ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?

ದೆಹಲಿಯ ನಾಗರಿಕರು ತಮ್ಮ ಐಷಾರಾಮಿ ರೇಂಜ್ ರೋವರ್ ಮತ್ತು ಇತರ ವಾಹನಗಳನ್ನು ಅತೀ ಕಡಿಮೆ ದರಕ್ಕೆ ಮಾರಬೇಕಾದ ಅನಿವಾರ್ಯ ಪರಿಸ್ಥಿತಿಗೆ ಬಂದು ತಲುಪಿದ್ದಾರೆ. ಯಾಕೆಂದರೆ ಹತ್ತು ವರ್ಷ ದಾಟಿರುವ ಡಿಸೀಲ್ ವಾಹನಗಳಿಗೆ ಹಾಗೂ 15 ವರ್ಷ ದಾಟಿರುವ ಪೆಟ್ರೋಲ್ ವಾಹನಗಳಿಗೆ ಅಲ್ಲಿ ಇನ್ನು ಮುಂದೆ ಇಂಧನ ಸಿಗುವುದಿಲ್ಲ. ಪೆಟ್ರೋಲ್ ಪಂಪ್ ಗಳು ಅಷ್ಟು ಹಳೆಯ ವಾಹನಗಳಿಗೆ ಇಂಧನ ನೀಡಬಾರದಾಗಿ ಅಲ್ಲಿನ ರಾಜ್ಯ ಸರಕಾರ ರಚಿಸಿದೆ. ದೆಹಲಿ ನಗರದಲ್ಲಿ ವಿಪರೀತವಾಗಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಪರಿಣಾಮ ಇಂತಹ ನಿರ್ಧಾರ ಕೈಗೊಳ್ಳಬೇಕಾದ ಒತ್ತಡ ಅಲ್ಲಿ ರಾಜ್ಯ ಸರಕಾರದ ಮುಂದಿತ್ತು.
ಈಗಾಗಲೇ ಪೆಟ್ರೋಲ್ ಪಂಪ್ ಗಳಲ್ಲಿ ಕ್ಯಾಮೆರಾ ಹಾಗೂ ಅಲಾರಾಂ ಅಳವಡಿಸಲಾಗಿದ್ದು, ಬ್ಯಾನ್ ಮಾಡಲ್ಪಟ್ಟಿರುವ ಹಳೆಯ ವಾಹನಗಳಿಗೆ ಇಂಧನ ತುಂಬಿಸಿದರೆ ತಕ್ಷಣ ಅವು ಅದನ್ನು ಸೆರೆಹಿಡಿಯುತ್ತವೆ. ಇನ್ನು ಸರಕಾರದ ಘೋಷಣೆಯನ್ನು ಅನುಷ್ಟಾನ ಮಾಡುವ ತಂಡ ರಚನೆಯಾಗಿದ್ದು, ಕೆಲವು ಪ್ರಮುಖ ಪೆಟ್ರೋಲ್ ಪಂಪ್ ಗಳಲ್ಲಿ ಅದರ ಸದಸ್ಯರು ಉಪಸ್ಥಿತರಿದ್ದು, ಅವರು ಪರಿಶೀಲನೆ ಮಾಡಲಿದ್ದಾರೆ. ಎಐ ಸಾಮರ್ತ್ಯದ ಕ್ಯಾಮೆರಾಗಳನ್ನು ಮತ್ತು ಆಧುನಿಕ ಯಂತ್ರಗಳನ್ನು ಪೆಟ್ರೋಲ್ ಪಂಪ್ ಗಳಲ್ಲಿ ಅಳವಡಿಸಲಾಗಿದ್ದು, ಅದರಿಂದಲೂ ಹಳೆಯ ವಾಹನಗಳಿಗೆ ಇಂಧನ ತುಂಬಿಸಿದರೆ ಮಾಹಿತಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹೋಗುತ್ತದೆ.
ದೆಹಲಿಯಲ್ಲಿ ಸುಮಾರು 350 ಇಂಧನ ಪಂಪ್ ಗಳಲ್ಲಿ ಸರಕಾರ ಸ್ವಯಂ ನಂಬರ್ ಪ್ಲೇಟ್ ಓದಲ್ಪಡುವ ಕ್ಯಾಮೆರಾಗಳನ್ನು ಅಳವಡಿಸಿದ್ದು, ಹಳೆಯದಾದ ವಾಹನಗಳು ಇಂಧನ ತುಂಬಲು ಬಂದರೆ ಅದಕ್ಕೆ ಇಂಧನ ತುಂಬಲು ಸಾಧ್ಯವಿಲ್ಲ ಎನ್ನುವ ಸಂದೇಶ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಸ್ವಯಂಚಾಲಿತ ಹೂಟರ್ ವ್ಯವಸ್ಥೆ ( ಅಗತ್ಯ ಸಂದರ್ಭದಲ್ಲಿ ಶಬ್ದ ಹೊರಡಿಸುವ ಯಂತ್ರ) ಎಲ್ಲಾ ಕಡೆ ಅಳವಡಿಸಲಾಗಿದ್ದು, ಒಂದು ವೇಳೆ ಹಳೆಯ ವಾಹನಗಳು ಆಗಮಿಸಿದರೆ ಅದರ ನಂಬರ್ ಪ್ಲೇಟ್ ಓದಿಯೇ ಅವು ಧ್ವನಿಯನ್ನು ಮೊಳಗಿಸಿ ಇಂಧನ ತುಂಬದಂತೆ ಎಚ್ಚರಿಕೆ ನೀಡುತ್ತವೆ.
ಇದರೊಂದಿಗೆ ಪಂಪ್ ಗಳ ಸಿಬ್ಬಂದಿಗಳಿಗೂ ಅಂತಹ ಹಳೆಯ ವಾಹನಗಳು ಬಂದರೆ ಇಂಧನ ತುಂಬಿಸದಂತೆ ಖಡಕ್ ಸೂಚನೆ ನೀಡಲಾಗಿದೆ. ಇನ್ನು ಕೆಲವು ಸಾರಿಗೆ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಪ್ರಮುಖ ಆಯಕಟ್ಟಿನ ಪಂಪ್ ಗಳಲ್ಲಿ ಕಣ್ಗಾವಲು ಇಟ್ಟಿದ್ದು, ನಿಗಾ ವಹಿಸುವ ವ್ಯವಸ್ಥೆಯೂ ನಡೆದಿದೆ.
ಈಗಾಗಲೇ 2018 ರ ಸುಪ್ರೀಂಕೋರ್ಟ್ ಆದೇಶ ಜಾರಿಯಲ್ಲಿದ್ದು, 10 ವರ್ಷ ದಾಟಿದ ಡಿಸೀಲ್ ವಾಹನಗಳು ಹಾಗೂ 15 ವರ್ಷ ದಾಟಿದ ಪೆಟ್ರೋಲ್ ವಾಹನಗಳು ದೆಹಲಿಯಲ್ಲಿ ಓಡಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಈಗ ಸರಕಾರ ಅಂತಹ ವಾಹನಗಳಿಗೆ ಇಂಧನವನ್ನೇ ತುಂಬಿಸುವುದಿಲ್ಲ ಎಂದು ಹೇಳಿರುವುದರಿಂದ ಅಂತಹ ವಾಹನಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಅಷ್ಟು ಹಳೆಯದಾದ ವಾಹನಗಳನ್ನು ಕಡಿಮೆ ದರಕ್ಕೆ ಬೇರೆ ರಾಜ್ಯಗಳಿಗೆ ಮಾರಬೇಕಾದ ಪರಿಸ್ಥಿತಿ ಅವರ ಮುಂದಿದೆ.