ಕರ್ನಾಟಕದಲ್ಲಿ “ಮನೆಮನೆಗೆ ಪೊಲೀಸ್” ಏನು ಕಥೆ!

ಕರ್ನಾಟಕದಲ್ಲಿ ಮನೆಮನೆಗೆ ಪೊಲೀಸ್ ಎಂಬ ಅಭಿಯಾನಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ. ಪೊಲೀಸ್ ವ್ಯವಸ್ಥೆ ಬಲಪಡಿಸುವುದು ಮತ್ತು ಪೊಲೀಸರ ಹಾಗೂ ನಾಗರಿಕರ ನಡುವೆ ಉತ್ತಮ ಸೌಹಾರ್ದತೆಯನ್ನು ಸಾಧಿಸುವುದು ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಸ್ಥಾಪಿಸುವುದು ಸೇರಿದಂತೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಉತ್ತಮಗೊಳಿಸುವ ಹೆಜ್ಜೆಯಾಗಿ ಮನೆಮನೆಗೆ ಪೊಲೀಸ್ ಕಾರ್ಯಕ್ರಮ ಜಾರಿಗೆ ತರಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಮನೆಮನೆಗೆ ಪೊಲೀಸ್ ವಿನೂತನ ಕಾರ್ಯಕ್ರಮಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಚಾಲನೆ ನೀಡಿದ್ದಾರೆ. ಪೊಲೀಸ್ ಇಲಾಖೆ ಹೊರತಂದಿರುವ “ಮನೆ ಮನೆಗೆ ಪೊಲೀಸ್” ಕೈಪಿಡಿಯನ್ನು ಅವರು ಬಿಡುಗಡೆ ಮಾಡಿದ್ದಾರೆ.
ದೇಶದಲ್ಲಿ ಪ್ರಥಮ ಬಾರಿಗೆ ಮನೆಮನೆಗೆ ಪೊಲೀಸ್ ವಿನೂತನ ಕಾರ್ಯಕ್ರಮ ಮಾಡಲಾಗುತ್ತಿದೆ. ಬೇರೆ ಯಾವ ರಾಜ್ಯದಲ್ಲಿಯೂ ಸಹ ಇಂತಹ ಕಾರ್ಯಕ್ರಮ ಮಾಡಿಲ್ಲ. ಇದರ ಯಶಸ್ಸು ದೇಶವ್ಯಾಪಿ ಬೇರೆ ರಾಜ್ಯಗಳಲ್ಲಿಯೂ ಆಗುತ್ತದೆ ಎಂದು ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ನಮ್ಮ ಪೊಲೀಸರು ಜನಸ್ನೇಹಿಯಾಗಬೇಕು. ಸಹೋದರತ್ವದ ಭಾವನೆಯಿಂದ ಪೊಲೀಸರನ್ನು ನೋಡಬೇಕು. ಆ ನಿಟ್ಟಿನಲ್ಲಿ ನಾವೇ ಜನರ ಬಳಿಗೆ ಹೋಗೋಣ. ಅವರ ಕಷ್ಟಗಳನ್ನು ಆಲಿಸಿ, ಪರಿಹರಿಸಿದರೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ ಎಂದರು.
ಈಗಾಗಲೇ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಅನುಷ್ಟಾನಕ್ಕೆ ಬರುತ್ತಿದೆ. ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊಡನೆ ಮನೆಮನೆಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿ ನಿಮ್ಮ ಏರಿಯಾದಲ್ಲಿ ನಿತ್ಯ ಬೀಟ್ ಯಾರು ಬರುತ್ತಾರೆ ಎನ್ನುವುದರಿಂದ ಹಿಡಿದು ಎಲ್ಲಾ ವಿಷಯಗಳನ್ನು ತಿಳಿಸಿ ಫೋನ್ ನಂಬರ್ ಗಳನ್ನು ಮುದ್ರಿಸಿರುವ ಕಾಗದವನ್ನು ನೀಡಿ ಸಮಸ್ಯೆಯಾದರೆ ತಿಳಿಸಬೇಕಾದ ಫೋನ್ ಸಂಖ್ಯೆಗಳನ್ನು ಕೂಡ ನೀಡುತ್ತಾರೆ. ಇನ್ನು ಯಾವ ಮನೆಯಲ್ಲಿ ಯಾರು ಇರುತ್ತಾರೆ? ಎಷ್ಟು ಕಾಲದಿಂದ ಅಲ್ಲಿಯೇ ವಾಸಿಸುತ್ತಿದ್ದಾರೆ? ಏನಾದರೂ ಸಮಸ್ಯೆಗಳಿವೆಯಾ ಎನ್ನುವ ವಿಷಯಗಳನ್ನು ಕೂಡ ಕಲೆ ಹಾಕುತ್ತಿದ್ದಾರೆ. ಇದೆಲ್ಲಾ ಡೇಟಾ ಪೊಲೀಸರ ಬಳಿ ಇರುತ್ತದೆ.
ಇನ್ನು ನೆರೆಮನೆ, ವಠಾರ, ಏರಿಯಾದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ, ಮಕ್ಕಳಿಗೆ ತೊಂದರೆಯಾಗುತ್ತಿದ್ದರೆ, ಡ್ರಗ್ಸ್ ಚಟುವಟಿಕೆ ನಡೆಯುತ್ತಿದ್ರೆ ಎಲ್ಲಾ ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಳ್ಳಬಹುದು. ಈ ಎಲ್ಲಾ ಡೇಟಾಗಳನ್ನು ಡಿಜಿಟಲೈಸ್ ಮಾಡಿಕೊಳ್ಳಲಾಗುತ್ತದೆ. ಬೀಟ್ ಸಿಬ್ಬಂದಿಗಳಿಗೆ ಟ್ಯಾಬ್ ಗಳನ್ನು ನೀಡಲಾಗುವುದು. ಜನಪ್ರತಿನಿಧಿಗಳು, ಉದ್ಯಮಿಗಳು, ಸಾಹಿತಿಗಳ ಬಗ್ಗೆನೂ ಅವರು ಸಾಫ್ಟ್ ಟಾರ್ಗೆಟ್ ಆಗದಂತೆ ಗಮನವಹಿಸಿ, ನಿಗಾವಹಿಸಲು ಸಹಾಯವಾಗುತ್ತದೆ. ಒಟ್ಟಿನಲ್ಲಿ ಇಂತಹ ಉತ್ತಮ ಯೋಜನೆಯನ್ನು ಜಾರಿಗೆ ತಂದಿರುವ ರಾಜ್ಯ ಸರಕಾರ ಇದನ್ನು ಸಮರ್ಪಕವಾಗಿ ಜಾರಿಗೆ ತಂದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮಗೊಳ್ಳುವಂತಾಗಲಿ ಎನ್ನುವುದು ನಾಗರಿಕರ ಆಶಯ.