ಮುಂದಿನ ಚುನಾವಣೆಯಲ್ಲಿಯೂ ನನ್ನ ಕೈ ಹಿಡಿಯಿರಿ: ವರುಣಾದಲ್ಲಿ ಸಿಎಂ ಮನವಿ!

ಸಿಎಂ ಸ್ಥಾನಕ್ಕೆ ಎರಡೂವರೆ ವರ್ಷಗಳ ಅಲಿಖಿತ ಒಪ್ಪಂದ ನಡೆದಿದೆ ಎನ್ನಲಾದ ರಾಜ್ಯ ಕಾಂಗ್ರೆಸ್ಸಿನ ಒಳಗಿನ ಸಿದ್ಧರಾಮಯ್ಯ ಹಾಗೂ ಡಿಕೆಶಿವಕುಮಾರ್ ಮತ್ತು ಹೈಕಮಾಂಡ್ ನಡುವಿನ ಅಗ್ರಿಮೆಂಟ್ ವಿಷಯ ಚರ್ಚೆಯಲ್ಲಿರುವಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಮುಂದಿನ ಬಾರಿಯೂ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ಅವರು ಸ್ವಕ್ಷೇತ್ರ ಮೈಸೂರು ಜಿಲ್ಲೆಯ ವರುಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿರುವ ಮಾತುಗಳು ಮತ್ತೊಮ್ಮೆ ರಾಜ್ಯ ರಾಜಕೀಯದಲ್ಲಿ ಸಂಚಲನ ಉಂಟು ಮಾಡುತ್ತಿದೆ. ” ಮುಂದಿನ ಚುನಾವಣೆಯಲ್ಲಿಯೂ ನನ್ನ ಕೈ ಹಿಡಿಯಿರಿ” ಎಂದು ಕ್ಷೇತ್ರದ ಮತದಾರರಲ್ಲಿ ಸಿಎಂ ಮನವಿಮಾಡಿಕೊಂಡಿರುವುದೇ ಅವರು ಮುಂದಿನ ಬಾರಿಯೂ ಸ್ಪರ್ಧಿಸುತ್ತಾರೆ ಎನ್ನುವುದಕ್ಕೆ ಪರೋಕ್ಷ ಸೂಚನೆ ಎಂದು ರಾಜಕೀಯ ವಿಶ್ಲೇಷಕರು ಲೆಕ್ಕ ಹಾಕುತ್ತಿದ್ದಾರೆ. ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ವರುಣಾ ಕ್ಷೇತ್ರವ್ಯಾಪ್ತಿಯ ಹದಿನಾರು ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿದ್ಧರಾಮಯ್ಯ ಸ್ವಕ್ಷೇತ್ರ ವರುಣಾ ಜನತೆಯ ಮುಂದೆ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ. ಈಗ ನನ್ನನ್ನು ನೀವು ಹೇಗೆ ಬೆಳೆಸಿದಿರೋ, ಅದೇ ರೀತಿ ಮುಂದೆಯೂ ನನಗೆ ಶಕ್ತಿ ತುಂಬಬೇಕು. ಮುಂದಿನ ಚುನಾವಣೆಯಲ್ಲಿಯೂ ನೀವು ನನ್ನ ಕೈ ಹಿಡಿದು ಮುನ್ನಡೆಸಬೇಕು. ಆಗ ನನಗೆ ಈಗಿನದಕ್ಕಿಂತ ಹೆಚ್ಚಾಗಿ ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದಿದ್ದಾರೆ.
ಸಿದ್ಧರಾಮಯ್ಯನವರು ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಇದೇ ಅವರ ಕೊನೆ ಚುನಾವಣೆ ಎಂದು 2023 ರಲ್ಲಿ ಪ್ರಚಾರ ನಡೆದಿತ್ತು. ಸಿದ್ಧರಾಮಯ್ಯ ಕೂಡ ಅದೇ ಅರ್ಧದ ಮಾತುಗಳನ್ನು ಆಡಿದ್ದರು. ಅವರಿಗೂ ಈಗ 77 ಆಗಿದ್ದು, ಮುಂದಿನ ಚುನಾವಣೆ ಹೊತ್ತಿನಲ್ಲಿ 80 ತುಂಬಲಿದೆ. ಆದ್ದರಿಂದ ಅವರು ಚುನಾವಣಾ ರಾಜಕೀಯದಿಂದ ನಿವೃತ್ತರಾಗುತ್ತಾರೆ ಎಂದೇ ಹೇಳಲಾಗುತ್ತಿತ್ತು. ಆದರೆ ಅವರ ಈಗಿನ ಹೇಳಿಕೆಯನ್ನು ಗಮನಿಸಿದರೆ ನಿವೃತ್ತಿಯ ಯೋಚನೆ ಅವರಿಗೆ ಇದ್ದಂತಿಲ್ಲ. ಇನ್ನು 83 ವರ್ಷ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರೇ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾಗಿರುವಾಗ, ರಾಜ್ಯಸಭಾ ಸದಸ್ಯರಾಗಿರುವಾಗ ಸಿದ್ಧರಾಮಯ್ಯನವರು ತಮಗೆಷ್ಟು ಮಹಾ ವಯಸ್ಸಾಗಿದೆ ಎಂದು ಅಂದುಕೊಳ್ಳಬಹುದು. ಆದರೆ ಅವರು ಈ ಬಾರಿ ಪೂರ್ಣ ಐದು ವರ್ಷಗಳನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕಳೆದರೆ ಮುಂದಿನ ಚುನಾವಣೆಯಲ್ಲಿ ಅವರ ರಾಜಕೀಯ ಭವಿಷ್ಯವನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುವ ಸಾಧ್ಯತೆ ಇದೆ. ಇನ್ನು ತಾನು ಕೈ ಹಿಡಿಯಿರಿ ಎಂದು ಹೇಳಿದ್ದು ತನಗೆ ಅಲ್ಲ. ಮಗನಿಗಾಗಿ ಎಂದು ಸಿದ್ದು ಯೂಟರ್ನ್ ಹೊಡೆದರೂ ಅಚ್ಚರಿ ಇಲ್ಲ. ಒಟ್ಟಿನಲ್ಲಿ ರಾಜಕಾರಣಿಗಳು ತಮ್ಮ ಆರೋಗ್ಯ ಚೆನ್ನಾಗಿ ಇರುವ ತನಕ ಎಷ್ಟೇ ವಯಸ್ಸಾಗಿದ್ದರೂ ಅಧಿಕಾರದ ಕುರ್ಚಿಗೆ ಅಂಟಿಕೊಳ್ಳುತ್ತಾರೆ ಎನ್ನುವುದು ನಿಜ.