ಬಂಧೀಖಾನೆ ಮುಖ್ಯಸ್ಥರಾಗಿ ದಯಾನಂದ ಮತ್ತೆ ಸೇವೆಯಲ್ಲಿ!

ಕರ್ನಾಟಕ ಸರಕಾರ ಹಿರಿಯ ಐಪಿಎಸ್ ಅಧಿಕಾರಿ ಬಿ ದಯಾನಂದ್ ಅವರನ್ನು ಬಂಧಿಖಾನೆ ಮುಖ್ಯಸ್ಥರಾಗಿ ನೇಮಿಸಿ ಆದೇಶ ಹೊರಡಿಸಿದೆ. ಅವರು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನ ಹೊರಗೆ ಜೂನ್ 4 ರಂದು ನಡೆದ ದುರಂತದ ವಿಷಯದಲ್ಲಿ ರಾಜ್ಯ ಸರಕಾರದಿಂದ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು. ಆ ದುರ್ಘಟನೆಯಲ್ಲಿ 11 ಕ್ರೀಡಾಪ್ರೇಮಿಗಳು ದುರಂತ ಸಾವನ್ನಪ್ಪಿದ್ದರು. ಆ ದುರ್ಘಟನೆಯನ್ನು ಸರಿಯಾಗಿ ನಿರ್ವಹಿಸಲಿಲ್ಲ ಎನ್ನುವ ಕಾರಣಕ್ಕೆ ರಾಜ್ಯ ಸರಕಾರ ಐದು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಿತ್ತು. ಆದರೆ ಪ್ರಸ್ತುತ ಈ ಅಮಾನತನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ. ಬಿ ದಯಾನಂದ ಅವರು ಈಗ ಅಡಿಷನಲ್ ಡೈರೆಕ್ಟರ್ – ಜನರಲ್ ಆಫ್ ಪೊಲೀಸ್ ಶ್ರೇಣಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಸದ್ಯ ಬಿ ದಯಾನಂದ ಅವರು ಹೊಸ ಜವಾಬ್ದಾರಿಯನ್ನು ಸ್ವೀಕರಿಸಿದ್ದಾರೆ.
ಇನ್ನೊಬ್ಬ ಐಪಿಎಸ್ ಅಧಿಕಾರಿ ವಿಕಾಶ್ ಕುಮಾರ್ ವಿಕಾಶ್ ಅವರ ಅಮಾನತನ್ನು ಕೂಡ ಹಿಂದಕ್ಕೆ ಪಡೆಯಲಾಗಿದ್ದು, ಆಂತರಿಕ ಸುರಕ್ಷತಾ ವಿಭಾಗದ ಐಜಿಪಿಯಾಗಿ ನೇಮಕಗೊಳಿಸಿದ್ದಾರೆ. ಇನ್ನು ಅಮಾನಾತಾಗಿದ್ದ ಇನ್ನೊಬ್ಬ ಐಪಿಎಸ್ ಅಧಿಕಾರಿ ಶೇಖರ್ ಎಚ್ ಟಿ ಅವರನ್ನು ಬೆಂಗಳೂರಿನಲ್ಲಿ ಗುಪ್ತಚರ ವಿಭಾಗದ ವರಿಷ್ಠಾಧಿಕಾರಿಯಾಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ. ಇನ್ನು ಕಬ್ಬನ್ ಪಾರ್ಕ್ ಉಪವಿಭಾಗದ ಸಹಾಯಕ ಆಯುಕ್ತರಾಗಿದ್ದ ಸಿ ಬಾಲಕೃಷ್ಣ ಹಾಗೂ ಇನ್ಸಪೆಕ್ಟರ್ ಎ ಕೆ ಗಿರೀಶ್ ಅವರನ್ನು ಸೇವೆಗೆ ನಿಯೋಜಿಸಲಾಗಿದ್ದು, ಹುದ್ದೆಯನ್ನು ತೋರಿಸಲಾಗಿಲ್ಲ.
ಚಿನ್ನಸ್ವಾಮಿ ಮೈದಾನದ ಹೊರಗೆ ನಡೆದ ಕಾಲ್ತುಳಿತದಿಂದ ನಡೆದ ಸಾವು, ನೋವಿಗೆ ಐದು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತನಿಖೆಗೆ ಆದೇಶ ನೀಡಿದ್ದರು. ಅದರೊಂದಿಗೆ ಸಿಐಡಿ ತನಿಖೆಯನ್ನು ಕೂಡ ನಡೆಸಲಾಗುತ್ತಿದ್ದು, ಅದು ಇನ್ನೂ ಜಾರಿಯಲ್ಲಿದೆ.
ರಾಜ್ಯ ಸರಕಾರ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಜಿ ಜಗದೀಶ್ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ನ ಅವರಿಗೆ ವಿಚಾರಣೆ ನಡೆಸಿ ವರದಿ ನೀಡಲು ಸೂಚಿಸಿತ್ತು. ಆ ವರದಿಗಳ ಮೇರೆಗೆ ಜುಲೈ 24 ರಂದು ನಡೆದ ಕ್ಯಾಬಿನೆಟ್ ಸಭೆಯ ನಂತರ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ತಂಡ ಬೆಂಗಳೂರು, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಹಾಗೂ ಇವೆಂಟ್ ಮ್ಯಾನೇಜಮೆಂಟ್ ಸಂಸ್ಥೆ ಡಿಎನ್ ಎ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಚಿಂತನೆ ನಡೆಸಲಾಗಿದೆ.