ಧರ್ಮ ಜಾಗೃತಿ ಯಾತ್ರೆ: ದೇವರ ಅನುಗ್ರಹದಿಂದ ಸತ್ಯದ ಅನಾವರಣ – ಡಾ. ಹೆಗ್ಗಡೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಪಾರ್ಟಿಯ ಮಂಡಲಗಳ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಧರ್ಮ ಜಾಗೃತಿ ಯಾತ್ರೆ ಸೋಮವಾರ ಸಂಜೆ ನಡೆಯಿತು.
ಐದು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಪಾಲ್ಗೊಳ್ಳುವಿಕೆಯೊಂದಿಗೆ ಎಲ್ಲರ ಸಂಘಟಿತ ಪ್ರಯತ್ನ ಯಶಸ್ವಿಯಾಗಿದೆ. ಮಂಗಳೂರು, ಮೂಡಬಿದಿರೆ, ಬಂಟ್ವಾಳ, ಸುರತ್ಕಲ್, ಉಳ್ಳಾಲ, ಬೆಳ್ತಂಗಡಿ ತಾಲೂಕುಗಳಿಂದ ಅಸಂಖ್ಯಾತ ಆಸ್ತಿಕ ಬಾಂಧವರು ಪಾಲ್ಗೊಂಡು ತಮ್ಮ ಕ್ಷೇತ್ರದ ಪಕ್ಷದ ಮುಖಂಡರು,ಜನಪ್ರತಿನಿಧಿಗಳೊಂದಿಗೆ ಹೆಜ್ಜೆ ಹಾಕಿ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರಿಗೆ ಶ್ರದ್ಧಾಭಕ್ತಿಯಿಂದ ಗೌರವಾರ್ಪಣೆ ಮಾಡಿದರು.
ಅಣ್ಣಪ್ಪ ಸ್ವಾಮಿ ಬೆಟ್ಟದ ಬಳಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಎಲ್ಲರೂ ದೇವಸ್ಥಾನದ ಎದುರು ಸಾಮೂಹಿಕವಾಗಿ ” ಶಿವಪಂಚಾಕ್ಷರಿ ಪಠಣ” ಮಾಡಿದರು. ನಂತರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಯಾತ್ರೆಯ ಪ್ರಮುಖರೊಂದಿಗೆ ಮಾತನಾಡಿದ ಧರ್ಮಾಧಿಕಾರಿ ಡಿ ವಿರೇಂದ್ರ ಹೆಗ್ಗಡೆಯವರು ” ದೇವರ ಅನುಗ್ರಹದಿಂದ ಸತ್ಯದ ಅನಾವರಣವಾಗುತ್ತಿರುವುದು ಸಂತಸವಾಗಿದೆ. ಧರ್ಮಸ್ಥಳದ ಭಕ್ತರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳ ಶ್ರದ್ಧಾಭಕ್ತಿಯ ಪ್ರೋತ್ಸಾಹದಿಂದ ಎಲ್ಲಾ ಸೇವಾಕಾರ್ಯಗಳನ್ನು ಮುಂದುವರೆಸುವ ಉತ್ಸಾಹ ಮೂಡಿಬಂದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ ವಿರೇಂದ್ರ ಹೆಗ್ಗಡೆ ಹೇಳಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರ ಜೊತೆ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ ನಾಗರಾಜ್ ಶೆಟ್ಟಿ, ವಿಧಾನಪರಿಷತ್ ಸದಸ್ಯ ಕೆ ಪ್ರತಾಪ ಸಿಂಹ ನಾಯಕ್, ಕಿಶೋರ್ ಪುತ್ತೂರು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಹರಿಕೃಷ್ಣ ಬಂಟ್ವಾಳ, ಕೆ.ಪಿ.ಜಗದೀಶ್ ಅಧಿಕಾರಿ, ವಕೀಲ ಬಾಹುಬಲಿ ಪ್ರಸಾದ್, ಕೃಷ್ಣರಾಜ ಹೆಗ್ಡೆ, ಗಣ್ಯರು ಉಪಸ್ಥಿತರಿದ್ದರು.