ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!

ಈ ವರ್ಷದ ಫೆಬ್ರವರಿ ತಿಂಗಳಿನಿಂದಲೇ ಹಣ ಬಾಕಿ ಇದೆ ಎಂದು ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್ ಗಳ ಸಂಘ ಮತ್ತು ಚಿಲ್ಲರೆ ಸಾರಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ. ಆರ್. ಷಣ್ಮುಗಪ್ಪ ಹೇಳಿದ್ದಾರೆ.
ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಿದ್ದು, ರಾಜ್ಯ ಸರಕಾರ ಬಾಕಿ ಉಳಿಸಿಕೊಂಡಿರುವ 260 ಕೋಟಿ ರೂ ಹಣವನ್ನು ಬಿಡುಗಡೆ ಮಾಡುವಂತೆ ಸಂಘಟನೆ ಒತ್ತಾಯಿಸಿದೆ. ಉಚಿತ ವಿತರಣೆಗಾಗಿ ಅಕ್ಕಿ ಸಾಗಿಸುವ ಲಾರಿಗಳ ಮುಷ್ಕರದಿಂದ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ತೊಂದರೆಯಾಗುವ ಸಾಧ್ಯತೆ ಇದೆ. ಫೆಬ್ರವರಿಯಿಂದಲೇ ಹಣ ಪಾವತಿಸಲಾಗಿಲ್ಲದೇ ಇರುವುದರಿಂದ ಮುಷ್ಕರ ಅನಿವಾರ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟ್ ಗಳ ಸಂಘ ಮತ್ತು ಚಿಲ್ಲರೆ ಸಾರಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಿ. ಆರ್. ಷಣ್ಮುಗಪ್ಪ ಹೇಳಿದ್ದಾರೆ.
ಜೂನ್ 19 ರಂದು ಸಿಎಂ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜುಲೈ 5 ರ ಮೊದಲು ಟ್ರಕ್ ಮಾಲೀಕರ ಬಾಕಿ ಹಣವನ್ನು ಪಾವತಿಸುವುದಾಗಿ ಭರವಸೆ ನೀಡಿದ್ದರು. ಆದರೆ ಬಾಕಿಗಳು ದಿನನಿತ್ಯ ಬೆಳೆಯುತ್ತಿವೆ ಹೊರತು ಸರಕಾರ ಪಾವತಿ ಮಾಡುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಫೆಬ್ರವರಿಯಿಂದ ಜೂನ್ ವರೆಗೆ ಸುಮಾರು 260 ಕೋಟಿ ರೂಗಳು ಬರಬೇಕಾಗಿರುವುದರಿಂದ ಲಾರಿ ಮಾಲೀಕರು ಸಂಕಷ್ಟದಲ್ಲಿದ್ದಾರೆ. ಅವರು ಸಾರಿಗೆ ವೆಚ್ಚವನ್ನು ಭರಿಸಲು ಸಾಲಸೋಲ ಮಾಡಿರುವುದರಿಂದ ಅವರಿಗೆ ಜೀವನ ಸಾಗಿಸುವುದೇ ಸವಾಲಾಗಿದೆ ಎಂದು ಷಣ್ಮುಗಪ್ಪ ಮಾಹಿತಿ ನೀಡಿದ್ದಾರೆ.
ಸರಕಾರದ ಈ ನಡೆಯಿಂದ ಲಾರಿ ಮಾಲೀಕರು ಸಾಲದ ಕಂತುಗಳನ್ನು ತಿಂಗಳು ತಿಂಗಳು ಪಾವತಿಸಲು ಕಷ್ಟಪಡುತ್ತಿದ್ದಾರೆ. ಇದರಿಂದ ಸಾಲ ನೀಡಿದ ಹಣಕಾಸು ಕಂಪೆನಿಗಳು ವಾಹನಗಳನ್ನೇ ವಶಪಡಿಸಿಕೊಳ್ಳಲು ಪ್ರಾರಂಭಿಸಿವೆ. ಇದು ಸುಮಾರು 4000 ಲಾರಿಗಳ ಮೇಲೆ ಪರಿಣಾಮ ಬೀರಿದೆ ಎಂದು ಷಣ್ಮುಗಪ್ಪ ಮಾಹಿತಿ ನೀಡಿದ್ದಾರೆ.
ತಾನು ಯಾವುದೇ ರಾಜಕೀಯ ಪಕ್ಷದವನ್ನಲ್ಲ. ಈ ವಿಷಯವನ್ನು ರಾಜಕೀಯಗೊಳಿಸುತ್ತಿಲ್ಲ ಎಂದು ಅವರು ಹೇಳಿದರು. ನಾನು ಟ್ರಕ್ ಮಾಲೀಕರ ಜೊತೆಗಿದ್ದೇನೆ. ಅವರ ಬಾಕಿ ಬಿಡುಗಡೆ ಆಗುವವರೆಗೆ ಟ್ರಕ್ ಗಳು ಅಕ್ಕಿಯನ್ನು ಸಾಗಿಸುವುದಿಲ್ಲ ಎಂದು ಷಣ್ಮುಗಪ್ಪ ಹೇಳಿದರು. ಷಣ್ಮುಗಪ್ಪ ಅವರು ನೈಜ ಕಳಕಳಿಯಿಂದ ಈ ನಿರ್ಧಾರ ಕೈಗೊಂಡಿರಬಹುದು. ಆದರೆ ಇದರಿಂದ ಅನ್ನಭಾಗ್ಯದ ಅಕ್ಕಿ ಸಾಗಾಟಕ್ಕೆ ತೊಂದರೆ ಆಗಲಿದೆ. ಅದರೊಂದಿಗೆ ವಿಪಕ್ಷಗಳಿಗೆ ಸರಕಾರದ ವಿರುದ್ಧ ಮತ್ತೊಂದು ಅಸ್ತ್ರ ಸಿಗಲಿದೆ.