ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!

ನಗರ ಸ್ವಚ್ಚ ಇರಬೇಕು ಎನ್ನುವ ಕಾರಣಕ್ಕೆ ಜನರು ರಸ್ತೆಬದಿಯಲ್ಲಿ ಕಸ ಹಾಕುವುದನ್ನು ತಡೆಯಲು ಸ್ಥಳೀಯಾಡಳಿತಗಳು ಬೇರೆ ಬೇರೆ ಉಪಾಯಗಳನ್ನು ಮಾಡುತ್ತವೆ. ಹಾಗೇ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಿದ ಐಡಿಯಾ ಏನೆಂದರೆ ಜನರು ರಸ್ತೆಬದಿಯಲ್ಲಿ ಕಸ ಬಿಸಾಡಿ ಹೋಗುವ ಸ್ಥಳದಲ್ಲಿ ದೇವರ ಫೋಟೋ ಅಥವಾ ಭಾರತ ಮಾತೆಯ ಫೋಟೋ ಇಡುವುದು. ಇದರಿಂದ ಕನಿಷ್ಟ ದೇವರ ಫೋಟೋ, ಭಾರತಾಂಬೆಯ ಫೋಟೋ ಇದೆ ಎನ್ನುವ ಕಾರಣಕ್ಕೆ ಜನ ಅಲ್ಲಿ ಕಸ ಹಾಕಲಿಕ್ಕಿಲ್ಲ ಎನ್ನುವುದು ಬಿಬಿಎಂಪಿ ಊಹೆಯಾಗಿತ್ತು. ಆದರೆ ಸಾರ್ವಜನಿಕರು ಏನು ಮಾಡುತ್ತಿದ್ದಾರೆ ಎಂದರೆ ಫೋಟೋಗಳ ಮೇಲೆನೆ ಕಸ ಹಾಕುತ್ತಿದ್ದಾರೆ ಮತ್ತು ಕೆಲವರು ಮೂತ್ರ ವಿಸರ್ಜನೆ ಕೂಡ ಮಾಡಿ ಹೋಗುತ್ತಿದ್ದಾರೆ. ಇದರಿಂದ ಉಳಿದವರಿಗೆ ಹಾಗೆ ಅನಾಚಾರ ಮಾಡುವವರಿಗೆ ಬೈಯುವುದೋ ಅಥವಾ ಹೀಗೆ ಫೋಟೋಗಳನ್ನು ಇಟ್ಟವರಿಗೆ ತೆಗಳುವುದೋ ಗೊತ್ತಾಗುತ್ತಿಲ್ಲ. ಅನೇಕರು ಹೀಗೆ ಫೋಟೋ ಇಟ್ಟ ಬಿಬಿಎಂಪಿಯವರದ್ದೇ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆಬದಿಗಳಲ್ಲಿ ಬ್ಲಾಕ್ ಸ್ಪಾಟ್ ಗಳೆಂದು ಕರೆಯುವ ಜಾಗಗಳು ಪ್ರತಿ ನಗರಗಳಲ್ಲಿಯೂ ಇವೆ. ಕೆಲವು ನಗರಗಳಲ್ಲಿ ಏನು ಮಾಡಿದ್ದಾರೆ ಎಂದರೆ ಅಂತಹ ಪ್ರದೇಶಗಳಲ್ಲಿ ಕೆಲವರು ಸ್ಥಳೀಯ ಸಂಘಟನೆಗಳ ಮೂಲಕ ಗಿಡಗಳನ್ನು ಬೆಳೆಸಿ ಆಕರ್ಷಿಯವಾಗಿಸಿದ್ದಾರೆ. ಇನ್ನು ಕೆಲವು ಕಡೆ ಪೇಂಟ್ ಬಳಸಿ ಆ ಸ್ಥಳವನ್ನೇ ಸುಂದರವನ್ನಾಗಿಸಿದ್ದಾರೆ. ಇನ್ನು ಕೆಲವು ಕಡೆ ಇಲ್ಲಿ ಕಸ ಹಾಕಿದವರಿಗೆ ಅದು ಆಗುತ್ತದೆ, ಇದು ಆಗುತ್ತದೆ ಎಂದು ಹೆದರಿಸುವ ವಾಕ್ಯಗಳನ್ನು ಬರೆಸಿದ್ದಾರೆ. ಆದರೆ ಬಿಬಿಎಂಪಿ ಒಂದು ಹೆಜ್ಜೆ ಮುಂದೆ ಹೋಗಿ ಇಂತಹ ಬ್ಲಾಕ್ ಸ್ಪಾಟ್ ಗಳಲ್ಲಿ ದೇವರ ಫೋಟೋ, ಭಾರತಾಂಬೆಯ ಫೋಟೋ ಇಟ್ಟರೆ ಜನ ಕಸ ಹಾಕಲು ಹಿಂಜರಿಯುತ್ತಾರೆ, ಧಾರ್ಮಿಕ ಪ್ರಜ್ಞೆ ಕಾಡುತ್ತದೆ ಎಂದು ಅಂದುಕೊಂಡಿದೆ. ಅದರೆ ಬಿಬಿಎಂಪಿ ಮಾಡಿರುವ ಈ ಕೆಲಸದ ವಿರುದ್ಧ ಈಗ ಧಾರ್ಮಿಕ ಮುಂದಾಳುಗಳೇ ತಿರುಗಿ ಬಿದ್ದಿದ್ದಾರೆ.
ಬೆಂಗಳೂರಿನ ಜಯನಗರ ವ್ಯಾಪ್ತಿಯ ಕನಕಪುರ ರಸ್ತೆಯಲ್ಲಿ ಭಾರತ ಮಾತೆಯ ಫೋಟೋ ಒಳಗೊಂಡ ಫ್ಲೆಕ್ಸ್ ಅನ್ನು ಬಿಬಿಎಂಪಿ ಬ್ಲಾಕ್ ಸ್ಪಾಟ್ ನಲ್ಲಿ ಹಾಕಿದೆ. ಅದರಲ್ಲಿ ” ಇಲ್ಲಿ ಕಸವನ್ನು ಹಾಕಬಾರದು, ಕಸ ಹಾಕಿದವರಿಗೆ 5000 ರೂ ದಂಡ ಹಾಕಲಾಗುವುದು” ಎಂದು ಬರೆಯಲಾಗಿದೆ. ಇದೇ ವಿಷಯ ಈಗ ಬಿಬಿಎಂಪಿ ಮಾರ್ಶಲ್ ಹಾಗೂ ಸಾರ್ವಜನಿಕರ ನಡುವೆ ಘರ್ಷಣೆಗೆ ಕಾರಣವಾಗಿದೆ.
ಹಿಂದೂ ಸಂಘಟನೆ, ರಾಷ್ಟ್ರರಕ್ಷಣೆ ಪಡೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿಡಿಯೋ ಹಂಚಿಕೊಂಡಿದ್ದಾರೆ ” ದೇವರ ಫೋಟೋ ಬಳಸುತ್ತಾರಂತೆ! ಬಳಸಬಾರದು ಅಂತ ಹೇಳೋದಕ್ಕೆ ನೀನು ಯಾರು? ಅಂತ ಕೇಳುತ್ತಾನೆ ಆ ಬಿಬಿಎಂಪಿ ಮಾರ್ಶಲ್? ಅನ್ಯ ಮತದ ದೇವರ ಫೋಟೋ ಹಾಕುವ ತಾಕತ್ ಬಿಬಿಎಂಪಿಗೆ ಇದಿಯಾ? ಆರ್ ಎಸ್ ಎಸ್ ತನ್ನ ಶಾಖೆಗಳಲ್ಲಿ ಪೂಜೆ ಮಾಡುವ ಕೈಯಲ್ಲಿ ಭಗವಧ್ವಜ ಹಿಡಿದಿರುವ ಭಾರತಾಂಬೆಯ ಚಿತ್ರವನ್ನು ಬೇಕೆಂದು ಕಸ ಹಾಕುವ ಮತ್ತು ಮೂತ್ರ ವಿಸರ್ಜನೆ ಮಾಡುವ ಜಾಗದಲ್ಲಿ ಹಾಕುತ್ತಿರುವ ಕಾಂಗ್ರೆಸ್ ಸರಕಾರ! ತಪ್ಪು ಕಂಡಾಗ ಪ್ರಶ್ನಿಸುವ ಧೈರ್ಯ ಪ್ರತಿಯೊಬ್ಬ ಹಿಂದೂವಿಗೂ ಬರಬೇಕು, ಆಗ ಮಾತ್ರ ಬದಲಾವಣೆ ಸಾಧ್ಯ, ರಾಷ್ಟ್ರ ರಕ್ಷಣಾ ಪಡೆ” ಎಂದು ಬರೆದಿದ್ದಾರೆ.
ಒಟ್ಟಿನಲ್ಲಿ ಬಿಬಿಎಂಪಿ ಏನೋ ಮಾಡಲು ಹೋಗಿ ಅದು ಈಗ ಏನೋ ಆಗಿ ವಿವಾದಕ್ಕೆ ಕಾರಣವಾಗಿದೆ.