ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!

ಕಾಂತಾರಾ ಮೂಲಕ ದೇಶ, ವಿದೇಶದಲ್ಲಿ ತುಳುಮಣ್ಣಿನ ಸಂಸ್ಕೃತಿ, ನಂಬಿಕೆ, ಸಂಪ್ರದಾಯವನ್ನು ಪಸರಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿಯವರಿಗೆ ಈಗಾಗಲೇ ಬಾಲಿವುಡ್ ನಿರ್ದೇಶಕರಿಂದ ದೊಡ್ಡ ದೊಡ್ಡ ಆಫರ್ ಗಳು ಬರುತ್ತಿರುವ ವಿಷಯ ನಿಮಗೆ ಗೊತ್ತೇ ಇದೆ. ಆ ಸಾಲಿಗೆ ಈಗ ಲಗಾನ್, ಜೋಧಾ ಅಕ್ಬರ್ ನಂತಹ ದೊಡ್ಡ ಸ್ಟಾರ್ ಗಳ ಸಿನೆಮಾ ನಿರ್ದೇಶಿಸಿರುವ ಅಶುತೋಷ್ ಗೌವಾರೀಕರ್ ಕೂಡ ಸೇರಿದ್ದಾರೆ. ಸಾಮಾನ್ಯವಾಗಿ ಇತಿಹಾಸದ ಅವಿಸ್ಮರಣೀಯ ಕಥೆಗಳನ್ನೇ ಬೆಳ್ಳಿತೆರೆಗೆ ಅಳವಡಿಸುವಲ್ಲಿ ಅಶುತೋಷ್ ಸಿದ್ಧಹಸ್ತರು. ಅವರು ವಿಜಯನಗರದ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯ ಅವರ ಜೀವನಚರಿತ್ರೆಯನ್ನು ಇಟ್ಟುಕೊಂಡು ಕಥೆ ಸಿದ್ಧಪಡಿಸಿದ್ದಾರೆ. ಅವರ ತಂಡ ಈಗಾಗಲೇ ಈ ಬಗ್ಗೆ ಸಂಶೋಧನೆ ನಡೆಸಿ ಚಿತ್ರಕಥೆಯನ್ನು ರಚಿಸುತ್ತಾ ಇದೆ.
ಓರ್ವ ಚಕ್ರವರ್ತಿಯನ್ನು ತೆರೆಯ ಮೇಲೆ ಹೇಗೆ ತೋರಿಸಬೇಕು ಎನ್ನುವ ಸಂಪೂರ್ಣ ಕಲ್ಪನೆ ಅಶುತೋಷ್ ಅವರಿಗೆ ಇರುವುದರಿಂದ ಈ ಸಿನೆಮಾದ ಒಟ್ಟು ಬಜೆಟ್ ಕೂಡ ದೊಡ್ಡದಾಗಿಯೇ ಇರಲಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ಚಿನ್ನ, ವಜ್ರಗಳು ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದರು ಎನ್ನುವಾಗಲೇ ಆ ಅವಧಿಯ ಶ್ರೀಮಂತಿಕೆಯನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಹಾಗಿರುವಾಗ ಚಕ್ರವರ್ತಿಯ ಆಸ್ಥಾನ ಹೇಗಿರಬೇಡಾ. ಆತನ ಮಂತ್ರಿಮಂಡಲ ಹೇಗಿರಬೇಡಾ, ಸೈನ್ಯ ಹೇಗಿರಬೇಡಾ. 16 ನೇ ಶತಮಾನದಲ್ಲಿ ಕರ್ನಾಟಕ ಮಾತ್ರವಲ್ಲ, ದಕ್ಷಿಣ ಭಾರತವನ್ನು ಅಕ್ಷರಶ: ಆಳಿದ್ದ ಶ್ರೀ ಕೃಷ್ಣ ದೇವರಾಯನ ವ್ಯಕ್ತಿತ್ವವನ್ನು ಸಿನೆಮಾವಾಗಿ ತರುವುದೇ ದೊಡ್ಡ ಸಾಹಸ.
ಈ ಸಿನೆಮಾವನ್ನು ವಿಷ್ಣುವರ್ಧನ್ ಇಂದೂರಿ ನಿರ್ಮಿಸಲಿದ್ದಾರೆ. ಅವರು ಈ ಮೊದಲು ತಲೈವಿ ಹಾಗೂ ಕಪಿಲ್ ದೇವ್ ಜೀವನ ಚರಿತ್ರೆ 83 ನಿರ್ಮಿಸಿದ್ದಾರೆ. ಈ ಸಿನೆಮಾದಲ್ಲಿ ದಕ್ಷಿಣ ಭಾರತ ಹಾಗೂ ಹಿಂದಿ ಚಿತ್ರರಂಗದ ಖ್ಯಾತನಾಮರು ನಟಿಸಲಿದ್ದಾರೆ. ಎರಡು ವರ್ಷಗಳಿಂದ ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಕೊನೆಗೂ ಸಿನೆಮಾ ಸೆಟ್ಟೇರಲು ಸಜ್ಜಾಗಿದೆ. ಕಾಂತಾರ ಪಾರ್ಟ್ 1 ನಂತರ, ಜೈ ಹನುಮಾನ್, ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಶ್ರೀ ಕೃಷ್ಣ ದೇವರಾಯದಲ್ಲಿ ನಟಿಸುವ ಮೂಲಕ ರಿಷಬ್ ಮತ್ತೊಮ್ಮೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ತಮ್ಮ ಚರಿಶ್ಮಾ ಮುಂದುವರೆಸಲಿದ್ದಾರೆ.