ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ

ರಾಷ್ಟ್ರೀಯ ಹೆದ್ದಾರಿ 66 ಬೃಹತ್ ಹೊಂಡಕ್ಕೆ ಬಿದ್ದು ಸ್ಕೂಟರ್ ಸವಾರೆ ಮೃತಪಟ್ಟಿದ್ದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನೇರ ಹೊಣೆ. ಘಟನೆಯ ಬಗ್ಗೆ ಸಂಬಂಧಿಸಿದ ಜನಪ್ರತಿನಿಧಿಗಳು ಯಾಕೆ ಮೂಕರಾಗಿದ್ದಾರೆ? ಹೆದ್ದಾರಿ ಗುಂಡಿಗಳಿಗೆ ಇನ್ನೆಷ್ಟು ಜೀವ ಬಲಿಯಾಗಬೇಕು? ತಕ್ಷಣ ಹೆದ್ದಾರಿ ಶಾಶ್ವತ ರಿಪೇರಿ ಮಾಡಿ. ಇಲ್ಲದಿದ್ದರೆ ಬೃಹತ್ ಹೋರಾಟ ನಡೆಸಲಾಗುವುದು. ಕಾನೂನು ಹೋರಾಟಕ್ಕೂ ತಯಾರಾಗಿದ್ದೇವೆ ಎಂದು ಮಾಜಿ ಮೇಯರ್ ಶಶಿಧರ್ ಹೆಗ್ಡೆ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ನ ಮಾಜಿ ಕಾರ್ಪೋರೇಟರ್ ಗಳೊಂದಿಗೆ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದೆರಡು ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗಳಲ್ಲಿ ನಿರಂತರವಾಗಿ ಹೆದ್ದಾರಿ ದುರವಸ್ಥೆ ಕುರಿತು ಗಮನ ಸೆಳೆದು ಪರಿಹಾರ ಮಾರ್ಗೋಪಾಯಗಳನ್ನು ಸೂಚಿಸುತ್ತಲೇ ಬಂದಿದ್ದೇವೆ. ಆದರೆ ಪರಿಹಾರ ಕೆಲಸ ಆಗಿಲ್ಲ. ಈ ಕಾರಣದಿಂದಲೇ ಅಪಘಾತಕ್ಕೀಡಾಗಿ ಅನೇಕ ಮಂದಿ ಶಾಶ್ವತ ಅಂಗವಿಕಲರಾಗಿದ್ದಾರೆ. ಇನ್ನು ಕೆಲವು ಮಂದಿ ಸಾವಿಗೀಡಾಗಿದ್ದಾರೆ. ಸಂಬಂಧಿಸಿದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಹೆದ್ದಾರಿಗಾಗಿ ಕೋಟ್ಯಾಂತರ ಟೋಲ್ ಸಂಗ್ರಹ ಮಾಡುವಾಗ, ಆ ಮೊತ್ತದ ಅರ್ಧಾಂಶ ವ್ಯಯಿಸಿ ರಸ್ತೆ ನಿರ್ವಹಣೆ ಮಾಡಿದ್ದರೂ ಈ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ. ಟೋಲ್ ಸಂಗ್ರಹಿಸುವ ಹೆದ್ದಾರಿಯ ಅವ್ಯವಸ್ಥೆಗೆ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಹೊಣೆ ಹೊರಲೇಬೇಕು ಎಂದು ಶಶಿಧರ್ ಹೆಗ್ಡೆ ಹೇಳಿದರು.
ಇನ್ನು ಮಾಜಿ ಕಾರ್ಪೋರೇಟರ್ ಎ.ಸಿ.ವಿನಯರಾಜ್ ಮಾತನಾಡಿ, ಬಿ.ಸಿ.ರೋಡ್ – ಸುರತ್ಕಲ್ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ವಾರ್ಷಿಕ 15 ರಿಂದ 20 ಕೋಟಿ ರೂ ಟೋಲ್ ಸಂಗ್ರಹ ನಡೆಯುತ್ತಿದೆ. 2008 ರಿಂದಲೂ ಟೋಲ್ ಸಂಗ್ರಹ ನಡೆಯುತ್ತದೆ. ಹೆದ್ದಾರಿ ನಿರ್ವಹಣೆಯನ್ನೇ ಮಾಡದೇ, ಹೊಂಡ ಗುಂಡಿಗಳಿಂದ ಕೂಡಿರುವಾಗ, ಈಗಾಗಲೇ ಸಂಗ್ರಹವಾದ ಟೋಲ್ ಹಣವನ್ನು ಎಲ್ಲಿಗೆ ಚೆಲ್ಲಿದ್ದೀರಿ? ಸಂಬಂಧಿಸಿದ ಅಧಿಕಾರಿಗಳ ಕೆಲಸ ಮಾಡುವಂತೆ ಮೇಲ್ವಿಚಾರಣೆ ಮಾಡಬೇಕಿದ್ದ ಸಂಸದರು, ಶಾಸಕರು ಎಲ್ಲಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನ ಮಾಜಿ ಕಾರ್ಪೋರೇಟರ್ ಗಳಾದ ಅಬ್ದುಲ್ ರವೂಫ್, ಭಾಸ್ಕರ್ ಕೆ, ಲ್ಯಾನ್ಸಿಲಾಟ್ ಪಿಂಟೋ, ಅನಿಲ್ ಕುಮಾರ್, ಸಂಶುದ್ದೀನ್ ಬಂದರ್, ಸಂಶುದ್ದೀನ್ ಕುದ್ರೋಳಿ, ಅಶೋಕ್ ಡಿ.ಕೆ, ಎನ್ ಎಸ್ ಯುಐ ಅಧ್ಯಕ್ಷ ಸುಹಾನ್ ಆಳ್ವ ಇದ್ದರು.