ತಿಮರೋಡಿ ಮನೆಯಲ್ಲಿತ್ತು ಮಾಸ್ಕ್ ಮ್ಯಾನ್ ಮೊಬೈಲ್, ತಂಗುತ್ತಿದ್ದ ಕೋಣೆಯ ಸಿಸಿಟಿವಿ ಫೂಟೇಜ್ ವಶಕ್ಕೆ!

ಯಾವುದೇ ಕುತೂಹಲಕಾರಿ ಸಿನೆಮಾಕ್ಕೂ ಕಡಿಮೆ ಇಲ್ಲದಂತೆ ಬುರುಡೆ ಕಥೆ ಇಡೀ ರಾಜ್ಯ, ದೇಶ ಹಾಗೂ ವಿದೇಶದಲ್ಲಿ ನೆಲೆಸಿರುವ ಧರ್ಮಸ್ಥಳದ ಭಕ್ತರನ್ನು ಕುಕ್ಕರಗಾಲಿನಲ್ಲಿ ತಂದು ನಿಲ್ಲಿಸಿದೆ. ದಿನಕ್ಕೊಂದು ತಿರುವು ಸಿಗುತ್ತಿರುವ ಈ ಪ್ರಕರಣದಲ್ಲಿ ಯಾವ ದಿನ ಯಾವ ಬ್ರೇಕಿಂಗ್ ನ್ಯೂಸ್ ಹೊರಬರುತ್ತದೆ ಎನ್ನುವುದೇ ಸೋಜಿಗದ ವಿಷಯ.
ಇಂದಿನ ಹಾಟ್ ವಿಷಯ ಏನೆಂದರೆ ಎಸ್ ಐಟಿ ಮಹೇಶ್ ತಿಮರೋಡಿ ಮನೆಯಲ್ಲಿ ನಡೆಸಿದ ಶೋಧದ ಸಂದರ್ಭದಲ್ಲಿ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ. ಅದೇನೆಂದರೆ ಚಿನ್ನಯ್ಯ ಆಲಿಯಾಸ್ ಮಾಸ್ಕ್ ಮ್ಯಾನ್ ನ ಮೊಬೈಲ್. ತನ್ನ ಬಳಿ ಮೊಬೈಲ್ ಇಲ್ಲ, ತಿಮರೋಡಿ ಮನೆಯಲ್ಲಿದೆ ಎನ್ನುತ್ತಿದ್ದ ಚಿನ್ನಯ್ಯನ ಮೊಬೈಲ್ ಈಗ ತಿಮರೋಡಿ ಮನೆಯಲ್ಲಿ ಪತ್ತೆಯಾಗಿರುವುದು ಈ ಒಟ್ಟು ಪ್ರಕರಣದಲ್ಲಿ ಹೊಸ ತಿರುವನ್ನು ನೀಡಿದೆ.
ಸರ್ಚ್ ವಾರಂಟ್ ಇಟ್ಟುಕೊಂಡೇ ತಿಮರೋಡಿ ಮನೆಯನ್ನು ಪರಿಶೀಲಿಸಿದ ಎಸ್ ಐಟಿ ತಂಡಕ್ಕೆ ಅಲ್ಲಿ ಚಿನ್ನಯ್ಯನ ಮೊಬೈಲ್ ಸಿಕ್ಕಿರುವುದರಿಂದ ಅವನನ್ನು ಯಾರು ಈ ಒಟ್ಟು ಕೃತ್ಯಕ್ಕೆ ಬಳಸಿದ್ದಾರೆ, ಅವನ ಜೊತೆ ಯಾರ್ಯಾರು ಸಂಪರ್ಕದಲ್ಲಿದ್ದರು ಎನ್ನುವುದು ಎಲ್ಲವೂ ಗೊತ್ತಾಗಲಿದೆ. ಚಿನ್ನಯ್ಯನ ಮೊಬೈಲ್ ವಶಕ್ಕೆ ಪಡೆದು ಬೇರೆ ಏನು ಮಹತ್ವದ ಸಾಕ್ಷ್ಯ ಸಿಗುತ್ತದೆ ಎನ್ನುವುದನ್ನು ಕೂಡ ಎಸ್ ಐಟಿ ತಂಡ ಕೂಲಂಕುಶವಾಗಿ ಪರಿಶೀಲಿಸುತ್ತಿದೆ.
ಇನ್ನು ಸೇಫ್ಟಿ ಕಾರಣಕ್ಕೆ ತಿಮರೋಡಿ ತಮ್ಮ ಮನೆಯ ಪಕ್ಕದಲ್ಲೇ ಇರುವ ಸಹೋದರ ಮೋಹನ್ ಕುಮಾರ್ ಮನೆಯಲ್ಲಿ ಚಿನ್ನಯ್ಯನಿಗೆ ತಂಗಲು ಕೊಠಡಿ ನೀಡಲಾಗಿತ್ತು ಅನ್ನೋ ಮಾಹಿತಿಯನ್ನು ಚಿನ್ನಯ್ಯ ಬಹಿರಂಗಪಡಿಸಿದ್ದ. ಹೀಗಾಗಿ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಮೋಹನ್ ಕುಮಾರ್ ಶೆಟ್ಟಿ ಮನೆಯಲ್ಲಿಯೂ ಶೋಧ ಕಾರ್ಯ ನಡೆಸಲಾಗುತ್ತಿದೆ. ತಿಮರೋಡಿ ಅವರ ನಿವೇಶನ ಸೇರಿದಂತೆ ಎಲ್ಲಾ ಕಡೆ ದಾಳಿ ನಡೆಸಿರುವ ಎಸ್ ಐಟಿ ಸಿಸಿಟಿವಿ ಹಾಗೂ ಹಾರ್ಡ್ ಡಿಸ್ಕ್ ಗಳನ್ನು ವಶಕ್ಕೆ ಪಡೆದಿದೆ. ಚಿನ್ನಯ್ಯ ಹೇಳಿದಂತೆ ಮಹೇಶ್ ಶೆಟ್ಟಿ ಮನೆಯಲ್ಲಿ ಉಳಿದುಕೊಂಡಿರುವ ಬಗ್ಗೆ, ಇಲ್ಲಿಗೆ ಭೇಟಿ ನೀಡಿದವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಎಸ್ ಐಟಿ ಅಧಿಕಾರಿಗಳು ಹಾರ್ಡ್ ಡಿಸ್ಕ್ ಕೂಡ ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಮಹತ್ವದ ಸಾಕ್ಷ್ಯಗಳು ಸಿಗಬಹುದು ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಅದರಲ್ಲಿನ ವಿಡಿಯೋ ಡಿಲೀಟ್ ಆಗಿದ್ದಲ್ಲಿ ಅದು ಮಹೇಶ್ ಶೆಟ್ಟಿಗೆ ಕಂಟಕ ತರುವ ಸಾಧ್ಯತೆ ಇದೆ.