ಅನುಶ್ರೀ – ರೋಷನ್ ದಾಂಪತ್ಯ ಜೀವನಕ್ಕೆ ನಿಮ್ಮದೂ ಶುಭ ಹಾರೈಕೆ ಇರಲಿ!

ಅದ್ದೂರಿಯಾಗಿ ನಡೆದ ನಿರೂಪಕಿ ಅನುಶ್ರೀ ಹಾಗೂ ರೋಶನ್ ವಿವಾಹ!
ನಿರೂಪಕಿ, ನಟಿ ಅನುಶ್ರೀ ಹಾಗೂ ರೋಷನ್ ಅವರ ವಿವಾಹ ಅದ್ದೂರಿಯಾಗಿ ನೆರವೇರಿದೆ. ಅನುಶ್ರೀ ಮದುವೆ ಬೆಂಗಳೂರಿನ ಹೊರವಲಯದಲ್ಲಿರುವ ಕಗ್ಗಲಿಪುರದಲ್ಲಿ ನಡೆದಿದೆ. ಅನುಶ್ರೀ ಅವರು ಬಯಸಿದ ರೀತಿಯಲ್ಲಿಯೇ ವಿವಾಹ ಕಾರ್ಯಕ್ರಮ ಸಂಪ್ರದಾಯಬದ್ಧವಾಗಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಚೆಂದವಾಗಿ ನೆರವೇರಿತು.
ಅನುಶ್ರೀ ಮದುವೆಗೆ ನಟ ಶಿವರಾಜ್ ಕುಮಾರ್, ಜಗ್ಗೇಶ್, ರಾಜ್ ಬಿ ಶೆಟ್ಟಿ ಸಹಿತ ಸಿನೆಮಾ ರಂಗದ ಸೆಲೆಬ್ರಿಟಿಗಳು ಹಾಜರಿದ್ದರು. ಈ ಮದುವೆಯನ್ನು ಬಹಳ ಉತ್ತಮವಾಗಿ ಆಯೋಜಿಸಿದ್ದ ವರುಣ್ ಅವರಿಗೆ ಧನ್ಯವಾದಗಳು ಎಂದು ಇದೇ ಸಂದರ್ಭದಲ್ಲಿ ಸುದ್ದಿಗೋಷ್ಟಿಯಲ್ಲಿ ಅನುಶ್ರೀ ಕೃತಜ್ಞತೆ ಅರ್ಪಿಸಿದರು. ಮಂತ್ರಮಾಂಗಲ್ಯದಂತಹ ಸರಳ ಮದುವೆ ಮಾಡಿಕೊಳ್ಳಬೇಕೆಂಬ ಬಯಕೆ ಇದ್ದರೂ ಸಂಬಂಧಿಕರು, ಆಪ್ತರ ಸಂಖ್ಯೆ ಒಂದಿಷ್ಟು ಹೆಚ್ಚಿಗೆ ಇದ್ದ ಕಾರಣ ಮಂತ್ರಮಾಂಗಲ್ಯದ ನಿಯಮಗಳನ್ನು ಮುರಿಯದೇ ಸರಳಕ್ಕಿಂತ ಸ್ವಲ್ಪ ಮೇಲು ಎನಿಸುವ ರೀತಿಯಲ್ಲಿ ಮದುವೆ ಮಾಡಿಕೊಂಡಿದ್ದೇವೆ ಎಂದು ಅನುಶ್ರೀ ಹೇಳಿದ್ದಾರೆ.
ಅಪ್ಪು ಅವರು ಈ ಮದುವೆಗೆ ಇರಬೇಕಿತ್ತು ಎಂದು ಹೇಳಿದ ಅನುಶ್ರೀ ಶಿವಣ್ಣ, ಗೀತಕ್ಕ ಅವರು ಮದುವೆಗೆ ಬಂದಿದ್ದಾರೆ. ಜಗ್ಗೇಶ್ ಅವರು ಬಂದಿದ್ದಾರೆ. ಹಾಗೆ ಪ್ರೀತಿಯಿಟ್ಟು ಬಂದ ಎಲ್ಲಾ ಸಿನೆಮಾರಂಗದ ಆತ್ಮೀಯರಿಗೆ ಧನ್ಯವಾದಗಳು ಎಂದು ಅನುಶ್ರೀ ಹೇಳಿದ್ದಾರೆ. ಇನ್ನು ನಾಡಿದ್ದಿನಿಂದಲೇ ಕೆಲಸಕ್ಕೆ ಮರಳುವುದಾಗಿ ಹೇಳಿದ ಅನುಶ್ರೀ, ಮದುವೆ ಜೀವನದ ಒಂದು ಭಾಗವಷ್ಟೇ, ಕೆಲಸ ಮಾಡುತ್ತಲೇ ಇರಬೇಕು, ಅದು ಮುಖ್ಯ ಎಂದು ಹೇಳಿದರು.