ಸ್ನೇಹಮಯಿ ಕೃಷ್ಣ ಅವರಿಂದ ಸುಜಾತ ಭಟ್ ಹಾಗೂ ಇತರರ ಮೇಲೆ ಪ್ರಕರಣ ದಾಖಲು!

ನಿರೀಕ್ಷಣಾ ಜಾಮೀನು ಪಡೆದ ಸಮೀರ್ ಯಾವ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿದ್ದ!
ಧರ್ಮಸ್ಥಳ ಸಮಾಧಿ ಪ್ರಕರಣದಲ್ಲಿ ಈಗ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರ ಪ್ರವೇಶವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹಿತ ಘಟಾನುಘಟಿ ನಾಯಕರ ವಿರುದ್ಧ ತೊಡೆತಟ್ಟಿ ಪ್ರಸಿದ್ಧರಾಗಿರುವ ಸ್ನೇಹಮಯಿ ಕೃಷ್ಣ ಈಗ ಧರ್ಮಸ್ಥಳದ ಪ್ರಕರಣದಲ್ಲಿ ಆಖಾಡ ಪ್ರವೇಶಿಸಿರುವುದು ಕುತೂಹಲ ಕೆರಳಿಸಿದೆ. ಅವರು ಸುಜಾತ್ ಭಟ್, ಯೂಟ್ಯೂಬರ್ ಎಂಡಿ ಸಮೀರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸುಳ್ಳು ಆರೋಪ, ಸುಳ್ಳು ದೂರು ದಾಖಲು, ಗೊಂದಲ ಏರ್ಪಡಿಸುವುದು ಮತ್ತು ರಾಜ್ಯದ ಜನರಲ್ಲಿ ಭೀತಿ ಹುಟ್ಟಿಸುವ ಕಾರಣಗಳಿಗಾಗಿ ಈ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಕೃಷ್ಣ ಆಗ್ರಹಿಸಿದ್ದಾರೆ. ಅಗಸ್ಟ್ 21 ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಕೃಷ್ಣ ” ಸುಜಾತ್ ಭಟ್ ಅವರು ಸುಳ್ಳು ಸುದ್ದಿಗಳನ್ನು ಹರಡಿಸುತ್ತಿರುವುದರಿಂದ ಅದರಿಂದ ಲಕ್ಷಾಂತರ ಭಕ್ತರ ನಂಬಿಕೆಗೆ ಘಾಸಿಯಾಗಿದೆ” ಎಂದು ಹೇಳಿದ್ದಾರೆ. ಸುಜಾತ್ ಭಟ್ ವಿರುದ್ಧ ತಕ್ಷಣ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿರುವ ಕೃಷ್ಣ ಅದರೊಂದಿಗೆ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮ್ಮರೋಡಿ, ಎಂ ಡಿ ಸಮೀರ್ ಹಾಗೂ ಇತರರ ಮೇಲೂ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಧರ್ಮಸ್ಥಳದ ವಿಷಯದಲ್ಲಿ ವಿಡಿಯೋ ಮಾಡಿ ವೈರಲ್ ಮಾಡಿ ಕುಖ್ಯಾತಿಗೊಂಡಿರುವ ಸಮೀರ್ ಎನ್ನುವ ವ್ಯಕ್ತಿಯ ಬಗ್ಗೆ ಗೊತ್ತಿಲ್ಲದವರು ಇರಲಿಕ್ಕಿಲ್ಲ. ಸಮೀರ್ ಎಂಡಿ ತಮ್ಮ ಯೂಟ್ಯೂಬ್ ಚಾನೆಲ್ “ಧೂತ”ದಲ್ಲಿ “Who Are Serial K!llrs of Dharmasthala?” ಎಂಬ ಶೀರ್ಷಿಕೆಯ 23 ನಿಮಿಷ 52 ಸೆಕೆಂಡುಗಳ ವಿಡಿಯೋವನ್ನು ಅಪಲೋಡ್ ಮಾಡಿದ್ದರು. ಈ ವಿಡಿಯೋವು 31 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಈ ವಿಡಿಯೋ ಧರ್ಮಸ್ಥಳದಲ್ಲಿ ಶವ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಹರಡಿದೆ ಎಂದು ಆರೋಪಿಸಿದ್ದಾರೆ. ವಿಡಿಯೋದಲ್ಲಿ ಹೆಚ್ಚಿನ ಭಾಗ ಕೃತಕ ಬುದ್ಧಿಮತ್ತೆಯನ್ನು ಬಳಸಿ ರಚಿಸಲ್ಪಟ್ಟಿದ್ದು, ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿದೆ.
” ಇವರೆಲ್ಲರೂ ಜನರ ಮಧ್ಯದಲ್ಲಿ ಭೀತಿ, ಗೊಂದಲ ಮತ್ತು ಭಯದ ವಾತಾವರಣವನ್ನು ಸೃಷ್ಟಿಸಿದ್ದಾರೆ. ಅದರೊಂದಿಗೆ ಧರ್ಮಸ್ಥಳದ ಬಗ್ಗೆ ಮಾತ್ರವಲ್ಲ, ಧರ್ಮಾಧಿಕಾರಿಗಳ ಕುಟುಂಬದವರ ಬಗ್ಗೆನೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅದರ ಜೊತೆ ರಾಜ್ಯದ ಒಟ್ಟು ವ್ಯವಸ್ಥೆಗೆ ಸವಾಲು ಹಾಕಿದ್ದಾರೆ” ಎಂದು ಕೃಷ್ಣ ದೂರಿನ ಸಾರಾಂಶವಾಗಿದೆ. ಆದ್ದರಿಂದ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸುಳ್ಳು ಸುದ್ದಿ ಹರಡಿಸುವವರಿಗೆ ಮತ್ತು ಸಮಾಜದ ಶಾಂತಿ ಕದಡುವವರಿಗೆ ಸಂದೇಶ ನೀಡಬೇಕು ಎಂದು ಕೃಷ್ಣ ಮನವಿ ಮಾಡಿದ್ದಾರೆ.