ಜೀವನವನ್ನು ಪತಿ ಕಡೆಗಣಿಸಿದ್ದು, ಸಾಂಸಾರಿಕ ಜವಾಬ್ದಾರಿಗಳಿಂದ ನುಣುಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. ತಾನೀಗ ಮಕ್ಕಳ ಭವಿಷ್ಯಕ್ಕಾಗಿ ಹೋರಾಡಬೇಕಿದೆ ಎನ್ನುವ ಆರತಿ ಹೇಳಿಕೆಗೆ ತನ್ನ ಮೇಲೆ ಮಾನಸಿಕ ಮತ್ತು ಆರ್ಥಿಕ ನಿಯಂತ್ರಣ ತರಲು ಆರತಿ ನಿರಂತರ ಪ್ರಯತ್ನಿಸಿರುವುದಾಗಿ ಅದರಿಂದ ಬೇಸತ್ತಿದ್ದೇನೆ ಎಂದು ರವಿ ಹೇಳಿದ್ದಾರೆ. ಇಬ್ಬರೂ 2009 ರಲ್ಲಿ ಮದುವೆಯಾಗಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಆರತಿ ಮೂರನೇ ವ್ಯಕ್ತಿಯಿಂದಾಗಿ ಈ ಪರಿಸ್ಥಿತಿಯನ್ನು ತಾವು ಅನುಭವಿಸುತ್ತಿರುವುದಾಗಿ ಅದಕ್ಕೆ ತಮ್ಮ ಬಳಿ ಸಾಕ್ಷ್ಯ ಇರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ತಾವು ಹೆಚ್ಚಿಗೆ ಏನೂ ಹೇಳಲು ಇಚ್ಚಿಸುವುದಿಲ್ಲ ಎಂದು ಹೇಳಿರುವ ಆರತಿ, ತಮಗೆ ನ್ಯಾಯಾಂಗದ ಮೇಲೆ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ವಿವಿಧ ರೀತಿಯ ಕಮೆಂಟ್ ಗಳನ್ನು ಮಾಡುತ್ತಿದ್ದು, ಕೆಲವರು ಪ್ರತಿ ತಿಂಗಳು 40 ಲಕ್ಷ ರೂಪಾಯಿ ಕೇಳಿರುವ ಬಗ್ಗೆ ಟೀಕೆ ಮಾಡಿದ್ದಾರೆ. ಇನ್ನು ಕೆಲವರು ಸಮಂತಾ ತರಹ ಒಂದೂ ರೂಪಾಯಿ ಕೂಡ ಕೇಳದ ಹೆಣ್ಣಿನ ತರಹ ಇರಬೇಕು ಎಂದು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಮಹಿಳೆಯರು ಪ್ರಬಲರಾಗಿರಬೇಕು, ಹೀಗೆ ಹಣಕ್ಕಾಗಿ ಒತ್ತಾಯಿಸಬಾರದು ಎಂದು ಹೇಳಿದ್ದಾರೆ.
Leave A Reply