ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!

ಕರ್ನಾಟಕದ ಐಟಿ ದಿಗ್ಗಜ ನಾರಾಯಣ ಮೂರ್ತಿಯವರ ಅಳಿಯ, ಯುನೈಟೆಡ್ ಕಿಂಗ್ ಡಮ್ ಇಲ್ಲಿನ ನಿಕಟಪೂರ್ವ ಪ್ರಧಾನಿ ರಿಷಿ ಸುನಾಕ್ ಈಗ ಖಾಸಗಿ ಉದ್ಯೋಗಕ್ಕೆ ಮರಳಿದ್ದಾರೆ. ಅವರು ಸೇರಿರುವ ಗೋಲ್ಡಮೆನ್ ಸಾಚಸ್ ಗ್ರೂಪ್ ಇದನ್ನು ಖಾತ್ರಿಪಡಿಸಿದೆ. ” ನಾನು ರಿಶಿ ಸುನಾಕ್ ಅವರನ್ನು ನಮ್ಮ ಕಂಪೆನಿಗೆ ಪ್ರೀತಿಯಿಂದ ಸ್ವಾಗತಿಸುತ್ತೇನೆ. ಅವರು ನಮ್ಮ ಕಂಪೆನಿಯ ಹಿರಿಯ ಸಲಹೆಗಾರರಾಗಿರುತ್ತಾರೆ” ಎಂದು ಕಂಪೆನಿಯ ಚೇರಮೆನ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಡೇವಿಡ್ ಸೋಲೋಮನ್ ಅವರು ಹೇಳಿಕೊಂಡಿದ್ದಾರೆ. ” ಅವರ ಹೊಸ ಹೊಣೆ ಏನೆಂದರೆ ಅವರು ನಮ್ಮ ಕಂಪೆನಿಯ ವಿವಿಧ ವಿಭಾಗಗಳ ಪ್ರಮುಖರೊಂದಿಗೆ ಸಂಪರ್ಕದಲ್ಲಿ ಇದ್ದು, ನಮ್ಮ ವಿಶ್ವಾದ್ಯಂತ ಇರುವ ಗ್ರಾಹಕರೊಂದಿಗೆ ಯಾವ ವಿಷಯದ ಮೇಲೆ ವ್ಯವಹಾರ ಮಾಡಬೇಕು ಮತ್ತು ತಮ್ಮ ಅಭಿಪ್ರಾಯಗಳ ಬಗ್ಗೆ ಚರ್ಚಿಸಲಿದ್ದಾರೆ. ಇನ್ನು ಪ್ರಪಂಚದ ಆರ್ಥಿಕ ಸ್ಥಿತಿಗತಿಗಳು ಮತ್ತು ನಮ್ಮ ವ್ಯವಹಾರಿಕ ಪ್ರತಿಕ್ರಿಯೆಗಳ ಬಗ್ಗೆನೂ ಅವರು ತಮ್ಮ ದೃಷ್ಟಿಕೋನವನ್ನು ಸಂಸ್ಥೆಯಲ್ಲಿ ಮೂಡಿಸಲಿದ್ದಾರೆ” ಎಂದು ಡೇವಿಡ್ ಹೇಳಿದ್ದಾರೆ. “ಅವರು ಪ್ರಪಂಚಾದ್ಯಂತ ಇರುವ ನಮ್ಮ ಹಿತೈಷಿಗಳೊಂದಿಗೆ ಸಮಯ ಕಳೆಯಲಿದ್ದು, ಅಲ್ಲಿ ಶಿಕ್ಷಣ, ಅಭಿವೃದ್ಧಿ ಹಾಗೂ ಸಂಸ್ಕೃತಿಗೆ ನಮ್ಮ ಕೊಡುಗೆಯ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ” ಎಂದು ಡೇವಿಡ್ ತಿಳಿಸಿದ್ದಾರೆ.
ರಿಶಿ ಅವರು ಯುಕೆ ಪ್ರಧಾನ ಮಂತ್ರಿಯಾಗಿ 2022 ಅಕ್ಟೋಬರ್ ನಿಂದ 2024 ಜುಲೈವರೆಗೆ ಸೇವೆ ಸಲ್ಲಿಸಿದ್ದಾರೆ. ಅವರು 2015 ರಲ್ಲಿ ಕನ್ಸರವೇಟಿವ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿ ರಿಚಮಂಡ್ (ಯಾರ್ಕ್) ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಆಯ್ಕೆಯಾದ ನಂತರ ಅವರು ಸಂಸತ್ತಿನಲ್ಲಿ ಉದ್ಯಮ, ಇಂಧನ ಹಾಗೂ ಕೈಗಾರಿಕೆಗಳ ರೂಪುರೇಶೆ ಇಲಾಖೆಗಳ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ನಂತರ ಅವರು ಸಚಿವರಾಗಿ ಪದೋನ್ನತಿ ಹೊಂದಿದ್ದರು.
ರಾಜಕೀಯಕ್ಕೆ ಬರುವ ಮೊದಲು ಅವರು ಆರ್ಥಿಕ ಬಂಡವಾಳ ಹೂಡಿಕೆಯ ಕಂಪೆನಿಯೊಂದನ್ನು ಇನ್ನೊಬ್ಬ ಪಾಲುದಾರರ ಜೊತೆಗೂಡಿ ಸ್ಥಾಪಿಸಿದ್ದರು. ಆ ಕಂಪೆನಿ ಜಗತ್ತಿನಲ್ಲಿರುವ ಕಂಪೆನಿಗಳಿಗೆ ಅವರ ಉದ್ಯಮ ಮತ್ತು ಆರ್ಥಿಕ ವ್ಯವಹಾರಗಳ ಬಗ್ಗೆ ಶಿಸ್ತನ್ನು ಕಲಿಸಿಕೊಡುತ್ತದೆ. ಅವರು 2000 ರಲ್ಲಿ ಗೋಲ್ಡಮನ್ ಸಚಸ್ ಇಲ್ಲಿ ಬೇಸಿಗೆ ಋತುವಿನ ಶಿಕ್ಷಣಾರ್ಥಿಯಾಗಿ ಉದ್ಯೋಗ ಜೀವನ ಆರಂಭಿಸಿ ಅಲ್ಲಿಯೇ 2001 ರಿಂದ 2004 ರ ತನಕ ಆರ್ಥಿಕ ವಿಶ್ಲೇಷಕರಾಗಿಯೂ ಕೆಲಸ ನಿರ್ವಹಿಸಿದ್ದರು.
ಗೋಲ್ಡಮನ್ ಸಚಸ್ ಕಂಪೆನಿ 1869 ರಲ್ಲಿ ಸ್ಥಾಪನೆಯಾಗಿದ್ದು, ಜಗತ್ತಿನಾದ್ಯಂತ ಇರುವ ತನ್ನ ಗ್ರಾಹಕರಿಗೆ ಆರ್ಥಿಕ ಸೇವೆಯನ್ನು ಒದಗಿಸುತ್ತಾ ಬಂದಿದೆ. ಅವರ ಗ್ರಾಹಕರಲ್ಲಿ ಕಾರ್ಪೋರೇಟ್ ಸಂಸ್ಥೆಗಳು, ಆರ್ಥಿಕ ಕೇಂದ್ರಗಳು ಮತ್ತು ಕೆಲವು ದೇಶಗಳ ಸರಕಾರಗಳು ಇವೆ. ಇದರ ಕೇಂದ್ರ ಕಚೇರಿ ನ್ಯೂಯಾರ್ಕ್ ನಲ್ಲಿ ಇದ್ದು, ಪ್ರಪಂಚದ ಮುಖ್ಯ ನಗರಗಳಲ್ಲಿ ಕಚೇರಿಗಳು ಇವೆ. ರಿಶಿ ಸುನಾಕ್ ಸದ್ಯ ರಿಚಮಂಡ್ ಹಾಗೂ ನಾರ್ಥ್ ಎಲಾರ್ಟನ್ ಇದರ ಸಂಸದರಾಗಿದ್ದು, ಅವರ ಹೊಸ ಉದ್ಯೋಗ ಜನರಿಗೆ ಕುತೂಹಲ ಮೂಡಿಸಿದೆ. ಇನ್ನು ವಿಶ್ವದ ಹಲವು ರಾಷ್ಟ್ರಗಳಲ್ಲಿ ರಾಜಕೀಯ ಎನ್ನುವುದು ಉದ್ಯೋಗವಾಗಿರದೇ ಅದು ಸಮಾಜಸೇವೆಯ ಭಾಗವಾಗಿದೆ.