ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!

ಧರ್ಮಸ್ಥಳದಲ್ಲಿ ಅನಾಮಿಕ ದೂರುದಾರನ ಬುರುಡೆ ಪ್ರಕರಣದಲ್ಲಿ ಏನೂ ಸತ್ಯಾಂಶವಿಲ್ಲ ಎಂದು ಬಹಿರಂಗವಾಗುತ್ತಿದ್ದಂತೆ ಅವನನ್ನು ಯಾರೋ ಹಿಂದಿನಿಂದ ಆಡಿಸುತ್ತಿದ್ದಾರೆನೋ ಎನ್ನುವ ಅನುಮಾನ ದಟ್ಟವಾಗುತ್ತಿದೆ. ಧರ್ಮಸ್ಥಳದ ಹೆಸರನ್ನು ಹಾಳು ಮಾಡಲು ಯಾರೋ ಷಡ್ಯಂತ್ರ ನಡೆಸುತ್ತಿದ್ದಾರೋ ಎನ್ನುವ ವಿಷಯವೇ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ತಾನು ಧರ್ಮಸ್ಥಳ ಬಿಟ್ಟ ನಂತರ ತಮಿಳುನಾಡಿನಲ್ಲಿದ್ದೆ ಎಂದು ಮಾಸ್ಕ್ ಮ್ಯಾನ್ ಹೇಳಿದ ನಂತರ ತಮಿಳುನಾಡಿನವರು ಯಾರಾದರೂ ಈ ಒಟ್ಟು ಕಥೆಯ ಹಿಂದೆ “ಕೈ” ಆಡಿಸುತ್ತಾ ಇರಬಹುದೋ ಎನ್ನುವ ಸಂಶಯ ಎಲ್ಲರಲ್ಲಿಯೂ ಇತ್ತು. ಅದಕ್ಕೆ ಈಗ ಸರಿಯಾಗಿ ಮಾಜಿ ಸಚಿವ, ಹಾಲಿ ಶಾಸಕ ಜನಾರ್ದನ ರೆಡ್ಡಿ ಈ ಒಟ್ಟು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದ್ದು ಇದರ ಮಾಸ್ಟರ್ ಮೈಂಡ್ ಯಾರು ಎನ್ನುವುದನ್ನು ತಿಳಿಸಿದ್ದಾರೆ. ಅವರ ಪ್ರಕಾರ ಈ ಷಡ್ಯಂತ್ರದ ಹಿಂದೆ ತಮಿಳುನಾಡಿನ ಕಾಂಗ್ರೆಸ್ ಸಂಸದ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಕೈವಾಡವಿದೆ ಎನ್ನುವ ಮಾಹಿತಿಯನ್ನು ಅವರು ತಿಳಿಸಿದ್ದಾರೆ.
ಜನಾರ್ದನ ರೆಡ್ಡಿಯವರ ಪ್ರಕಾರ ಈ ಪ್ರಕರಣದ ರೂಪುರೇಶೆ ಸಿದ್ಧಪಡಿಸಿದವರೇ ಸಸಿಕಾಂತ್ ಸೆಂಥಿಲ್. ದಕ್ಷಿಣ ಕನ್ನಡದ ಇಬ್ಬರು ವ್ಯಕ್ತಿಗಳೊಂದಿಗೆ ಸೇರಿ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲು ಸಂಚು ಹೂಡಿದ್ದರು. ಮುಖ್ಯಮಂತ್ರಿಗಳಿಗೆ ಹಾಗೂ ಉಪಮುಖ್ಯಮಂತ್ರಿಗಳಿಗೆ ಈ ಪ್ರಕರಣದಲ್ಲಿ ಅಂತಹ ಆಸಕ್ತಿ ಇರಲಿಲ್ಲವಾದರೂ ಹೈಕಮಾಂಡ್ ಒತ್ತಡ ತಂದು ಎಸ್ ಐಟಿ ರಚಿಸಿ ತನಿಖೆ ಮಾಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಎಡಪಂಥಿಯ ನಿಲುವುಗಳನ್ನು ಹೊಂದಿರುವ ಸಸಿಕಾಂತ್ ಸೆಂಥಿಲ್ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಜನಾರ್ದನ ರೆಡ್ಡಿ ಆಗ್ರಹಿಸಿದ್ದಾರೆ. ಈ ಪ್ರಕರಣದ ಬಗ್ಗೆ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಇಲ್ಲವೇ ಸಿಬಿಐ ತನಿಖೆ ನಡೆಸುವ ಅಗತ್ಯವಿದೆ ಎಂದು ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. ಧರ್ಮಸ್ಥಳ ದೇವಸ್ಥಾನದ ವಿಷಯದಲ್ಲಿ ನಡೆಯುತ್ತಿರುವ ಷಡ್ಯಂತ್ರದಲ್ಲಿ ಸಸಿಕಾಂತ್ ಸೆಂಥಿಲ್ ಅವರ ಕೈವಾಡವಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಹಿನ್ನಲೆಯಲ್ಲಿ ದೇವಸ್ಥಾನದ ಘನತೆಗೆ ದಕ್ಕೆ ತರುವಂತಹ ಕೆಲಸಗಳು ನಡೆದಿವೆ ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಷಡ್ಯಂತ್ರದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.
ಅಷ್ಟಕ್ಕೂ ಸಸಿಕಾಂತ್ ಸೆಂಥಿಲ್ ಅವರು ತಮಿಳುನಾಡಿನ ತಿರುವಲ್ಲೂರು ಕ್ಷೇತ್ರದ ಸಂಸದರಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆಲುವನ್ನು ಸಾಧಿಸಿದ್ದರು. 2009 ರಿಂದ 2019 ರವರೆಗೆ ರಾಜ್ಯ ಸರಕಾರದಲ್ಲಿ ಐಎಎಸ್ ಅಧಿಕಾರಿಯಾಗಿ ವಿವಿಧ ಹುದ್ದೆ ನಿಭಾಯಿಸಿದ್ದರು. ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ 2020 ರಲ್ಲಿ ಅವರು ಕಾಂಗ್ರೆಸ್ ಪಕ್ಷ ಸೇರಿ ಸಂಸದರಾಗಿದ್ದಾರೆ. ಅವರು 2019 ರಲ್ಲಿ ರಾಜೀನಾಮೆ ನೀಡುವ ಸಂದರ್ಭದಲ್ಲಿ ಕೊನೆಯದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ 2017 ರಿಂದ ಸೇವೆಯಲ್ಲಿದ್ದರು.