ಅಕ್ಟೋಬರ್ 2 ರಂದು ರಿಷಬ್ ಶೆಟ್ಟಿಯ ಕಾಂತಾರ ಅಧ್ಯಾಯ 1 ಬಿಡುಗಡೆ!

ಕರಾವಳಿಯ ಹೆಮ್ಮೆಯ ಕುಡಿ ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ “ಕಾಂತಾರ ಅಧ್ಯಾಯ 1″ ಶೂಟಿಂಗ್ ಮುಕ್ತಾಯಗೊಂಡಿದ್ದು, ಅಕ್ಟೋಬರ್ 2 ರಂದು ವಿಶ್ವಾದ್ಯಂತ ಚಿತ್ರ ಬಿಡುಗಡೆಯಾಗಲಿದೆ. ಸಿನೆಮಾದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು, 2.06 ನಿಮಿಷಗಳ ವಿಡಿಯೋಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಮಿಲಿಯನ್ ಗಟ್ಟಲೆ ಅಧಿಕ ವೀಕ್ಷಣೆ ಕಂಡಿದೆ.
ಈ ಸಿನೆಮಾದ ಚಿತ್ರೀಕರಣ ಮುಗಿದಿರುವುದಾಗಿ ಸಿನೆಮಾ ತಂಡ ಅಧಿಕೃತವಾಗಿ ಘೋಷಿಸಿದೆ. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ಈ ಮೇಕಿಂಗ್ ಬಿಡುಗಡೆಯಾಗಿದ್ದು, ಇದರಲ್ಲಿ ಕಾಂತಾರದ ಅಗಾಧತೆಯನ್ನು ಕಟ್ಟಿಕೊಡಲಾಗಿದೆ. ಕಾಂತಾರದ ಸೆಟ್ ಗಳ ವಿಸ್ತಾರತೆಯನ್ನು ಈ ಸಿನೆಮಾದಲ್ಲಿ ನೋಡಬಹುದಾಗಿದೆ. ಅದರೊಂದಿಗೆ ಆ ಸೆಟ್ ನಿರ್ಮಾಣದ ಪರಿಶ್ರಮ ಸಹಿತ ಕಲಾವಿದರ ತಲ್ಲೀನತೆ, ಜನ ನೋಡದ ತಾಣಗಳ ಪರಿಚಯ ಎಲ್ಲವನ್ನು ಇಲ್ಲಿ ಕಾಣಬಹುದಾಗಿದೆ. ಈ ಮೇಕಿಂಗ್ ವಿಡಿಯೋಗೆ ರಿಷಬ್ ಶೆಟ್ಟಿ ಸ್ವತ: ಧ್ವನಿ ನೀಡಿದ್ದಾರೆ. ” ನನ್ನ ನೆಲದ ಕಥೆಯನ್ನು ಇಡೀ ಪ್ರಪಂಚಕ್ಕೆ ಹೇಳಬೇಕು ಎನ್ನುವುದು ನನ್ನ ಕನಸು. ನಮ್ಮ ಊರು, ನಮ್ಮ ಜನ, ನಮ್ಮ ನಂಬಿಕೆಗಳು. ನಾನು ಆ ಕನಸಿನ ಬೆನ್ನು ಹತ್ತುವುದಕ್ಕೆ ಶುರು ಮಾಡಿದಾಗ ಸಾವಿರಾರು ಜನ ನನ್ನ ಬೆನ್ನ ಹಿಂದೆ ನಿಂತರು. 3 ವರ್ಷಗಳ ಪರಿಶ್ರಮ, 250 ದಿನಗಳ ಚಿತ್ರೀಕರಣ, ಎಷ್ಟೇ ಕಷ್ಟ ಬಂದರೂ ನಾನು ನಂಬಿದ ದೈವ ನನ್ನ ಕೈಬಿಡಲಿಲ್ಲ. ಪ್ರತಿ ದಿನ ಸೆಟ್ ನಲ್ಲಿ ಸಾವಿರಾರು ಜನರನ್ನು ನೋಡುತ್ತಿದ್ದಾಗ ನನಗೆ ಕಾಡುತ್ತಿದ್ದ ವಿಷಯ ಒಂದೇ. ಇದು ಕೇವಲ ಸಿನೆಮಾ ಅಲ್ಲ. ಇದೊಂದು ಶಕ್ತಿ. ಕಾಂತಾರದ ಪ್ರಪಂಚಕ್ಕೆ ನಿಮ್ಮೆಲ್ಲರಿಗೂ ಸ್ವಾಗತ” ಎಂದಿದ್ದಾರೆ. ಸಿನೆಮಾದ ಮೇಕಿಂಗ್ ವಿಡಿಯೋ ನೋಡಿದ ಸಿನೆಮಾ ತಜ್ಞರು ಈ ಸಿನೆಮಾ ಬಾಕ್ಸ್ ಆಫೀಸ್ ವಿಷಯದಲ್ಲಿ ಎಲ್ಲಾ ದಾಖಲೆ ಮುರಿಯುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ.
ಈ ಸಿನೆಮಾದ ಮೂಲಕ ರಿಷಬ್ ಶೆಟ್ಟಿಯವರು ಕನ್ನಡದ ಕಂಪನ್ನು ಮತ್ತೊಮ್ಮೆ ಜಗತ್ತಿಗೆ ಪರಿಚಯಿಸಲಿದ್ದಾರೆ. ಅವರ ಪ್ಯಾನ್ ಸ್ಟಾರ್ ಸ್ಟೇಟಸ್ ಹೀಗೆ ಮುಂದುವರೆಯಲಿದೆ. ಕರಾವಳಿ ಕರ್ನಾಟಕದ ಕಲಾವಿದನೊಬ್ಬ ಕನ್ನಡದ ಕಂಪನ್ನು ಕಾಡಂಚಿನಿಂದ ಜಗತ್ತಿಗೆ ತೆಗೆದುಕೊಂಡು ಹೋಗುವುದೆಂದರೆ ಅದು ಸುಮ್ಮನೆ ಮಾತಲ್ಲ. ಆ ನಿಟ್ಟಿನಲ್ಲಿ ಹೊಂಬಾಳೆ ಬ್ಯಾನರ್ ಯಶಸ್ವಿಯಾಗಲಿದೆ ಎನ್ನುವುದು ಪಕ್ಕಾ. ಈ ಸಿನೆಮಾದ ಮೇಕಿಂಗ್ ನೋಡಿದ ಜನ ಅಕ್ಟೋಬರ್ 2 ನೇ ತಾರೀಕಿಗಾಗಿ ಕಾಯುತ್ತಾ ಇದ್ದಾರೆ. ಆವತ್ತು ಸಿನೆಮಾ ಬಿಡುಗಡೆಯಾಗಲಿದೆ.