ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!

ಇದು ಕೇರಳದ ಮಲ್ಲಪುರಂನಲ್ಲಿ ನಡೆದ ಹೃದಯ ವಿದ್ರಾವಕ ಘಟನೆ. ಒಂದು ವರ್ಷದ ಮಗುವಿಗೆ ಜಾಂಡಿಸ್ ಬಂದಿತ್ತು. ಆದರೆ ಮಗುವಿನ ಪೋಷಕರು ಇಂದಿನ ಕಾಲದ ಚಿಕಿತ್ಸೆ ನೀಡಲು ಬಯಸಲಿಲ್ಲ. ಅವರು ಆಧುನಿಕ ಚಿಕಿತ್ಸೆ ನೀಡಲು ತಮ್ಮ ಧಾರ್ಮಿಕ ನಂಬಿಕೆ ಒಪ್ಪುತ್ತಿಲ್ಲ. ಆದ್ದರಿಂದ ಚಿಕಿತ್ಸೆ ನೀಡದ ನಿರ್ಧಾರಕ್ಕೆ ಬಂದಿದ್ದರು.
ಆದ್ದರಿಂದ ಎಸೆನ್ ಈರ್ಹಾನ್ ಎನ್ನುವ ಆ ಮಗುವಿಗೆ ಯಾವುದೇ ಚಿಕಿತ್ಸೆ ಸಿಗಲಿಲ್ಲ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಮಗುವಿನ ಹೆತ್ತವರಾದ ನವಾಝ್ ಹಾಗೂ ಹೀರಾ ಹರೇರಾ ಕೊಟ್ಟಾಕಲ್ ನಲ್ಲಿ ವಾಸಿಸುತ್ತಿದ್ದು, ಚಿಕಿತ್ಸೆ ಸಿಗದೇ ಮಗು ಜೂನ್ 27 ರಂದು ಮೃತಪಟ್ಟಿದೆ. ಮಗುವಿನ ತಾಯಿ ಆಕ್ಯುಪಂಚರ್ ಪರಿಣಿತರಾಗಿದ್ದಾರೆ. ಅವರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಇಂದಿನ ಚಿಕಿತ್ಸಾ ಕ್ರಮಗಳ ಬಗ್ಗೆ ವಿರೋಧವನ್ನು ವ್ಯಕ್ತಪಡಿಸುತ್ತಾ ಬಂದಿರುವುದು ಪೊಲೀಸರ ಗಮನಕ್ಕೆ ಬಂದಿದೆ.
ಅದರ ನಂತರ ಸ್ಥಳೀಯಾಡಳಿತದ ಅಧಿಕಾರಿಗಳು ಇವರನ್ನು ವಿಚಾರಿಸಿದಾಗ ಹೊರಗೆ ಬಂದಿರುವ ಮಾಹಿತಿ ನಿಜಕ್ಕೂ ಗಾಬರಿ ಹುಟ್ಟಿಸುವಂತದ್ದು. ಏನೆಂದು ಹೇಳಿದರೆ ಒಂದು ವರ್ಷದ ಮಗುವಿಗೆ ಇಲ್ಲಿಯ ತನಕ ಲಸಿಕೆ ಆಗಿರಲೇ ಇಲ್ಲ.
ಮಗು ಸತ್ತ ತಕ್ಷಣ ಅದರ ಹೆತ್ತವರು ಮಗುವಿನ ದಫನ ಕಾರ್ಯ ನೆರವೇರಿಸಿದ್ದಾರೆ. ಆದರೆ ಮಗುವಿನ ಸಾವಿಗೆ ವೈದ್ಯಕೀಯವಾಗಿ ಅದರ ಕಾಯಿಲೆಯನ್ನು ನಿರ್ಲಕ್ಷಿಸಿದ್ದೇ ಕಾರಣ ಎಂದು ಪೊಲೀಸರಿಗೆ ತಿಳಿದ ನಂತರ ಮಗುವಿನ ಶವವನ್ನು ಮತ್ತೆ ಹೊರಗೆ ತೆಗೆಯಲಾಗಿದೆ. ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು, ಪೋಸ್ಟ್ ಮಾರ್ಟ್ ವರದಿ ಕೈ ಸೇರಿದ ಬಳಿಕ ಮುಂದಿನ ಕಾನೂನು ಪ್ರಕ್ರಿಯೆ ನಡೆಸುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಗುವಿನ ಹೆತ್ತವರಿಂದ ತಿಳಿದು ಬಂದ ಮಾಹಿತಿಯ ಪ್ರಕಾರ ಮಗುವನ್ನು ಮಳೆಯ ನೀರಿಗೆ ಹಿಡಿದರೆ ಜಾಂಡೀಸ್ ಗುಣಮುಖವಾಗುತ್ತದೆ ಎಂದು ಅವರು ನಂಬಿದ್ದಾರೆ. ಆದರೆ ಹಸುಳೆಗೆ ಈ ವಿಷಯದಲ್ಲಿ ಯಾವುದೇ ಚಿಕಿತ್ಸೆ ನೀಡಲಾಗಿಲ್ಲ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. ಒಟ್ಟಿನಲ್ಲಿ ವಿದ್ಯಾವಂತರಾದರೆ ಸಾಕಾಗುವುದಿಲ್ಲ. ವಾಸ್ತವ ಮತ್ತು ಪ್ರಸ್ತುತದ ನಡುವೆ ಮನುಷ್ಯ ಬದುಕಬೇಕಾಗಿದೆ ಎನ್ನುವುದು ಸತ್ಯ.