ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!

ಆಕೆ ರಷ್ಯಾ ಮೂಲದ ಮಹಿಳೆ. ಭಾರತೀಯ ಸನಾತನ ಧರ್ಮದಿಂದ ವಿಪರೀತವಾಗಿ ಸೆಳೆತಗೊಳಗಾಗಿದ್ದಳು. ಇತ್ತೀಚೆಗೆ ರಷ್ಯಾದಿಂದ ಗೋವಾಕ್ಕೆ ಬಂದಿಳಿದಿದ್ದಳು. ಅಲ್ಲಿಂದ ವಿದೇಶಿಗರ ನೆಚ್ಚಿನ ಆಧ್ಯಾತ್ಮಿಕ ಕೇಂದ್ರ ಗೋಕರ್ಣಕ್ಕೆ ಬಂದಿದ್ದಳು. ಗೋಕರ್ಣ ಪೇಟೆಯಿಂದ ದಟ್ಟಾರಣ್ಯದ ಕಡೆಗೆ ಹೆಜ್ಜೆ ಹಾಕಿದ್ದಳು. ಆಕೆಯ ಜೊತೆಗೆ ಇದ್ದದ್ದು ಇಬ್ಬರು ಪುಟ್ಟ ಮಕ್ಕಳು. ಹೀಗೆ ದಟ್ಟ ಕಾಡಿನ ಒಳಗೆ ನಡೆದು ಹೋದವಳಿಗೆ ಸಿಕ್ಕಿತ್ತು ಒಂದು ಗುಹೆ. ಅದರೊಳಗೆ ಮೂವರು ಹೋಗಿ ಕುಳಿತುಬಿಟ್ಟರು. ನಿಧಾನವಾಗಿ ಕತ್ತಲು ಆವರಿಸಿತು. ಗುಹೆಯ ಬಾಗಿಲಿಗೆ ಅಡ್ಡಲಾಗಿ ಬಟ್ಟೆಯನ್ನು ಕಟ್ಟಿಕೊಂಡು ಒಳಗೆ ಮೂವರು ದಿನ ಕಳೆಯಲಾರಂಭಿಸಿದರು.
ಅಷ್ಟಕ್ಕೂ ರಷ್ಯಾದಿಂದ ಆಧ್ಯಾತ್ಮವನ್ನು ಅರಸಿ ಗೋಕರ್ಣದ ದಟ್ಟ ಕಾಡಿನ ಕತ್ತಲಗುಹೆಯಲ್ಲಿ ಇದ್ದವಳ ಹೆಸರು ಮೋಹಿ. ವಯಸ್ಸು 40 ವರ್ಷ. ಅವಳ ಪುಟ್ಟ ಮಕ್ಕಳಲ್ಲಿ ಒಬ್ಬಳು ಪ್ರೆಯಾ, ಆರು ವರ್ಷ, ಇನ್ನೊಬ್ಬಳು ಅಮಾ ನಾಲ್ಕೇ ವರ್ಷ. ಆಕೆಯ ಬಳಿ ಇದ್ದದ್ದು ಬಿಸಿನೆಸ್ ವೀಸಾ. ಆ ದಟ್ಟವಾದ ಅರಣ್ಯದ ಹೆಸರು ರಾಮತೀರ್ಥ. ಗುಹೆಯ ಒಳಗೆ ಪೂಜೆ ಮತ್ತು ಧ್ಯಾನ ಮಾಡುತ್ತಾ ದಿನ ಕಳೆಯುತ್ತಿದ್ದ ಮೂವರಿಗೆ ಮುಂದೊಂದು ದಿನ ತಮ್ಮನ್ನು ಪೊಲೀಸರು ಕರೆದುಕೊಂಡು ಹೋಗುತ್ತಾರೆ ಎಂಬ ಅನುಮಾನ ಇದ್ದಿರಲಿಕ್ಕಿಲ್ಲ. ಬಹುಶ: ಮಳೆಗಾಲದ ಈ ರಣಮಳೆಯಲ್ಲಿ ಗೋಕರ್ಣದ ಗುಡ್ಡವೊಂದು ಕುಸಿಯದೇ ಹೋಗಿದ್ದರೆ ಪೊಲೀಸರು ಕೂಡ ಸದ್ಯ ಅತ್ತ ಬರುವ ಸಾಧ್ಯತೆ ಇರುತ್ತಿರಲಿಲ್ಲವೇನೋ. ಆದರೆ ಗುಡ್ಡ ಕುಸಿತವಾಗಿದ್ದ ಕಾರಣ ಗಸ್ತು ತಿರುಗುವಾಗ ಗುಹೆಯಲ್ಲಿ ಯಾರೋ ವಾಸವಾಗಿರುವುದನ್ನು ನೋಡಿ ಅತ್ತ ಬಂದಿದ್ದಾರೆ. ನಂತರ ಆಕೆಯ ಮನವೊಲಿಸಿ ಆಕೆಯ ಇಚ್ಚೆಯಂತೆ ಬಂಕಿಕೊಡ್ಲದ ಎಜಿಓ ಶಂಕರ್ ಪ್ರಸಾದ್ ಫೌಂಡೇಶನ್ ಗೆ ಸಂಬಂಧಿಸಿದ ಯೋಗರತ್ನ ಸರಸ್ವತಿ ಮಹಿಳಾ ಸ್ವಾಮೀಜಿ ಅವರ ಆಶ್ರಮಕ್ಕೆ ಕರೆತಂದಿದ್ದಾರೆ.
ಈ ವೇಳೆ ಈಕೆಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಿದಾಗ ಹಿಂದೂ ಹಿಂದೂ ಧರ್ಮದ ಕಡೆ ಹೆಚ್ಚು ಆಸಕ್ತಿ ಇರುವುದರಿಂದ ಪ್ರಕೃತಿಯಲ್ಲಿ ಇರಬೇಕು ಎಂದು ತನ್ನ ಮಕ್ಕಳೊಂದಿಗೆ ಏಕಾಂಗಿಯಾಗಿ ಗುಹೆ ಸೇರಿದ್ದಳು ಎಂದು ಪೊಲೀಸರಿಗೆ ತಿಳಿದುಬಂದಿದೆ. ಹೀಗಾಗಿ ಗುಡ್ಡ ಕುಸಿತವಾಗಿರುವ ರಾಮತೀರ್ಥ ಗುಡ್ಡದ ಗುಹೆಯಲ್ಲಿ ತಮ್ಮ ಪುಟ್ಟ ಮಕ್ಕಳೊಂದಿಗೆ ಕತ್ತಲಿನಲ್ಲಿಯೇ ಬದುಕುತ್ತಿದ್ದಳು ಎನ್ನಲಾಗಿದೆ. ಎಸ್ ಪಿ ಎಂ ನಾರಾಯಣ್ ಅವರ ಸಲಹೆಯಂತೆ ಆಕೆ ಹಾಗೂ ಆಕೆಯ ಮಕ್ಕಳನ್ನು ಪೊಲೀಸರ ರಕ್ಷಣೆಯಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಅಲ್ಲಿ ರಷ್ಯಾ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಬಳಿಕ ಆಕೆಯ ದೇಶಕ್ಕೆ ಪುನ: ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ ಎಂದು ಎಸ್ ಪಿ ಎಂ ನಾರಾಯಣ್ ಅವರು ಮಾಹಿತಿ ನೀಡಿದ್ದಾರೆ.