ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!

ಇದು ನಿಜಕ್ಕೂ ಸೌಹಾರ್ದತೆಯ ಪರಾಕಾಷ್ಟೆ ಎನ್ನಬಹುದು. ಇದು ಇವತ್ತಿನ ದಿನಗಳಲ್ಲಿ ಅತೀ ಅಗತ್ಯವೂ ಹೌದು. ಮುಸ್ಲಿಮರೇ ಇಲ್ಲದ ಕೆಲ ಊರುಗಳಲ್ಲಿ ಹಿಂದೂ ಸಮುದಾಯದ ಮಂದಿ ಭಾನುವಾರ ಅದ್ದೂರಿಯಾಗಿ ಮೊಹರಂ ಆಚರಣೆ ಮೂಲಕ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಇದು ನಡೆದದ್ದು ಶಿವಮೊಗ್ಗ, ಬಳ್ಳಾರಿ, ರಾಉಚೂರು ಹಾಗೂ ಗದಗದಲ್ಲಿ ಎನ್ನುವುದು ವಿಶೇಷ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡಾದಲ್ಲಿ ಬಂಜಾರ ಸಮಾಜದ ಕೆಲವರು ಅನಾದಿ ಕಾಲದಿಂದಲೂ ಭಕ್ತಿಯಿಂದ ಮೊಹರಂ ಆಚರಿಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷ ಕಾಜಾ ಬಂದ ತೀರ್ಸಾ ಎಂಬ ಅಲೆದೇವರನ್ನು ಇಟ್ಟು ಪೂಜಿಸಿ ಅದ್ದೂರಿಯಾಗಿ ಮೆರವಣಿಗೆ ಮಾಡಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ. ಭಾನುವಾರ ನಡೆದ ದೇವರ ಮೆರವಣಿಗೆಯಲ್ಲಿ ಬಂಜಾರ ಸಂಪ್ರದಾಯದಂತೆ ಹಾಡು, ಭಜನೆ ಮಾಡಿ ಆಚರಿಸಲಾಯಿತು. ಈ ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಮನೆ ಇಲ್ಲದಿದ್ದರೂ ಈ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತದೆ. ಇನ್ನು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಮುಷ್ಠಗಟ್ಟೆ, ಗದಗ ಜಿಲ್ಲೆಯ ಕಲ್ಲೂರ ಗ್ರಾಮ, ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಗುಂಟಿ ಗ್ರಾಮದಲ್ಲಿಯೂ ಮುಸ್ಲಿಮರ ಮನೆಗಳಿಲ್ಲದಿದ್ದರೂ ಹಿಂದೂ ಸಮಾಜದ ಜನರೇ ತಮ್ಮ ಇಷ್ಟದೇವರನ್ನು ಪೂಜಿಸಿ ಮೊಹರಂ ಆಚರಿಸಿದ್ದಾರೆ. ಇದು ನಿಜಕ್ಕೂ ಸೌಹಾರ್ದತೆಯ ಸಂಕೇತವಾಗಿದ್ದು, ಮುಂದೆ ಮುಸ್ಲಿಮರು ಕೂಡ ಹಿಂದೂ ಹಬ್ಬಗಳನ್ನು ಆಚರಿಸುವ ಮೂಲಕ ತಾವು ಕೂಡ ವಿಶಾಲ ಹೃದಯಿಗಳು ಎಂದು ತೋರಿಸಿಕೊಡಬಹುದು.