ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

ಪುನೀತ್ ರಾಜಕುಮಾರ್, ಗಾಯಕ ಕೆಕೆ, ಕಾಮಿಡಿಯನ್ ರಾಜು ಶ್ರೀವಾಸ್ತವ, ನಟ ಚಿರಂಜೀವಿ ಸರ್ಜಾ, ಸ್ಪಂದನಾ ರಾಘವೇಂದ್ರ, ಸಿದ್ಧಾರ್ಥ ಶುಕ್ಲಾ, ರಾಜ್ ಕೌಶಲ್ ಮತ್ತು ಈಗ ಶೆಫಾಲಿ ಜರಿವಾಲಾ ಹೀಗೆ ಪಟ್ಟಿ ಮಾಡಿದರೆ ಭಾರತೀಯ ಚಿತ್ರರಂಗದಲ್ಲಿ ಅನೇಕರು ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ. ಇದು ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ, ಸಾಮಾನ್ಯ ನಾಗರಿಕರು ಕೂಡ ಹೃದಯಾಘಾತ ಎನ್ನುವ ಸೈಲೆಂಟ್ ದಾಳಿಗೆ ಮೌನವಾಗಿಯೇ ಬಲಿಯಾಗುತ್ತಿದ್ದಾರೆ. ಇನ್ನು ಕರ್ನಾಟಕದ ಹಾಸನ ಜಿಲ್ಲೆವೊಂದರಲ್ಲಿಯೇ 40 ದಿನಗಳಲ್ಲಿಯೇ 19 ಜನರು ಹೃದಯಾಘಾತದಿಂದ ಉಸಿರು ಚೆಲ್ಲಿದ್ದಾರೆ. 18 ವರ್ಷಗಳಿಂದ ಸೈನಿಕನಾಗಿ ದೇಶಸೇವೆ ಮಾಡುತ್ತಿದ್ದ ಹಾಸನದ ಚನ್ನರಾಯಪಟ್ಟಣದ ಯೋಧ ಲೋಹಿತ್ ರಜೆಯಲ್ಲಿ ಊರಿಗೆ ಬಂದವರು ಗದ್ದೆಯಲ್ಲಿ ಉಳುಮೆ ಮಾಡುವಾಗಲೇ ಪ್ರಾಣ ಬಿಟ್ಟಿದ್ದಾರೆ. ಅವರಿಗೆ ವಯಸ್ಸು ಕೇವಲ 38. ಇನ್ನು ಹಾಸನದಲ್ಲಿ ಕಳೆದ ಒಂದು ತಿಂಗಳಲ್ಲಿ ಹೃದಯಾಘಾತದಿಂದ ನಿಧನರಾಗಿರುವ ವಯಸ್ಸನ್ನು ನೋಡಿ. ಹೆಚ್ಚಿನವರು 20 ರಿಂದ 30 ವರ್ಷದವರು.
ಇತ್ತೀಚೆಗೆ ಹಾಸನ ಜಿಲ್ಲೆಯ ಸರಕಾರಿ ಪ್ರೌಢಶಾಲೆಯೊಂದರಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದ ವರದಿ ನಿಜಕ್ಕೂ ಎಚ್ಚರಿಕೆ ಕರೆಗಂಟೆ ಆಗಿದೆ. ಶಾಲೆಯ 30 ಮಕ್ಕಳನ್ನು ಆಯ್ಕೆ ಮಾಡಿ ಅವರ ಮೇಲೆ ಹಲವು ಆರೋಗ್ಯ ಪರೀಕ್ಷೆಗಳನ್ನು ಮಾಡಲಾಗಿತ್ತು. ಬಿ.ಪಿ., ಶುಗರ್, ಥೈರಾಯ್ಡ್, ರಕ್ತಪರೀಕ್ಷೆಗಳು. ಈ ಪರೀಕ್ಷೆಗಳ ಬಳಿಕ ಶಾಕಿಂಗ್ ಮಾಹಿತಿ ಬಹಿರಂಗವಾಗಿದೆ. 30 ಮಕ್ಕಳಲ್ಲಿ 26 ಮಕ್ಕಳಿಗೆ ಹೃದಯಾಘಾತಕ್ಕೆ ಕಾರಣವಾಗಬಲ್ಲ ಲಕ್ಷಣಗಳು ಕಂಡುಬಂದಿವೆ.
ಒಬ್ಬ ವ್ಯಕ್ತಿಗೆ 35 ವರ್ಷದಲ್ಲಿ ಹೃದಯಾಘಾತದಿಂದ ಸಾವು ಸಂಭವಿಸುತ್ತದೆ ಎಂದರೆ ಅದು ತಕ್ಷಣವೇ ಆಗಿ ಮುಗಿದಿರುವಂತದ್ದಲ್ಲ. ಇದರ ಹಿಂದೆ ಆ ವ್ಯಕ್ತಿಯ 15 ನೇ ವರ್ಷದಿಂದಲೇ ದೇಹದಲ್ಲಿ ಬದಲಾವಣೆಗಳು ನಡೆಯುತ್ತಲೇ ಇರುತ್ತದೆ. ಬಾಲ್ಯದಲ್ಲಿ ಜಾಸ್ತಿ ಜಂಕ್ ಫುಡ್ ಗಳ ಬಳಕೆ, ಆಟಗಳಲ್ಲಿ ಅಥವಾ ದೈಹಿಕ ವ್ಯಾಯಾಮಗಳಲ್ಲಿ ಭಾಗವಹಿಸುವುದು ಕಡಿಮೆಯಾಗಿರುವುದು ಮತ್ತು ಹೆಚ್ಚೆಚ್ಚಯ ಮೊಬೈಲ್ ಬಳಕೆ ಒಟ್ಟಾರೆ ಮಕ್ಕಳ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆ ಆಗಿರುತ್ತದೆ. ಇದರ ಪರಿಣಾಮ ನಂತರ ಆ ವ್ಯಕ್ತಿ 25 ರಿಂದ 35 ನೇ ವಯಸ್ಸಿನಲ್ಲಿ ಇರುವಾಗ ಕಾಣಿಸಿಕೊಳ್ಳುತ್ತದೆ.
ಈಗಿನ ಜೀವನಶೈಲಿಯಲ್ಲಿ ಮಕ್ಕಳು ಮನೆಯಲ್ಲಿ ತಯಾರಿಸಿದ ಆಹಾರಕ್ಕಿಂತ ಪಿಝಾ – ಬರ್ಗರ್, ಕೂಲ್ ಡ್ರಿಂಕ್ಸ್ ನಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿರುತ್ತಾರೆ. ಇದರಿಂದಾಗಿಯೇ ಮಕ್ಕಳಲ್ಲಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಥೈರಾಯ್ಡ್ ಮತ್ತು ಹೃದಯ ರೋಗಕ್ಕೆ ಸಂಬಂಧಿಸಿದ ಅಂಶಗಳು ಇರುವುದು ಬೆಳಕಿಗೆ ಬಂದಿದೆ.
ಇದನ್ನು ತಪ್ಪಿಸಬೇಕಾದರೆ ನಾವು ಏನು ಮಾಡಬೇಕು ಎನ್ನುವುದನ್ನು ನೋಡುವುದಾದರೆ ಅವರಿಗೆ ಸಕ್ಕರೆ ಮಿಶ್ರಿತ ಚಾಕಲೇಟ್ ಸಹಿತ ವಿವಿಧ ವಸ್ತುಗಳನ್ನು ನೀಡುವುದನ್ನು ಬಾಲ್ಯದಿಂದಲೇ ನಿಲ್ಲಿಸುವುದು, ಮೊಬೈಲ್, ಟ್ಯಾಬ್, ಲ್ಯಾಪ್ ಟಾಪ್, ಟಿವಿಗಳ ಮುಂದೆ ಕುಳ್ಳಿರಿಸುವುದು ಹೀಗೆ ಮಾಡುವುದರಿಂದ ಮಕ್ಕಳಲ್ಲಿ ದೈಹಿಕ ವ್ಯಾಯಾಮದ ಕೊರತೆ ಕಂಡುಬರುತ್ತದೆ. ಹಿಂದೆ ಮಕ್ಕಳು ಮೈದಾನದಲ್ಲಿ ಚೆನ್ನಾಗಿ ಓಡಾಡಿ ಆಟವಾಡುತ್ತಿದ್ದರು. ಈಗ ಆ ಸಮಯವನ್ನು ಮೊಬೈಲ್ ತಿನ್ನುತ್ತಿದೆ. ಇನ್ನು ಪೋಷಕರು ಪಾಕಿಟ್ ಮನಿ ಕೊಟ್ಟು ಏನಾದರೂ ತಿನ್ನು ಎಂದು ಹೇಳುವುದರಿಂದ ಮೈದಾ ಮಿಶ್ರಿತ, ಸಕ್ಕರೆಯಿಂದ ತಯಾರಿಸಿದ, ಎಣ್ಣೆ ಪದಾರ್ಥಗಳನ್ನು ತಿಂದು ದೇಹದ ನರಗಳಲ್ಲಿ ಕೊಬ್ಬು ಸಂಗ್ರಹಣೆಗೆ ಕಾರಣ ಮಾಡಿಕೊಳ್ಳುತ್ತಿದ್ದಾರೆ.
ಇದರಿಂದ ಕೊಬ್ಬು ದೇಹದಲ್ಲಿ ಹೆಚ್ಚಾಗುತ್ತಾ ಹೃದಯ ಭಾಗದಿಂದ ಬೇರೆ ಭಾಗಗಳಿಗೆ ರಕ್ತವನ್ನು ಸಾಗಿಸುವ ರಕ್ತನಾಳಗಳನ್ನು ಮುಚ್ಚಿಹಾಕುತ್ತದೆ. ಈ ಕಾರಣದಿಂದ ಹೃದಯಾಘಾತ ಸಂಭವಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಒಟ್ಟಿನಲ್ಲಿ ಮಕ್ಕಳು ದೈಹಿಕ ಚಟುವಟಿಕೆಗಳನ್ನು ನಡೆಸಲು ಪೋಷಕರು ಪ್ರೇರೆಪಿಸುವುದು ಮತ್ತು ಹೆಚ್ಚಾಗಿ ಮನೆಯಲ್ಲಿ ತಯಾರಿಸಿದ ಆಹಾರವನ್ನೇ ತಿನ್ನುವಂತೆ ಪ್ರೋತ್ಯಾಹಿಸುವುದು ಬಹಳ ಪ್ರಮುಖವಾಗಿ ಪೋಷಕರು ನೋಡಬೇಕಾದ ವಿಷಯ.