6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..

ಪಂಜಾಬಿನ ಅಂತರಾಷ್ಟ್ರೀಯ ಗಡಿ ಮೂಲಕ ಭಾರತದತ್ತ ಸಾಗಿ ಬರುತ್ತಿದ್ದ ಪಾಕಿಸ್ತಾನದ ಆರು ಡ್ರೋನ್ ಗಳನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ (ಬಿಎಸ್ ಎಫ್) ಹೊಡೆದುರುಳಿಸಿದ್ದಾರೆ ಎಂದು ಬಿಎಸ್ ಎಫ್ ವಕ್ತಾರರೊಬ್ಬರು ಗುರುವಾರ ಮಾಹಿತಿ ನೀಡಿದ್ದಾರೆ.
ಅಮೃತಸರದ ಮೋಧೆ ಗ್ರಾಮದ ವ್ಯಾಪ್ತಿಯಲ್ಲಿ 5 ಡ್ರೋನ್ ಗಳು ಕಾಣಿಸಿಕೊಂಡಿದ್ದವು. ಕರ್ತವ್ಯದಲ್ಲಿದ್ದ ಯೋಧರು ಶೂಟ್ ಮಾಡಿ ಅವುಗಳನ್ನು ಧರೆಗೆ ಉರುಳಿಸಿದ್ದಾರೆ. ಅದರಲ್ಲಿ ಮೂರು ಪಿಸ್ತುಲ್ ಗಳು, ಮೂರು ಮ್ಯಾಗಝೀನ್ ಗಳು ಮತ್ತು ಒಂದು ಕೆಜಿಗೂ ಹೆಚ್ಚು ತೂಕದ ನಾಲ್ಕು ಹೆರಾಯಿನ್ ಪ್ಯಾಕೆಟ್ ಗಳು ಇದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂತರ ಗುರುವಾರ ಬೆಳಿಗ್ಗೆ ಅಟ್ಟಾರಿ ಗ್ರಾಮದ ಬಳಿ ಮತ್ತೊಂದು ಡ್ರೋನ್ ಪತ್ತೆಯಾಗಿದ್ದು, ಅದನ್ನು ಕೂಡ ಧರಾಶಾಹಿಗೊಳಿಸಲಾಗಿದೆ. ಅದರಲ್ಲಿ ಎರಡು ಮ್ಯಾಗಝಿನ್ ಗಳು ಇದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತರಣ್ ಜಿಲ್ಲೆಯ ದಾಲ್ ಗ್ರಾಮದ ಬಳಿ ನಡೆದ ಕಾರ್ಯಾಚರಣೆಯ ಸಮಯದಲ್ಲಿ ಭತ್ತದ ಗದ್ದೆಯಲ್ಲಿ ಪಿಸ್ತೂಲ್ ಮತ್ತು ಮ್ಯಾಗಜಿನ್ ಬಿಡಿಭಾಗಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ. ಒಟ್ಟಿನಲ್ಲಿ ಪಾಕಿಸ್ತಾನ ಎಷ್ಟೇ ಪೆಟ್ಟು ತಿಂದರೂ ತನ್ನ ಚಾಳಿ ಬಿಡುವುದಿಲ್ಲ ಎನ್ನುವುದು ಮತ್ತೆ ಮತ್ತೇ ಸಾಬೀತಾಗುತ್ತಿದೆ. ಇನ್ನು ಭಾರತವನ್ನು ಕೆಣಕಿ ತಾನು ಉಳಿಯುವುದಿಲ್ಲ ಎಂದು ಗೊತ್ತಿದ್ದರೂ ಹಿಂದಿನ ಬಾಗಿಲಿನಿಂದ ಕಿರಿಕಿರಿ ಮಾಡುವುದನ್ನು ಮುಂದುವರೆಸುತ್ತಿದೆ.