ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?

ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ರಸ್ತೆ ಮಾಡಿಕೊಡಿ ಎಂದು ದಂಬಾಲು ಬಿದ್ದ ರೈತರೊಬ್ಬರ ಮುಂದೆ ಇಂತಹ ಆಯ್ಕೆ ಇಟ್ಟಿದ್ದಾರೆ. “ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಗ್ಯಾರಂಟಿಗಳನ್ನು ಜಾರಿ ತಂದಿದೆ. ನಿಮಗೆ ಅಕ್ಕಿ ಬ್ಯಾಡ, ಇನ್ನೊಂದು ಬ್ಯಾಡ ಅಂದ್ರ ಆ ಹಣದಲ್ಲಿ ರಸ್ತೆ ಅಭಿವೃದ್ಧಿ ಮಾಡೋಣ. ನಿಂಗೆ ರಸ್ತೆ ಬೇಕು ಅಂದ್ರೆ ಅಕ್ಕಿ ಸೇರಿದಂತೆ ಎಲ್ಲವೂ ಬಂದ್ ಆಗುತ್ತಾವ” ಎಂದು ಶಾಸಕರೂ ಆಗಿರುವ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ.
ಅವರು ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಪ್ರೌಢಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ವೇಳೆ ರೈತರೊಬ್ಬರು ” ನಮ್ಮ ಹೊಲಕ್ಕೆ ಹೋಗುವ ರಸ್ತೆ ಮಾಡಿಕೊಡ್ರೀ” ಎಂದು ಸಿಎಂ ಆರ್ಥಿಕ ಸಲಹೆಗಾರರಿಗೆ ಕೋರಿದರು. ಇಂತಹ ಸಂದರ್ಭದಲ್ಲಿ ಬಸವರಾಜ ಅವರಿಂದ ಇಂತಹ ಉತ್ತರ ಬಂತು. ಈಗ ಅವರು ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಬಹುದು. ಆದರೆ ಅವರು ಗ್ಯಾರಂಟಿ ಯೋಜನೆ ಜಾರಿಗೆ ಬಂದ ನಂತರ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇದೆ ಎಂದು ಪರೋಕ್ಷವಾಗಿ ಒಪ್ಪಿಕೊಂಡಂತೆ ಆಯಿತು. ಅವರು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರಾಗಿರುವ ಕಾರಣ ಅವರಿಗೆ ಎಲ್ಲರಿಗಿಂತ ಹೆಚ್ಚಾಗಿ ರಾಜ್ಯದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಅರಿವಿದೆ. ಆದ್ದರಿಂದ ಅವರ ಹೇಳಿಕೆಗೆ ವಿಶೇಷವಾದ ಪ್ರಾತಿನಿಧ್ಯವಿದೆ. ಇದೇ ವೇಳೆ ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ತನಗೆ ಹಾಗೂ ಕೃಷ್ಣ ಭೈರೇಗೌಡರಿಗೆ ಚೆನ್ನಾಗಿ ಗೊತ್ತಿದೆ ಎಂದು ರಾಯರೆಡ್ಡಿಯವರು ಹೇಳುವ ಮೂಲಕ ತಮ್ಮ ಹೇಳಿಕೆಯ ಹಿಂದಿರುವ ವಾಸ್ತವವನ್ನು ಒಪ್ಪಿಕೊಂಡಂತೆ ಆಗಿದೆ.
” ನನಗೆ ಅಕ್ಕಿ ಬೇಡಾ, ಕೇವಲ ರಸ್ತೆಗಳನ್ನು ಮಾಡಿಕೊಡಿ ಎಂದು ನೀವು ಹೇಳಿದರೆ ನಾವು ಅದನ್ನೇ ಮಾಡುತ್ತೇವೆ. ನೀವು ಆಯ್ಕೆ ಮಾಡಿದ್ದನ್ನೇ ಸಿದ್ಧರಾಮಯ್ಯನವರಿಗೆ ಹೇಳಿ, ಜನ ಈ ರೀತಿ ಹೇಳುತ್ತಿದ್ದಾರೆ ಎಂದು ಹೇಳಬೇಕಾಗುತ್ತದೆ, ಹೇಳಲಾ?” ಎನ್ನುವ ಅರ್ಥದಲ್ಲಿ ರಾಯರೆಡ್ಡಿಯವರು ರೈತನಿಗೆ ಕೇಳಿದ್ದಾರೆ.
ಇವರ ಹೇಳಿಕೆ ಎಂತಹ ಸಮಯದಲ್ಲಿ ಹೊರಬಂದಿದೆ ಎಂದರೆ ಸಿದ್ಧರಾಮಯ್ಯ ಈಗಾಗಲೇ ತಮ್ಮದೇ ಪಕ್ಷದ ಶಾಸಕರಿಂದ ಅಭಿವೃದ್ಧಿಗೆ ಹಣ ಕೊಡಿ ಎನ್ನುವ ಒತ್ತಡವನ್ನು ಎದುರಿಸುತ್ತಿರುವಾಗಲೇ ಬಸವರಾಜ ಅವರು ಹಾಕಿರುವ ಬಾಂಬ್ ಮತ್ತೊಮ್ಮೆ ರಾಜ್ಯ ಸರಕಾರದ ಹಣೆಬರಹವನ್ನು ತೆರೆದಿಟ್ಟಿದೆ. ಇದರಿಂದ ವಿಪಕ್ಷ ಭಾರತೀಯ ಜನತಾ ಪಾರ್ಟಿಗೆ ಮತ್ತೊಮ್ಮೆ ಸರಕಾರದ ವಿರುದ್ಧ ಮಾತನಾಡಲು ಅಸ್ತ್ರ ಸಿಕ್ಕಿದಂತೆ ಆಗಿದೆ. ಇತ್ತ ಕಾಂಗ್ರೆಸ್ ಶಾಸಕರ ಅಸಮಾಧಾನವನ್ನು ದೂರ ಮಾಡಲು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುರ್ಜೆವಾಲಾ ಅವರು ಕಾಂಗ್ರೆಸ್ ಶಾಸಕರೊಂದಿಗೆ ಸರಣಿ ಸಭೆಗಳನ್ನು ಮಾಡುತ್ತಾ ಇರುವಾಗಲೇ ಇತ್ತ ಆಯಕಟ್ಟಿನ ಸ್ಥಾನಗಳಲ್ಲಿ ಇರುವವರು ಹೀಗೆ ಮಾತನಾಡುತ್ತಾ ಹೋದರೆ ಪಕ್ಷಕ್ಕೆ ತೇಪೆ ಹಾಕುವಾಗಲೇ ಇನ್ನೊಂದೆರಡು ವರ್ಷ ಕಳೆದು ಹೋಗಲಿವೆ ಎನ್ನುವುದು ರಾಜಕೀಯ ಪಂಡಿತರ ಅಂಬೋಣ. ಈ ನಡುವೆ ಸರಕಾರದಿಂದ ಗ್ಯಾರಂಟಿಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ರಾಯರೆಡ್ಡಿ ಪುನರುಚ್ಚರಿಸಿದ್ದಾರೆ.