ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯುವ ವೇಳೆ ಪೊಲೀಸ್ ಕಾರಿಗೆ ಗುದ್ದಿದ ಮೂವರು ಅರೆಸ್ಟ್

ಬಿಜೆಪಿ ಮುಖಂಡ ಬಿ.ಎಲ್ ಸಂತೋಷ್ ಅವರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದು ಬ್ರಹ್ಮಾವರ ಠಾಣೆಗೆ ಕರೆತರುತ್ತಿರುವ ಸಂದರ್ಭದಲ್ಲಿ ಅವರ ಬೆಂಬಲಿಗರೆನ್ನಲಾದ ಕೆಲವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಕಾರಿಗೆ ಗುದ್ದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಉಜಿರೆಯ ನಿವಾಸಿಗಳಾದ ಸೃಜನ್ ಎಲ್., ಹಿತೇಶ್ ಶೆಟ್ಟಿ, ಸಹನ್ ಎಂದು ಗುರುತಿಸಲಾಗಿದೆ. ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಜೊತೆಗೆ ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಎಲ್ ಸಂತೋಷ್ ಅವರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಹಿನ್ನಲೆ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ಅರೆಸ್ಟ್ ಮಾಡಿದ್ದರು. ಅವರನ್ನು ಉಜಿರೆಯಿಂದ ಬ್ರಹ್ಮಾವರಕ್ಕೆ ಕರೆತರುತಿದ್ದಾಗ, ಅವರ ಬೆಂಬಲಿಗರನ್ನೆಲಾದ ಕೆಲವರು ಪೊಲೀಸ್ ವಾಹನ ಗಳನ್ನು ಹಿಂಬಾಲಿಸಿಕೊಂಡು ಬಂದಿದ್ದು, ಎಷ್ಟೇ ಬಾರಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಯಾಗಿ ಬಂದು ಕರ್ತವ್ಯಕ್ಕೆ ಅಡ್ಡಿ ಪಡಿಸದಂತೆ ಸೂಚನೆ ನೀಡಿದರೂ ಪಾಲಿಸದೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸ್ಮಾರ್ ಬಳಿ ಉಡುಪಿ ಜಿಲ್ಲೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಇಲಾಖಾ ವಾಹನಕ್ಕೆ ಬೆಂಬಲಿಗರ ಕಾರು ಡಿಕ್ಕಿ ಹೊಡೆದಿದೆ. ಈ ಕುರಿತಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಉಜಿರೆ ನಿವಾಸಿ ಗಳಾದ ಸೃಜನ್ ಎಲ್ , ಹಿತೇಶ್ ಶೆಟ್ಟಿ, ಸಹನ್ ಎಂಬವರನ್ನು ದಸ್ತಗಿರಿ ಮಾಡಿದ್ದು, ಅವರ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.