ಬಸ್ ನಲ್ಲಿ 200 ಕೆಜಿ ಸ್ಫೋಟಕ ಪತ್ತೆ! ತಪ್ಪಿದ ದೊಡ್ಡ ಸಂಚು..

ದೊಡ್ಡ ವಿಸ್ಫೋಟವೊಂದನ್ನು ಉತ್ತರ ಪ್ರದೇಶ ಪೊಲೀಸರು ಬಯಲಿಗೆ ಎಳೆದಿದ್ದಾರೆ. ಮೊಹಮ್ಮಸ್ ಉಜ್ಜೈರ್ ಹಾಗೂ ಶಹನಾವಾಜ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಉತ್ತರಪ್ರದೇಶದ ಬಾಗಪತ್ ನಿಂದ ಡೆಲ್ಲಿಗೆ ಹೋಗುತ್ತಿದ್ದ ಬಸ್ಸಿನಲ್ಲಿ ಈ ಸ್ಫೋಟಕಗಳನ್ನು ಅಡಗಿಸಿ ತೆಗೆದುಕೊಂಡು ಹೋಗುವ ಸಂಚು ನಡೆದಿತ್ತು. ಉತ್ತರ ಪ್ರದೇಶದ ಪೊಲೀಸರು ಹಾಗೂ ದೇಶದ ಭಯೋತ್ಪಾದಕ ನಿಗ್ರಹ ಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಿಂದ ಇದು ಬೆಳಕಿಗೆ ಬಂದಿದೆ. ಗುಪ್ತಚರ ಇಲಾಖೆಯ ಉನ್ನತ ಮೂಲಗಳಿಗೆ ಸಿಕ್ಕಿದ ಸುಳಿವಿನಿಂದ ದೊಡ್ಡ ದುರ್ಘಟನೆಯೊಂದು ಅದೃಷ್ಟವಶಾತ್ ತಪ್ಪಿದಂತೆ ಆಗಿದೆ.
ಇತ್ತೀಚಿನ ದಿನಗಳಲ್ಲಿ ಬಹಳ ದೊಡ್ಡ ಪತ್ತೆ ಎಂದೇ ಹೇಳಬಹುದಾದ ಈ ಪ್ರಕರಣದಲ್ಲಿ ಎಟಿಎಸ್ ಹಾಗೂ ಉತ್ತರ ಪ್ರದೇಶದ ಪೊಲೀಸರು ಇಬ್ಬರು ಶಂಕಿತ ಭಯೋತ್ಪಾದಕರಾದ ಮೊಹಮ್ಮದ್ ಉಜ್ಜೈರ್ ಹಾಗೂ ಮೊಹಮ್ಮದ್ ಶಹನಾವಾಜ್ ನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇಬ್ಬರಿಬ್ಬರೂ ಉತ್ತರಪ್ರದೇಶದ ಸಹರಣಾಪುರದವರು ಎಂದು ಹೇಳಲಾಗಿದೆ. ಅಧಿಕಾರಿಗಳ ಪ್ರಕಾರ ಅಗಸ್ಟ್ 25 ರ ರಾತ್ರಿ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಅನುಮಾನಾಸ್ಪದ ವಸ್ತುಗಳ ಸಾಗಾಟ ನಡೆಯುತ್ತಿದೆ ಎನ್ನುವ ವಿಷಯ ಗುಪ್ತಚರ ದಳಕ್ಕೆ ಗೊತ್ತಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಎಟಿಎಸ್ ಹಾಗೂ ಯುಪಿ ಪೊಲೀಸರು ಬಾಗಪತ್ ಎಂಬಲ್ಲಿ ಚೆಕ್ ಪಾಯಿಂಟ್ ನಲ್ಲಿ ಬಸ್ಸನ್ನು ಶೋಧಿಸಿದ್ದಾರೆ. ಆಗ ಲಗೇಜ್ ಇಡುವ ಸ್ಥಳಗಳಲ್ಲಿ ಅನೇಕ ಪ್ಯಾಕೇಟುಗಳು ಪತ್ತೆಯಾಗಿವೆ. ಅದರ ಒಳಗೆ ವಿಸ್ಫೋಟಕಗಳು ಇರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.
ಈ ವಿಸ್ಫೋಟಕಗಳನ್ನು ಸಾಮಾನ್ಯ ಪ್ರಯಾಣಿಕರ ಲಗೇಜುಗಳ ನಡುವೆ ಅಡಗಿಸಿ ಇಡಲಾಗಿತ್ತು. ಈ ಮೂಲಕ ಯಾರಿಗೂ ಅನುಮಾನ ಬರದ ರೀತಿಯಲ್ಲಿ ಷಡ್ಯಂತ್ರ ರೂಪಿಸಲಾಗಿತ್ತು. ಉಜ್ಜೈರ್ ಹಾಗೂ ಶಹನಾವಾಜ್ ನನ್ನು ಎಟಿಎಸ್ ವಿಚಾರಿಸುತ್ತಿದ್ದರೆ, ಬಸ್ಸನ್ನು ಸೀಝ್ ಮಾಡಿ ಅದರ ನಿರ್ವಾಹಕ ಹಾಗೂ ಚಾಲಕನನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಉತ್ತರ ಪ್ರದೇಶದ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟೆಚರ ವಹಿಸಲಾಗಿದ್ದು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಈ ಷಡ್ಯಂತ್ರವನ್ನು ಭೇದಿಸಿದ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಶ್ಲಾಘನೆ ಸಲ್ಲಿಸಿದ್ದಾರೆ. ನೂರಾರು ಅಮಾಯಕ ಜೀವಗಳನ್ನು ಉಳಿಸಿದ ಎಲ್ಲರಿಗೂ ಅಭಿನಂದನೆ ಎಂದು ಹೇಳಿದ ಅವರು ಯುಪಿ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಯಾವತ್ತೂ ಜಯಗಳಿಸುತ್ತದೆ ಎಂದು ಹೇಳಿದ್ದಾರೆ.