ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ – ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!

ಕೊಲ್ಕತ್ತಾ ಉಚ್ಚ ನ್ಯಾಯಾಲಯ ಭಾರತೀಯ ಕ್ರಿಕೆಟ್ ವೇಗಿ ಮೊಹಮ್ಮದ್ ಶಮಿಗೆ ವಿಚ್ಚೇದನದ ಪ್ರಕರಣದಲ್ಲಿ ಮಹತ್ವದ ಆದೇಶ ನೀಡಿದೆ. ಪ್ರಕರಣ ಅಂತಿಮ ಆದೇಶ ಹೊರಬೀಳುವ ತನಕ ಪ್ರತಿ ತಿಂಗಳು ನಾಲ್ಕು ಲಕ್ಷ ರೂಪಾಯಿಗಳನ್ನು ಪತ್ನಿಗೆ ನೀಡಬೇಕೆಂದು ಸೂಚಿಸಿದೆ.
ನ್ಯಾಯಮೂರ್ತಿ ಡಾ. ಅಜೋಯ್ ಕುಮಾರ್ ಮುಖರ್ಜಿ ಈ ಆದೇಶವನ್ನು ನೀಡಿದ್ದಾರೆ. ಈ ಹಿಂದೆ ಕೆಳನ್ಯಾಯಾಲಯ ಪ್ರತಿ ತಿಂಗಳು 1,30,000 ರೂಪಾಯಿ ನೀಡುವಂತೆ ಸೂಚಿಸಿತ್ತು. ಅದರ ವಿರುದ್ಧ ಶಮಿ ಪತ್ನಿ ಹೈಕೋರ್ಟ್ ಮೆಟ್ಟಲೇರಿದ್ದರು. ಹೈಕೋರ್ಟ್ ನೀಡಿರುವ ಆದೇಶದಲ್ಲಿ ನಾಲ್ಕು ಲಕ್ಷ ರೂಪಾಯಿಗಳಲ್ಲಿ 1,50,000 ರೂಪಾಯಿ ಅರ್ಜಿದಾರ (1) ಅಂದರೆ ಪತ್ನಿಗೆ ಹಾಗೂ 2,50,000 ರೂ ಅರ್ಜಿದಾರ (2) ಅಂದರೆ ಮಗಳಿಗೆ ನೀಡಬೇಕಾಗಿ ಆದೇಶಿಸಲಾಗಿದೆ. ಇದು ಇಬ್ಬರ ಆರ್ಥಿಕ ಭದ್ರತೆಗೆ ಅತ್ಯಂತ ಅಗತ್ಯವಾಗಿದ್ದು, ಪ್ರಕರಣದ ವಿಚಾರಣೆ ಸಂಪೂರ್ಣ ಮುಗಿದು ಅಂತಿಮ ಆದೇಶ ನೀಡುವ ಮೊದಲು ಇದೇ ತೀರ್ಪನ್ನು ಪಾಲಿಸಬೇಕಾಗಿ ಹೈಕೋರ್ಟ್ ಸೂಚಿಸಿದೆ. ಈ ಮಧ್ಯಂತರ ಆದೇಶ ಅರ್ಜಿದಾರರು ಪ್ರಕರಣವನ್ನು ದಾಖಲಿಸಿದ ದಿನದಿಂದಲೇ ಅನ್ವಯವಾಗುತ್ತದೆ ಎಂದು ಹೇಳಲಾಗಿದೆ. ಶಮಿ ಪತ್ನಿ ತನ್ನ ಗಂಡನ ವಿರುದ್ಧ ಮಹಿಳಾ ರಕ್ಷಣೆ ಮತ್ತು ಕೌಟುಂಬಿಕ ದೌರ್ಜನ್ಯ ವಿರೋಧಿ ಕಾಯ್ದೆ – ಸೆಕ್ಷನ್ 23 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.
ಒಂದು ವೇಳೆ ಶಮಿ ತಮ್ಮ ಮಗಳ ಶಿಕ್ಷಣಕ್ಕಾಗಿ ಹೆಚ್ಚು ಪಾವತಿಸಲು ಇಚ್ಚಿಸಿದ್ದಲ್ಲಿ ಅದಕ್ಕೆ ಅವಕಾಶವಿದೆ ಎಂದು ನ್ಯಾಯಾಲಯ ತಿಳಿಸಿದೆ. ಈ ಆದೇಶಕ್ಕಿಂತ ಮೊದಲು ಆರಂಭದಲ್ಲಿ ಈ ಪ್ರಕರಣ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ದಾಖಲಾದಾಗ ನ್ಯಾಯಾಧೀಶರು ಮಗಳ ಶಿಕ್ಷಣದ ಖರ್ಚಿಗೆ 80000 ರೂ ನೀಡಿದರೆ ಸಾಕು, ಪತ್ನಿಗೆ ಪ್ರಕರಣ ಮುಗಿಯುವ ತನಕ ಏನೂ ಪರಿಹಾರ ಧನ ಕೊಡುವ ಅಗತ್ಯವಿಲ್ಲ ಎಂದು ತೀರ್ಪು ನೀಡಿದ್ದರು.
ಶಮಿ ಅವರು ಹಸೀನಾ ಜಹಾನ್ ಅವರನ್ನು 2014 ರಲ್ಲಿ ಮದುವೆಯಾಗಿದ್ದರು. ಅವರಿಗೆ 2015 ರಲ್ಲಿ ಹೆಣ್ಣುಮಗಳ ಜನನವಾಗಿತ್ತು. ಹಸೀನಾ ಜಹಾನ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, ಅವರಿಗೆ ಮೊದಲ ಪತಿಯಿಂದ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಎಂದು ಹೇಳಲಾಗುತ್ತಿದೆ. 2018 ರಲ್ಲಿ ಮೊಹಮ್ಮದ್ ಶಮಿ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆಕೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಪರಿಹಾರ ಧನವನ್ನು ಕೇಳಿದ್ದರು. ಮ್ಯಾಜಿಸ್ಟೇಟ್ ಕೋರ್ಟ್ ನಲ್ಲಿ ಪರಿಹಾರ ಧನವನ್ನು ಕೋರಿ ಆಕೆ ಸಲ್ಲಿಸಿದ ಅರ್ಜಿಯಲ್ಲಿ ಪ್ರಕರಣ ಮುಗಿಯುವ ತನಕ ಪ್ರತಿ ತಿಂಗಳು ಹತ್ತು ಲಕ್ಷ ರೂಪಾಯಿ ನೀಡುವಂತೆ ಅದರಲ್ಲಿ 7 ಲಕ್ಷ ತನಗೆ ಮತ್ತು 3 ಲಕ್ಷ ಮಗಳಿಗೆ ಎಂದು ನ್ಯಾಯಾಲಯದಲ್ಲಿ ಕೋರಿದ್ದಳು. ಆದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅದಕ್ಕೆ ಒಪ್ಪಿರಲಿಲ್ಲ. ಅದಕ್ಕೆ ಆಕೆ ಹೈಕೋರ್ಟ್ ಕದ ತಟ್ಟಿದ್ದಳು.
ಹೈಕೋರ್ಟ್ ತನ್ನ ತೀರ್ಪಿನಲ್ಲಿ ” ಪತಿಯ ಆದಾಯ, ಆರ್ಥಿಕ ಸಿರಿವಂತಿಗೆ, ದುಡಿಯುವ ತಾಕತ್ತನ್ನು ಎಲ್ಲವನ್ನು ಪರಿಗಣಿಸಿ ಆತ ಹೆಚ್ಚಿನ ಪರಿಹಾರ ಧನವನ್ನು ನೀಡಲು ಶಕ್ತನಾಗಿರುವುದಾಗಿ ತಿಳಿದುಬರುತ್ತದೆ. ಇನ್ನು ಪತಿಯನ್ನು ತೊರೆದ ನಂತರ ಪತ್ನಿ ಇನ್ನೊಂದು ಮದುವೆ ಆಗದೇ ಸ್ವತಂತ್ರ ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ಹಾಗಿರುವಾಗ ಅವರಿಗೆ ಹಾಗೂ ಮಗಳಿಗೆ ಗಂಡ/ತಂದೆಯ ಜೊತೆ ಇರುವಾಗ ಯಾವ ರೀತಿಯ ಜೀವನ ನಡೆಸಲು ಸಾಧ್ಯವಾಗುತ್ತಿತ್ತೋ ಅದೇ ಈಗಲೂ ಅನುಭವಿಸಲು ಹಕ್ಕಿದೆ. ಅದಕ್ಕಾಗಿ ಹೆಚ್ಚಿನ ಮೊತ್ತ ನೀಡಲು ಕೋರ್ಟಿ ಆದೇಶಿಸುತ್ತಿದೆ. ಇದರಿಂದ ಆಕೆಯ ಮತ್ತು ಮಗಳ ಜೀವನದ ಭದ್ರತೆಯೂ ಸಾಧ್ಯವಾಗಲಿದೆ” ಎಂದು ತೀರ್ಪು ನೀಡಿದೆ.
ಒಟ್ಟಿನಲ್ಲಿ ಮೊಹಮ್ಮದ್ ಶಮಿಯವರಿಗೆ ಈ ವಿಚ್ಚೇದನ ಪ್ರಕರಣದಲ್ಲಿ ಅಘಾತಕಾರಿ ಹಿನ್ನಡೆ ಎಂದೇ ಹೇಳಬಹುದು.