ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಡೂ ಔರ್ ಡೈ ಆಗಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅಭ್ಯಾಸ ಶಿಬಿರಕ್ಕೂ ಮುನ್ನ ಭಾರತೀಯ ಆಟಗಾರರ ಡ್ರೆಸ್ಸಿಂಗ್ ರೂಂನಲ್ಲಿ ಭಗವಾನ್ ಹನುಮಂತನನ್ನು ಸ್ಮರಿಸುವ ಹನುಮಾನ್ ಚಾಲಿಸಾ ಕೇಳಿಸಲಾಯಿತು ಎಂದು ವರದಿಯಾಗಿದೆ. ಇದರಿಂದ ಆಟದಲ್ಲಿ ದೃಢಚಿತ್ತತೆ, ಏಕಾಗ್ರತೆ ಮತ್ತು ಗುರಿಯೆಡೆಗೆ ನಿಖರತೆ ಸಿಗಲು ಸಾಧ್ಯವಾಗುತ್ತದೆ. ಹನುಮಾನ್ ಚಾಲೀಸಾವನ್ನು ನಮ್ಮ ಸನಾತನ ಧರ್ಮದ ಶಕ್ತಿವರ್ಧಕ ಮಂತ್ರಪಠಣ ಎಂದೇ ಕರೆಯಲಾಗುತ್ತದೆ. ಜುಲೈ 23 ರಿಂದ ನಾಲ್ಕನೇ ಟೆಸ್ಟ್ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫರ್ಡ್ ನಲ್ಲಿ ಆರಂಭವಾಗಲಿದೆ. ಅದಕ್ಕೂ ಮುನ್ನ ಭಾರತೀಯ ಆಟಗಾರರು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಈಗಾಗಲೇ ಮೂರು ಟೆಸ್ಟ್ ಪಂದ್ಯಗಳು ಮುಗಿದಿದ್ದು, ಅದರಲ್ಲಿ ಭಾರತ ಒಂದರಲ್ಲಿ ಗೆದ್ದು, ಎರಡರಲ್ಲಿ ಸೋತಿದೆ. ಪ್ರತಿಷ್ಠಿತ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಗೆಲುವು ಕೈಗೆ ಬರುತ್ತದೆ ಎನ್ನುವ ಹಂತದಲ್ಲಿ ಭಾರತ ಮುಗ್ಗರಿಸಿತು. ಈಗ ನಾಲ್ಕನೇ ಪಂದ್ಯವನ್ನಾದರೂ ಗೆಲ್ಲುವ ಮೂಲಕ ಸರಣಿಯನ್ನು ಸಮಬಲಗೊಳಿಸಿ ಐದನೇ ಪಂದ್ಯಕ್ಕೆ ಮಾನಸಿಕವಾಗಿ ಹುರುಪಿನೊಂದಿಗೆ ತಯಾರಾಗುವ ಯೋಚನೆ ಭಾರತೀಯ ತಂಡದ್ದು. ಭಾರತದ ಎಡಗೈ ವೇಗಿ ಅರ್ಶ್ ದೀಪ್ ಸಿಂಗ್ ಬುಧವಾರ ಅಭ್ಯಾಸ ಶಿಬಿರದ ವೇಳೆ ಕೈ ಬೆರಳಿನ ಗಾಯಕ್ಕೆ ತುತ್ತಾದರು. ಸಾಯಿ ಸುದರ್ಶನ್ ಬಾರಿಸಿದ ಚೆಂಡನ್ನು ಹಿಡಿಯುವ ಯತ್ನದಲ್ಲಿ ಅರ್ಶ್ ದೀಪ್ ಕೈಗೆ ಗಾಯವಾಯಿತು. ಅರ್ಶ್ ದೀಪ್ ಸರಣಿಯ ಆರಂಭಿಕ 3 ಪಂದ್ಯಗಳಲ್ಲಿ ಆಡಿಲ್ಲ. ಆದರೆ ಬೂಮ್ರಾ ಕೊನೆ ಎರಡು ಟೆಸ್ಟ್ ಗಳ ಪೈಕಿ 1 ರಲ್ಲಿ ಮಾತ್ರ ಆಡಲಿದ್ದು, ಅವರ ಗೈರಿನಲ್ಲಿ ಆರ್ಶ್ ದೀಪ್ ಗೆ ಅವಕಾಶ ಸಿಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಭಾರತದ ಪ್ರಮುಖ ವೇಗಿ ಜಸ್ ಪ್ರೀತ್ ಬೂಮ್ರಾ ಸರಣಿಯ ನಿರ್ಣಾಯಕ ಟೆಸ್ಟ್ ಎನಿಸಿಕೊಂಡಿರುವ 4 ನೇ ಪಂದ್ಯದಲ್ಲಿ ಬಹುತೇಕ ಆಡುವ 11 ರ ತಂಡದಲ್ಲಿದ್ದಾರೆ ಎನ್ನುವ ಮಾಹಿತಿ ಇದೆ. ಇನ್ನು ಬರೋಬ್ಬರಿ 8 ವರ್ಷಗಳ ಬಳಿಕ ಭಾರತ ಟೆಸ್ಟ್ ಕ್ರಿಕೆಟ್ ತಂಡ ಮರಳಿರುವ ಕರುಣ್ ನಾಯರ್ ಈ ಬಾರಿ ಸರಣಿಯಲ್ಲಿ ಕಮಾಲ್ ಮಾಡಿಲ್ಲ. ಈಗಾಗಲೇ ನಡೆದ ಮೂರು ಪಂದ್ಯಗಳಲ್ಲಿ ಅವರಿಗೆ ಅವಕಾಶ ಸಿಕ್ಕಿತಾದರೂ ಅವರು ಹೇಳಿಕೊಳ್ಳುವಂತಹ ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಒಟ್ಟಿನಲ್ಲಿ ಮುಂದಿನ ಪಂದ್ಯಕ್ಕೆ ಕೆಲವು ದಿನಗಳು ಇರುವುದರಿಂದ ಯಾರು 11 ರ ಬಳಗದಲ್ಲಿರುತ್ತಾರೆ ಎನ್ನುವುದೇ ಈಗಿರುವ ಪ್ರಶ್ನೆ.