ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ…

ಇಂಗ್ಲೆಂಡ್ ವಿರುದ್ಧ ಎಡ್ಜಬಾಸ್ಟನ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಎರಡು ಇನ್ಸಿಂಗ್ಸ್ ನಲ್ಲಿ ಒಟ್ಟು 187 ರನ್ನಿಗೆ ಹತ್ತು ವಿಕೆಟ್ ಕಬಳಿಸಿ ಇಂಗ್ಲೆಂಡ್ ವಿರುದ್ಧ ಭಾರತೀಯನೊಬ್ಬನ ಅತ್ಯುತ್ತಮ ಪ್ರದರ್ಶನಕ್ಕೆ ಕಾರಣರಾಗಿರುವ ಆಕಾಶ್ ದೀಪ್ ಅವರ ವೈಯಕ್ತಿಕ ಬದುಕಿನ ಬಗ್ಗೆ ಗೊತ್ತಾದರೆ ನಿಜಕ್ಕೂ ಹೃದಯಭಾರವಾಗುತ್ತದೆ. ಭಾರತೀಯ ಕ್ರಿಕೆಟಿನ ಉದಯೋನ್ಮುಖ ಬೌಲರ್ ಆಗಿ ಹೊರಹೊಮ್ಮಿರುವ ಆಕಾಶ್ ದೀಪ್ ಅವರು ತಮ್ಮ ಈ ಐತಿಹಾಸಿಕ ಪ್ರದರ್ಶನವನ್ನು ಸಹೋದರಿ ಅಖಂಡ್ ಜ್ಯೋತಿ ಸಿಂಗ್ ಅವರಿಗೆ ಸಮರ್ಪಿಸಿದರು. ಜ್ಯೋತಿ ಅವರ ಯಾತನಾಮಯ ಬದುಕು ಮತ್ತು ಅವರ ಸಹೋದರ ಆಕಾಶ್ ದೀಪ್ ಅವರಿಗೆ ಸಹೋದರಿ ಜೊತೆಗಿನ ಬಾಂಧವ್ಯ ನಿಜಕ್ಕೂ ಅಣ್ಣ-ತಂಗಿಯ ಪ್ರೀತಿಯನ್ನು ಎತ್ತಿ ತೋರಿಸುತ್ತದೆ.
ಒಂದು ಟಿವಿ ಸಂದರ್ಶನದಲ್ಲಿ ಜ್ಯೋತಿಯವರು ಸಹೋದರ ಇಂಗ್ಲೆಂಡಿನಲ್ಲಿ ಆಡಲು ಹೊರಟು ನಿಂತಾಗ ಅವನಿಗೆ ಹೇಳಿದ್ದರಂತೆ ” ನಾನು ಆರಾಮವಾಗಿದ್ದೇನೆ. ನೀನು ನನ್ನ ಬಗ್ಗೆ ಏನೂ ಚಿಂತಿಸಬೇಡಾ. ದೇಶಕ್ಕಾಗಿ ಉತ್ತಮವಾಗಿ ಆಡು”. ಜ್ಯೋತಿಯವರು ಪ್ರಸ್ತುತ ಕ್ಯಾನ್ಸರ್ ಮಹಾಮಾರಿಯ ಮೂರನೇ ಸ್ಟೇಜಿನಲ್ಲಿ ಇದ್ದಾರೆ. ಅವರ ಚಿಕಿತ್ಸೆ ಇನ್ನು ಆರು ತಿಂಗಳು ನಡೆಯಲಿದೆ. ಅವರು ಈಗಲೂ ಹಸನ್ಮುಖಿಯಾಗಿಯೇ ಇರುತ್ತಾರೆ ಮತ್ತು ಸಹೋದರ ಪ್ರತಿ ಬಾರಿ ವಿಕೆಟ್ ಪಡೆದಾಗ ಎಷ್ಟು ಜೋರಾಗಿ ಸಂಭ್ರಮಿಸುತ್ತಾರೆ ಎಂದರೆ ಅಕ್ಕಪಕ್ಕದವರು ಇವರ ಮನೆಯಲ್ಲಿ ಏನಾಯಿತು ಎಂದು ಕೇಳುವಷ್ಟು.
ಆಕಾಶ್ ದೀಪ್ ಗೆದ್ದ ಬಳಿಕ ತನ್ನ ಸಾಧನೆಯನ್ನು ಸಹೋದರಿಗೆ ಅರ್ಪಿಸಿ ತಾನು ಪ್ರತಿ ಚೆಂಡು ಎಸೆಯುವಾಗಲೂ ಅವಳ ಮುಖ ನನ್ನ ಎದುರಿಗೆ ಬರುತ್ತಿತ್ತು ಎಂದು ಹೇಳುತ್ತಾ ಅವಳು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವುದನ್ನು ಬಹಿರಂಗಪಡಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಜ್ಯೋತಿ ” ಆತ ಹೀಗೆ ಹೇಳುತ್ತಾನೆ ಎಂದರೆ ನಾವು ಯಾವತ್ತೂ ಅಂದುಕೊಂಡಿರಲಿಲ್ಲ. ನನ್ನ ಕಾಯಿಲೆಯ ಬಗ್ಗೆ ನಾವು ಎಂದೂ ಬಹಿರಂಗಪಡಿಸಿರಲಿಲ್ಲ. ಆದರೆ ಅವನ ಪ್ರೀತಿ ಮತ್ತು ಭ್ರಾತೃತ್ವ ಬಹಳ ದೊಡ್ಡದು. ಅವನ ಮಾತುಗಳು ಆತ ನನ್ನನ್ನು ಮತ್ತು ಕುಟುಂಬವನ್ನು ಎಷ್ಟು ಪ್ರೀತಿಸುತ್ತಾನೆ ಎಂದು ಗೊತ್ತಾಗುತ್ತದೆ” ಎಂದು ಹೇಳಿದ್ದಾರೆ.
ಜ್ಯೋತಿ ಹಾಗೂ ಆಕಾಶ್ ದೀಪ್ ಈಗಾಗಲೇ ತಮ್ಮ ತಂದೆ ಹಾಗೂ ಹಿರಿಯ ಅಣ್ಣನನ್ನು ಕಳೆದುಕೊಂಡಿದ್ದಾರೆ. ” ಇಂತಹ ಸಹೋದರ ಯಾರಿಗಾದರೂ ಸಿಗುವುದು ಅವರ ಅದೃಷ್ಟ. ಯಾವುದೇ ಕೆಲಸಕ್ಕೆ ಮುಂದಾಗುವಾಗ ನಮ್ಮನ್ನು ಭೇಟಿ ಮಾಡಿ ಸಮಾಲೋಚಿಸಿಯೇ ಆತ ನಿರ್ಧಾರ ತೆಗೆದುಕೊಳ್ಳುತ್ತಾನೆ” ಎಂದು ಹೇಳಿದ್ದಾರೆ. ಒಂದು ಸಲ ಆಕಾಶ್ ದೀಪ್ ಮಾತನಾಡುವಾಗ ತನ್ನ ಬಳಿ ಏನು ಇದೆಯೋ ಅದು ನನ್ನ ಸಹೋದರಿ ಹಾಗೂ ಕುಟುಂಬಕ್ಕೆ ಸಮರ್ಪಿತ ಎಂದು ಹೇಳಿದ್ದನ್ನು ಆಕೆ ಬಹಳ ಖುಷಿಯಿಂದ ಹೇಳಿಕೊಳ್ಳುತ್ತಾರೆ.
ಸದ್ಯ ಆಕಾಶ್ ದೀಪ್ ಅವರು ಸರಣಿ ಮುಗಿಸಿ ಇಂಗ್ಲೆಂಡಿನಿಂದ ಹಿಂದಕ್ಕೆ ಬರುವುದನ್ನು ತಂಗಿ ಜ್ಯೋತಿ ಕಾಯುತ್ತಿದ್ದಾರೆ. ಆಕಾಶ್ ದೀಪ ಅವರು ನನ್ನ ಕೈಯಿಂದ ತಯಾರಿಸಿದ ತಿಂಡಿಯನ್ನು ತಿನ್ನಲು ಇಷ್ಟಪಡುತ್ತಾರೆ. ಅವರಿಗೆ ನನ್ನ ಕೈಯಿಂದ ತಯಾರಿಸಿದ ದಹಿವಡಾ ಹಾಗೂ ತರಕಾರಿಯಿಂದ ತಯಾರಿಸಿದ ಪಲ್ಯ ಇಷ್ಟ. ಅವರು ಮನೆಗೆ ಬರುವುದನ್ನು ಕಾಯುತ್ತಿದ್ದೇನೆ. ಅದನ್ನೇ ತಯಾರಿಸಿ ಕೊಡಲು ಕಾಯುತ್ತಿದ್ದೇನೆ” ಎಂದು ಹೇಳಿದ್ದಾರೆ. ಆಕಾಶ್ ದೀಪ ಅವರು ಇಲ್ಲಿಯ ತನಕ ಎಂಟು ಟೆಸ್ಟ್ ನಿಂದ 25 ವಿಕೆಟ್ ಪಡೆದಿದ್ದಾರೆ.