ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!

ಧರ್ಮಸ್ಥಳದ ಪರ ವಿರುದ್ಧದ ಚರ್ಚೆಗಳು ಕಾವು ಪಡೆಯುತ್ತಿರುವ ಈ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಏನು ಹೇಳುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಇತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದ್ದು, ” ಈ ಆರೋಪಗಳು ಆಧಾರರಹಿತ ಮತ್ತು ಸುಳ್ಳು. ಇಂತಹ ಆರೋಪಗಳಿಂದ ನಾನು ಬಹಳ ನೊಂದಿದ್ದೇನೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯಗಳನ್ನು ಬಿಂಬಿಸುವ ರೀತಿ ನೈತಿಕವಾಗಿ ತಪ್ಪು. ಈ ಕಾರಣಗಳಿಗಾಗಿ ಎಸ್ ಐಟಿ ರಚನೆ ಕುರಿತ ಸರಕಾರದ ನಿರ್ಧಾರವನ್ನು ನಾವು ಅಂದೇ ಸ್ವಾಗತಿಸಿದ್ದೆವು. ಅದನ್ನು ರಚಿಸಿದ್ದು ಒಳ್ಳೆಯದು. ಸತ್ಯ ಒಮ್ಮೆಗೆ ಹೊರಬರಬೇಕು. ಆರೋಪ ಮಾಡಿ, ಅವು ಹಾಗೆಯೇ ಉಳಿಯುವುದು ಒಳ್ಳೆಯದಲ್ಲ. ಹೀಗಾಗಿ ಆರೋಪಗಳ ಕುರಿತು ತ್ವರಿತವಾಗಿ ತನಿಖೆ ನಡೆಸಬೇಕಿದೆ” ಎಂದು ಮನವಿ ಮಾಡಿದರು.
“ತನಿಖೆ ಆದಷ್ಟು ಬೇಗ ಮುಕ್ತಾಯಗೊಂಡು ಸಮಸ್ಯೆ ಬಗೆಹರಿಯಬೇಕೆಂದು ನಾವು ಬಯಸುತ್ತೇವೆ. ನಮ್ಮ ಎಲ್ಲಾ ದಾಖಲೆ ಹಾಗೂ ವಿಶೇಷವಾಗಿ ನಾವು ಎಲ್ಲದಕ್ಕೂ ತೆರೆದುಕೊಂಡಿದ್ದೇವೆ. ಎಸ್ ಐಟಿ ಕೂಲಂಕುಶವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಎಂದು ಹೇಳಿದರು. ಇದೇ ವೇಳೆ ” ಧರ್ಮಸ್ಥಳ ಮತ್ತು ಅದರ ಮೇಲಿರುವ ನಂಬಿಕೆಯನ್ನು ಗುರಿಯಾಗಿಸಿ ಕಳೆದ 14 ವರ್ಷಗಳಿಂದ ಸಂಘಟಿತ ಅಭಿಯಾನ ನಡೆಯುತ್ತಿದೆ” ಎಂದು ಆರೋಪಿಸಿದ ಅವರು ” ನಾವು ಮಾಡುತ್ತಿರುವ ಒಳ್ಳೆಯ ಕೆಲಸಗಳಿಂದ ಬೇಸತ್ತ ಕೆಲವು ಶಕ್ತಿಗಳು ಸುಳ್ಳು ಪ್ರಚಾರವನ್ನು ನಡೆಸುತ್ತವೆ. ಆದರೆ ನಾವು ವಿಚಲಿತರಾಗಿರುವುದಿಲ್ಲ” ಎಂದರು.
ಕೆಲವು ಸಾಮಾಜಿಕ ಮಾಧ್ಯಮಗಳು ಯುವ ಮನಸ್ಸುಗಳನ್ನು ಕಲುಷಿತಗೊಳಿಸಿವೆ ಎಂದು ಧರ್ಮಾಧಿಕಾರಿಗಳು ಕಳವಳ ವ್ಯಕ್ತಪಡಿಸಿದರು. ಸೌಜನ್ಯಳಿಗೆ ನ್ಯಾಯಕ್ಕಾಗಿ ಆಗ್ರಹಗಳು ಮತ್ತೆ ಮುನ್ನಲೆಗೆ ಬಂದಿರುವ ಬಗ್ಗೆ ಮಾತನಾಡಿದ ಹೆಗ್ಗಡೆ ” ಅಂತಹ ಘಟನೆ ನಡೆದಿದೆ ಎಂದು ನಮಗೆ ತಿಳಿಯುತ್ತಿದ್ದಂತೆ ಸರಕಾರಕ್ಕೆ ಅದನ್ನು ಅದೇ ದಿನ ತಿಳಿಸಿದ್ದೇವು. ನಮ್ಮ ಕುಟುಂಬದ ಮೇಲಿನ ಆರೋಪಗಳು ಆಧಾರರಹಿತ. ಯಾರ ಮೇಲೆ ಕೃತ್ಯದ ಆರೋಪ ಹೊರಿಸಲಾಗುತ್ತಿದೆಯೋ, ಅವರು ಆ ಸಮಯದಲ್ಲಿ ಶಿಕ್ಷಣಕ್ಕಾಗಿ ವಿದೇಶದಲ್ಲಿದ್ದರು. ಇದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸಿದ್ದೇವೆ. ಇವು ದುಷ್ಟ ಪ್ರಚಾರಗಳು” ಎಂದು ಕಿಡಿಕಾರಿದರು.
ಇದೇ ವೇಳೆ ಆಸ್ತಿ ದುರ್ಬಳಕೆ ಆರೋಪವನ್ನು ತಿರಸ್ಕರಿಸಿದ ಹೆಗ್ಗಡೆ ” ನಮ್ಮ ಪರಿವಾರ ಅತ್ಯಲ್ಪ ಆಸ್ತಿಯನ್ನು ಹೊಂದಿದೆ. ಅವುಗಳನ್ನು ದಾಖಲೆ ಸಮೇತ ಟ್ರಸ್ಟ್ ನೋಡಿಕೊಳ್ಳುತ್ತದೆ. ಆಸ್ತಿ ಸ್ವಾಧೀನದ ಬಗ್ಗೆಯೂ ದಾಖಲೆ ಪುರಾವೆಗಳಿವೆ. ಟ್ರಸ್ಟ್ ಅನ್ನು ನಮ್ಮ ಪರಿವಾರದ ಸದಸ್ಯರು ಪಾರದರ್ಶಕವಾಗಿ ನಿರ್ವಹಿಸುತ್ತಿದ್ದಾರೆ. ನಾವು ನಾಲ್ವರು ಸಹೋದರರು, ಒಬ್ಬ ಸಹೋದರ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ನೋಡಿಕೊಳ್ಳುತ್ತಾರೆ. ಇನ್ನೊಬ್ಬ ಸಹೋದರ ಇಲ್ಲಿ ದೇವಾಲಯ ಮತ್ತು ಸಾಮಾಜಿಕ ಕಾರ್ಯಗಳನ್ನು ನೋಡಿಕೊಳ್ಳುತ್ತಾರೆ. ನನಗೆ ಒಬ್ಬ ಸಹೋದರಿ ಇದ್ದಾರೆ. ಅವರ ಪತಿ ಧಾರವಾಡದ ಎಸ್ ಡಿಎಂ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದಾರೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಟ್ರಸ್ಟ್ ಹೆಸರಿನಲ್ಲಿವೆ” ಎಂದರು.