ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ – ನೇಪಾಳಿ ಪ್ರತಿಭಟನಾಕಾರ

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯಂತಹ ನಾಯಕರು ನಮ್ಮ ರಾಷ್ಟ್ರಕ್ಕೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ದೆವು. ಆದರೆ ನಮಗೆ ಭ್ರಷ್ಟಾತಿಭ್ರಷ್ಟ ಒಲಿಯಂತವರು ಸಿಕ್ಕಿದ ಕಾರಣ ನಮ್ಮ ದೇಶ ಹೀಗೆ ಇದೆ ಎಂದು ಪ್ರತಿಭಟನಾಕಾರನೊಬ್ಬ ಟೈಮ್ಸ್ ನೌ ಎನ್ನುವ ನವಭಾರತ ವಾಹಿನಿಗೆ ನೀಡಿದ ಹೇಳಿಕೆಯಲ್ಲಿ ಈ ಮಾತನ್ನು ಹೇಳಿದ್ದಾರೆ. ಒಲಿ ಹಾಗೂ ಅವರ ಸಚಿವ ಸಂಪುಟ ಭ್ರಷ್ಟಾಚಾರದಲ್ಲಿ ನಿರತವಾಗಿತ್ತು. ಆದ್ದರಿಂದ ಅವರನ್ನು ಕಿತ್ತು ಬಿಸಾಕುವ ಗುರಿ ನೇಪಾಳದ ಯುವ ಸಮೂಹ ಹೊಂದಿತ್ತು. ಆದ್ದರಿಂದ ನಾವು ಈ ಸರಕಾರ ವಿರುದ್ಧ ಪ್ರತಿಭಟನೆ ನಡೆಸಬೇಕಾಯಿತು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಕ್ಲಿಯರ್ ಕಟ್ ಎನ್ನುವ ಪ್ರೋಗ್ರಾಂನಲ್ಲಿ ವಾಹಿನಿಯ ವರದಿಗಾರರು ಪ್ರತಿಭಟನಾ ನಿರತರ ಬಳಿ ಅಭಿಪ್ರಾಯವನ್ನು ಕೇಳುವಾಗ ಈ ವಿಷಯವನ್ನು ಪ್ರತಿಭಟನಾಕಾರರೊಬ್ಬ ಹೇಳಿರುವುದು ಭಾರತದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೇಪಾಳದಲ್ಲಿ ಈಗಾಗಲೇ ಪ್ರತಿಭಟನೆ ದಂಗೆಯ ಸ್ವರೂಪವನ್ನು ಪಡೆದುಕೊಂಡಿದ್ದು, ಯುವ ಸಮೂಹ ವಿಪರೀತವಾಗಿ ದೇಶದ ಆಡಳಿತಶಾಹಿ ವ್ಯವಸ್ಥೆಯನ್ನು ವಿರೋಧಿಸುತ್ತಿದೆ. ದೇಶದ ಪ್ರಧಾನಿ ಒಲಿ ಹಾಗೂ ಕುಟುಂಬ ದೇಶವನ್ನು ತೊರೆದು ಪಲಾಯನ ಮಾಡಿದೆ ಎಂದು ಹೇಳಲಾಗುತ್ತಿದೆ. ಮಾಜಿ ಪ್ರಧಾನಿಯ ಪತ್ನಿಯನ್ನು ಜೀವಂತ ಸುಡಲಾಗಿದ್ದು, ಮಾಜಿ ಪ್ರಧಾನಿಯ ಮೇಲೆ ಹಲ್ಲೆ ಮಾಡಲಾಗಿದೆ. ದೇಶದ ಗೃಹ ಸಚಿವರನ್ನು ಅಟ್ಟಾಡಿಸಿ ಹೊಡೆಯಲಾಗಿದೆ. ದೇಶದ ಜನಪ್ರತಿನಿಧಿಗಳ ನಿವಾಸ, ಸಂಸತ್ತು ಸೇರಿದಂತೆ ಹೋಟೇಲುಗಳು, ಶಾಪಿಂಗ್ ಮಾಲ್ ಗಳ ಮೇಲೆ ದಾಳಿ ನಡೆದು ಸುಟ್ಟು ಹಾಕಲಾಗಿದೆ. ಪಶುಪತಿನಾಥ ದೇವಾಲಯದ ಮೇಲೆಯೂ ದಾಳಿ ನಡೆಯುವ ಸಾಧ್ಯತೆ ಇದ್ದ ಕಾರಣ ಅಲ್ಲಿ ಮಿಲಿಟರಿ ಸರ್ಪಗಾವಲು ಹಾಕಲಾಗಿದೆ. ಈಗಾಗಲೇ ಶ್ರೀಲಂಕಾ, ಬಾಂಗ್ಲಾದೇಶದಲ್ಲಿ ಇಂತಹ ದಂಗೆಗಳು ನಡೆದಿದ್ದು, ಹೆಚ್ಚು ಕಡಿಮೆ ಅಂತಹುದೇ ದಾಳಿ ಈಗ ನೇಪಾಳದಲ್ಲಿ ನಡೆದಿದೆ. ಅಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕಾಪಾಡಲು ಭಾರತ ಸರಕಾರ ಎಲ್ಲಾ ಪ್ರಯತ್ನ ಮಾಡಿದೆ.
ಇನ್ನು ಈ ವಿಷಯದಲ್ಲಿ ಚೀನಾ ಮೊದಲ ಬಾರಿ ಹೇಳಿಕೆ ನೀಡಿದ್ದು ಚೀನಾ ಅಧ್ಯಕ್ಷರು ” ನಾವು ಮತ್ತು ನೇಪಾಳ ಉತ್ತಮ ನೆರೆಹೊರೆ ಸಂಬಂಧವನ್ನು ಹೊಂದಿದ್ದೇವೆ. ಅಲ್ಲಿನ ರಾಜಕೀಯ ಪಕ್ಷಗಳು ದೇಶದ ಆಂತರಿಕ ಪರಿಸ್ಥಿತಿಯನ್ನು ಉತ್ತಮ ರೀತಿಯಲ್ಲಿ ನಿಭಾಯಿಸಬೇಕಾದ ಅಗತ್ಯ ಇದೆ. ದೇಶದ ಸುಸ್ಥಿರ ಬೆಳವಣಿಗೆ ಮತ್ತು ಶಾಂತಿ, ಸಮಾಧಾನವನ್ನು ಕಾಪಾಡಲು ಯೋಗ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ” ಎಂದು ಹೇಳಿದ್ದಾರೆ.
ಈಗ ನೇಪಾಳದ ಪರಿಸ್ಥಿತಿ ನೋಡಿದರೆ ಜಗತ್ತಿನ ಏಕೈಕ ಹಿಂದೂರಾಷ್ಟ್ರ ಎನ್ನುವ ಹೆಗ್ಗಳಿಕೆಯನ್ನು ಅದು ಮತ್ತೆ ಉಳಿಸಿಕೊಳ್ಳುತ್ತದಾ ಎನ್ನುವುದು ನೋಡಬಹುದಾಗಿದೆ. ಮೊದಲು ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ ವಿರುದ್ಧ ಆರಂಭವಾದ ಪ್ರತಿಭಟನೆ ಕ್ರಮೇಣ ದುರಾಡಳಿತ. ವಿಫಲವಾದ ಪ್ರಜಾಪ್ರಭುತ್ವತೆ ಹಾಗೂ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ ರೀತಿಯಲ್ಲಿತ್ತು. ಇನ್ನು ಅಧ್ಯಕ್ಷರ ನಿವಾಸದ ಮೇಲೆ ಹತ್ತಿ ಅಲ್ಲಿ ದೇಶದ ಧ್ವಜವನ್ನು ಹಾರಾಡಿಸುವ ಮೂಲಕ ಯುವಜನಾಂಗ ತಮ್ಮ ಗೆಲುವನ್ನು ಸಂಭ್ರಮಿಸಿದಂತೆ ಕಾಣುತ್ತಿತ್ತು.
ಇನ್ನು ನೇಪಾಳದ ಮಿಲಿಟರಿ ಮುಖ್ಯಸ್ಥರು ನೇಪಾಳವನ್ನು ಆಳಿದ ಹಿಂದೂ ರಾಜರೊಬ್ಬರ ಫೋಟೋವೊಂದರ ಎದುರು ಕುಳಿತು ಮಾತನಾಡಿದ ವಿಡಿಯೋ ದೊರಕಿದೆ. ಅಲ್ಲಿನ ನಾಗರಿಕರು ಇದು ನೇಪಾಳದಲ್ಲಿ ಮತ್ತೆ ಹಿಂದೂತ್ವದ ಆಡಳಿತ ಬರುವ ಮುನ್ಸೂಚನೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ.
ಇನ್ನು ದೇಶದ ಮುಂದಿನ ಆಡಳಿತವನ್ನು ಯಾರ ಕೈಗೆ ನೀಡಬೇಕೆಂಬ ವರ್ಚುವಲ್ ಮೀಟಿಂಗ್ ಈಗ ನಡೆಯುತ್ತಿದೆ. ಅದರಲ್ಲಿ 4000 ಕ್ಕೂ ಅಧಿಕ ಯುವಮುಖಗಳು ಭಾಗವಹಿಸಿವೆ. ದೇಶದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕಾರ್ಫಿ ಅವರು ಮುಂದಿನ ಆಡಳಿತವನ್ನು ವಹಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಸುಶೀಲಾ ಹಾಗೂ ಕಾಠ್ಮಂಡು ಮೇಯರ್ ಬಾಲೆನ್ ಶಾಹ ನಡುವೆ ಪೈಪೋಟಿ ಇದೆ. ಸುಶೀಲಾ ಅವರಿಗೆ 31 ಶೇಕಡಾ ಜನ ಮತ ಚಲಾಯಿಸಿದರೆ ಬಾಲೆನ್ ಅವರ ಪರ 27 ಶೇಕಡಾ ಜನ ಮತ ಚಲಾಯಿಸಿದ್ದಾರೆ.