ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!

ಭಾರತದಲ್ಲಿ ಯುಪಿಐ ಅಂದರೆ ಸಿಂಪಲ್ ಆಗಿ ಹೇಳುವುದಾದರೆ ಮೊಬೈಲ್ ಮೂಲಕವೇ ನೀವು ಕ್ಷಣಾರ್ಧದಲ್ಲಿ ಹಣ ಸಾಗಿಸುವ ವ್ಯವಸ್ಥೆ ಇದೆಯಲ್ಲ, ಅದು ಎಷ್ಟರಮಟ್ಟಿಗೆ ಭಾರತದಲ್ಲಿ ಫೇಮಸ್ ಇದೆ ಎಂದರೆ ಬೀದಿಬದಿ ವ್ಯಾಪಾರಿಗಳಿಂದ ಹಿಡಿದು ಮಾಲ್ ಗಳ ತನಕ ಎಲ್ಲದರಲ್ಲಿಯೂ ಮುಂಚೂಣಿಯಲ್ಲಿದೆ. ಎಲ್ಲಿಯವರೆಗೆ ಎಂದರೆ ಇಂದಿನ ಯುವಕರು ಒಂದು ಚಾಕಲೇಟ್ ಖರೀದಿಸಿದರೂ ಅದಕ್ಕೆ ಯುಪಿಐ ಬಳಸುತ್ತಾರೆ. ಯುಪಿಐ ಇಲ್ಲದ ಅಂಗಡಿಯವರು ಹಳೆ ತಲೆಮಾರಿನವರು ಎಂದು ಹೇಳುವಂತಹ ವಾತಾವರಣ ಸೃಷ್ಟಿಯಾಗಿದೆ.
ಈಗ ಕೆಲವು ದಿನಗಳಿಂದ ಈ ಜಿಎಸ್ ಟಿ ಕಟ್ಟದ ಅಂಗಡಿಯವರು ತಮ್ಮ ಅಂಗಡಿಯಿಂದ ಕ್ಯೂಆರ್ ಕೋಡ್ ತೆಗೆಯುತ್ತಿದ್ದಾರೆ. ಅದಕ್ಕೆ ಕಾರಣ ಕರ್ನಾಟಕ ಸರಕಾರದ ವಾಣಿಜ್ಯ ತೆರಿಗೆ ಇಲಾಖೆ ಕೊಟ್ಟಿರುವ ನೋಟಿಸು.
ಕಳೆದ ಮೇನಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿಗಳ ಸಂಘಟನೆಗಳ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ಬಾರಿ ಅಧಿಕಾರಿಗಳಿಗೆ 1.20 ಲಕ್ಷ ಕೋಟಿ ರೂ ಜಿಎಸ್ ಟಿ ಸಂಗ್ರಹದ ಗುರಿ ನೀಡಿದ್ದರು. ಅದನ್ನು ಯಶಸ್ವಿಯಾಗಿ ತಲುಪಲೇಬೇಕು ಎಂದು ಸೂಚಿಸಿದ್ದರು. ಆ ಪ್ರಕಾರವಾಗಿ ಫೀಲ್ಡಿಗೆ ಇಳಿದಿರುವ ಅಧಿಕಾರಿಗಳಿಗೆ ಜಿಎಸ್ ಟಿ ಕಟ್ಟದ ಲಕ್ಷಾಂತರ ರೂಪಾಯಿ ವ್ಯವಹಾರ ಮಾಡುವ ಸಣ್ಣಪುಟ್ಟ ಅಂಗಡಿಗಳ ಮೇಲೆ ಕಣ್ಣು ಬಿದ್ದಿತ್ತು. ಅದರಂತೆ 45 ಲಕ್ಷದಿಂದ 1.5 ಕೋಟಿವರೆಗೆ ವಾರ್ಷಿಕ ವಹಿವಾಟು ನಡೆಸುವ ಅಂಗಡಿಯವರಿಗೆ ನೋಟಿಸು ಕೊಟ್ಟಿದ್ದಾರೆ.
ಸದ್ಯ ಪೇಟಿಎಂ ಹಾಗೂ ಫೋನ್ ಪೇ ಮೂಲಕ ಸ್ವೀಕರಿಸಿರುವ ಮೊತ್ತವನ್ನು ಮಾತ್ರ ವಾಣಿಜ್ಯ ತೆರಿಗೆ ಲೆಕ್ಕ ಹಾಕಿ ನೋಟಿಸ್ ನೀಡಿದೆ. ಜಿಎಸ್ ಟಿ ನೋಂದಣಿ ಮಾಡಿಕೊಳ್ಳದೇ ಜಿಎಸ್ ಟಿ ಮಿತಿಯನ್ನು ಮೀರಿ ಹಣ ಸ್ವೀಕರಿಸಿರುವ ಕಾರಣ ಸ್ವೀಕೃತವಾಗಿರುವ ಮೊತ್ತದ ಮೇಲೆ 18 ರಷ್ಟು ಜಿಎಸ್ ಟಿ ಜೊತೆಗೆ ದಂಡ ವಿಧಿಸಲಾಗಿದೆ. ಈ ಕುರಿತು ಸರಿಯಾದ ಮಾಹಿತಿಯನ್ನು ಅಧಿಕಾರಿಗಳಿಗೆ ದಾಖಲೆ ಸಹಿತ ನೀಡಿದರೆ ಜಿಎಸ್ ಟಿ ಮೊತ್ತ ಕಡಿಮೆಯಾಗಲಿದೆ. ಅದೇ ರೀತಿ ಅನೇಕ ವ್ಯಾಪಾರಿಗಳಿಗೆ ವಹಿವಾಟಿನ ಮೊತ್ತ ಮಾತ್ರ ತಿಳಿಸಿ ಆ ಕುರಿತು ವಿವರಣೆ ನೀಡುವಂತೆ ನೋಟಿಸ್ ನೀಡಲಾಗಿದ್ದು, ನಿರ್ದಿಷ್ಟ ಜಿಎಸ್ ಟಿ ಮೊತ್ತ ಮತ್ತು ದಂಡದ ಮೊತ್ತ ನಿಗದಿಪಡಿಸಿಲ್ಲ.
ಈಗ ನೋಟಿಸ್ ನೀಡಿರುವುದೆಲ್ಲ ಯುಪಿಐ ಮೂಲಕ ಸ್ವೀಕರಿಸಿದ ಮೊತ್ತದ ಆಧಾರದ ಮೇಲೆ ಮಾತ್ರ. ಯುಪಿಐ ಹೊರತಾಗಿ ನಗದು ವ್ಯಾಪಾರವನ್ನು ಶೇ 20 ರಿಂದ 30 ರಷ್ಟು ಎಂದು ಪರಿಗಣಿಸಿದರೂ ವಹಿವಾಟಿನ ಮೊತ್ತ ಇನ್ನೂ ಹೆಚ್ಚಳವಾಗಲಿದೆ. ಬೆಂಗಳೂರಿನ ಹಲವು ಮಾಂಸದ ಅಂಗಡಿ, ಹೂವಿನ ಅಂಗಡಿ, ಸಣ್ಣ ಬೇಕರಿ, ಕಾಂಡಿಮೆಂಟ್ಸ್ ಹೀಗೆ ಅಸಂಖ್ಯಾತ ಅಂಗಡಿಯವರು ಜಿಎಸ್ ಟಿ ನೋಂದಣಿ ಮಾಡದೇ ಹೆಚ್ಚಿನ ಎಲ್ಲಾ ವ್ಯವಹಾರಗಳನ್ನು ಯುಪಿಐ ಮೂಲಕ ಮಾಡಿದ ಕಾರಣ ಈಗ ಎಲ್ಲಾ ಲೆಕ್ಕವೂ ತೆರಿಗೆ ಇಲಾಖೆ ಸಿಕ್ಕಿದೆ. ಆದ್ದರಿಂದ ಈಗ ಜಿಎಸ್ ಟಿ ಕಟ್ಟದ ಅಂಗಡಿಯವರು ನಾವು ಕ್ಯಾಶ್ ಮಾತ್ರ ತೆಗೆದುಕೊಳ್ಳುತ್ತೇವೆ, ಯುಪಿಐ ಇಲ್ಲ ಎಂದು ಹೇಳುತ್ತಿದ್ದಾರೆ. ಅದಕ್ಕಾಗಿ ಮುಂದಿನ ವಾರ ಒಂದು ದಿನ ಎಲ್ಲಾ ಸಣ್ಣಪುಟ್ಟ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.