ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!

ಬಿಹಾರ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳು ಬೇರೆ ಬೇರೆ ರೀತಿಯಲ್ಲಿ ಮತದಾರರನ್ನು ಸೆಳೆಯಲು ವಿವಿಧ ತಂತ್ರ ಹೂಡುತ್ತಿವೆ. ಅದರಲ್ಲಿ ಕಾಂಗ್ರೆಸ್ ಪಕ್ಷ ಯೋಜಿಸಿರುವ ಪ್ಲಾನ್ ಬಗ್ಗೆ ಈಗ ಸಾಕಷ್ಟು ವಿವಾದಗಳು ಉಂಟಾಗಿವೆ. ಬಿಹಾರದ ಐದು ಲಕ್ಷ ಮಹಿಳೆಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಇಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಗಳ ಮೇಲೆ ರಾಹುಲ್ ಗಾಂಧಿ ಚಿತ್ರ ಮುದ್ರಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಆಡಳಿತಾರೂಢ ಜೆಡಿಯು ಹಾಗೆ ಮೈತ್ರಿ ಪಕ್ಷ ಭಾರತೀಯ ಜನತಾ ಪಾರ್ಟಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿವೆ.
ಪ್ಯಾಡ್ ಬಗ್ಗೆ ಸಮರ್ಥನೆ ನೀಡಿರುವ ಕಾಂಗ್ರೆಸ್ ಪಕ್ಷ ” ಬಿಹಾರದ ಮಹಿಳೆಯರಲ್ಲಿ ಮುಟ್ಟಿನ ನೈರ್ಮಲ್ಯದ ಜಾಗೃತಿ ಮೂಡಿಸುವ ಗುರಿಯನ್ನು ಪಕ್ಷವು ಹೊಂದಿದ್ದು, ಪ್ರಿಯದರ್ಶಿನಿ ಉಡಾನ್ ಯೋಜನೆಯಡಿಯಲ್ಲಿ ಈ ಪ್ಯಾಡ್ ಗಳನ್ನು ವಿತರಿಸಲಾಗುತ್ತಿದೆ. ಈ ಉಪಕ್ರಮವು ರಾಜ್ಯದ ಮಹಿಳಾ ಮತದಾರರಿಗಾಗಿ ದೊಡ್ಡ ಅಭಿಯಾನದ ಭಾಗವಾಗಿದೆ” ಎಂದು ಕಾಂಗ್ರೆಸ್ ಪಕ್ಷ ಹೇಳಿದೆ. ಆದರೆ ಇದು ಮಹಿಳೆಯರಿಗೆ ಮಾಡುತ್ತಿರುವ ಅಪಮಾನ ಎಂದು ಜೆಡಿಯು ಜರಿದಿದೆ.
5 ಲಕ್ಷಕ್ಕೂ ಹೆಚ್ಚು ಸ್ಯಾನಿಟರಿ ಪ್ಯಾಡ್ ಬಾಕ್ಸ್ ಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. ಇದರ ಉದ್ದೇಶ ಮುಟ್ಟಿನ ಆರೋಗ್ಯವನ್ನು ಪರಿಹರಿಸುವುದು, ಸಾಮಾಜಿಕ ನಿಷೇಧಗಳನ್ನು ಮುರಿಯುವುದು ಮತ್ತು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವುದು ಎಂದಿದೆ. ಆದರೆ ಸ್ಯಾನಿಟರಿ ಪ್ಯಾಡ್ ಬಾಕ್ಸ್ ಗಳಲ್ಲಿ ರಾಹುಲ್ ಗಾಂಧಿ ಅವರ ಫೋಟೋಗಳನ್ನು ಮುದ್ರಿಸಿರುವುದು ಇದೀಗ ವಿವಾದಕ್ಕೆ ಗುರಿಯಾಗಿದೆ. ಇನ್ನು ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಗಳಲ್ಲಿ ಸಂಸದೆ ಪ್ರಿಯಾಂಕಾ ವಾದ್ರಾ ಅವರ ಮುಖವೂ ಕಾಣಿಸಿಕೊಂಡಿದೆ.
ಆದರೆ ತೀರಾ ಸ್ಯಾನಿಟರಿ ಪ್ಯಾಡ್ ಗಳ ಮೇಲೆ ರಾಹುಲ್ ಗಾಂಧಿಯವರ ಚಿತ್ರಗಳನ್ನು ಬಳಸಿದ್ದಕ್ಕಾಗಿ ಜೆಡಿಯು ವಕ್ತಾರ ನೀರಜ್ ಕುಮಾರ್ ಟೀಕಿಸಿದರು.
ಈ ಬಗ್ಗೆ ಮಾತನಾಡಿದ ಜೆಡಿಯು ವಕ್ತಾರ ನೀರಜ್ ” ಕಾಂಗ್ರೆಸ್ಸಿನ ಈ ನಡೆ ರಾಜಕೀಯದಲ್ಲಿ ಸೈದ್ಧಾಂತಿಕ ದಿವಾಳಿತನ ಅಥವಾ ಬುದ್ಧಿಶಕ್ತಿಯ ಕೊರತೆ ಎಂದು ಕರೆಯಲಾಗುತ್ತದೆ” ಎಂದು ಹೇಳಿದ್ದಾರೆ.
ಜೆಡಿಯು ಹಾಗೂ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕಿ ಅಲ್ಕಾ ಲಂಬಾ ” ಈ ಆಧುನಿಕ ಯುಗದಲ್ಲಿ, ರಾಹುಲ್ ಗಾಂಧಿಯವರ ಫೋಟೋಗಳು ಪ್ಯಾಕೆಟ್ ಗಳ ಮೇಲೆ ಯಾಕೆ ಇವೆ ಎಂಬುದು ಪ್ರಶ್ನೆಯಲ್ಲ. ಬಿಹಾರದ ನಮ್ಮ ಹೆಣ್ಣುಮಕ್ಕಳು ಮುಟ್ಟಿನ ಸಮಯದಲ್ಲಿ ಬಟ್ಟೆಯ ತುಂಡುಗಳನ್ನು ಬಳಸಲು ಮತ್ತು ಅನಾರೋಗ್ಯ ಒಳಗಾಗಲು ಏಕೆ ಒತ್ತಾಯಿಸಲ್ಪಡುತ್ತಾರೆ ಎಂಬುದು ಪ್ರಶ್ನೆ” ಎಂದು ಹೇಳಿದ್ದಾರೆ