ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!

ನಾಯಿಗಳಿಗೂ ಜೈಲು ಶಿಕ್ಷೆನಾ? ಇಂತಹದೊಂದು ವಿನೂತನ ಐಡಿಯಾ ಉತ್ತರ ಪ್ರದೇಶದಲ್ಲಿ ಜಾರಿಗೆ ಬರಲಿದೆ. ಯುಪಿಯ ಪ್ರಯಾಗರಾಜ್ ನಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಅವುಗಳು ಜನರನ್ನು ಕಚ್ಚುವ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಆದ್ದರಿಂದ ನಾಯಿಗಳಿಗೆ ಶಿಕ್ಷೆ ನೀಡಬೇಕು ಎಂದು ರಾಜ್ಯ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜಿತ್ ಅವರು ಹೊರಡಿಸಿದ ಆದೇಶದ ಪ್ರಕಾರ ಬೀದಿ ನಾಯಿ ಎರಡು ಬಾರಿ ಜನರನ್ನು ಕಚ್ಚಿದರೆ, ಅದಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.
ಈ ನಿಯಮವೂ ಹಿಂಸಾತ್ಮಕವಾಗಿ ವರ್ತಿಸಿ ಜನರ ಪ್ರಾಣದ ಮೇಲೆ ಆಟವಾಡುವ ಪ್ರಾಣಿಗಳಿಗೆ ಅನ್ವಯಿಸುತ್ತದೆ. ಯೋಗಿ ಸರಕಾರದ ಈ ಆದೇಶವು ಬೀದಿನಾಯಿಗಳ ಸಮಸ್ಯೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಯಾವುದೇ ಒಂದು ನಾಯಿ ಮೊದಲ ಬಾರಿಗೆ ಯಾರನ್ನಾದರೂ ಕಚ್ಚಿದರೆ ಆ ನಾಯಿಗೆ 10 ದಿನಗಳ ಶಿಕ್ಷೆ ವಿಧಿಸಲಾಗುತ್ತದೆ. ಶಿಕ್ಷೆ ಯಾವ ಸ್ವರೂಪದಲ್ಲಿ ಇರುತ್ತದೆ ಎಂದರೆ ಆ ನಾಯಿಯನ್ನು ಪ್ರಾಣಿಗಳ ಜನನ ನಿಯಂತ್ರಣ ಕೇಂದ್ರ (ಎಬಿಸಿ ಕೇಂದ್ರ) ಯಲ್ಲಿ ಇರಿಸಲಾಗುತ್ತದೆ. ಇಲ್ಲಿ ನಾಯಿಗೆ ಚಿಕಿತ್ಸೆ ನೀಡಿ, ವೀಕ್ಷಣೆಯಡಿ ಇರಿಸಲಾಗುತ್ತದೆ. ಎಬಿಸಿ ಕೇಂದ್ರದಲ್ಲಿ ಆಂಟಿ-ರೇಬಿಸ್ ಲಸಿಕೆಗಳನ್ನು ನೀಡಿ ನಾಯಿಯ ಆರೋಗ್ಯ ಮತ್ತು ನಡವಳಿಕೆಯನ್ನು ಪರಿಶೀಲಿಸಲಾಗುತ್ತದೆ. 10 ದಿನಗಳ ನಂತರ ಬಿಡುಗಡೆಯಾಗುವ ಮೊದಲು ನಾಯಿಯ ದೇಹದಲ್ಲಿ ಮೈಕ್ರೋಚಿಪ್ ಅಳವಡಿಸಲಾಗುತ್ತದೆ. ಈ ಚಿಪ್ ಮೂಲಕ ನಾಯಿಯ ನಡವಳಿಕೆಯನ್ನು ಮೇಲ್ವಿಚಾರಣೆ ಮಾಡಬಹುದು. ನಾಯಿಯ ಸಂಪೂರ್ಣ ವಿವರಗಳನ್ನು ಫಾರ್ಮ್‌ನಲ್ಲಿ ನೋಂದಾಯಿಸಿ, ವೀಡಿಯೊ ರೆಕಾರ್ಡಿಂಗ್ ಮೂಲಕ ಚಟುವಟಿಕೆಗಳನ್ನು ದಾಖಲಿಸಲಾಗುತ್ತದೆ. ಒಂದು ವೇಳೆ ಆ ನಾಯಿ ಎರಡನೇ ಬಾರಿಗೆ ಕಚ್ಚಿದರೆ ಜೀವಾವಧಿ ಶಿಕ್ಷೆಯಾಗುತ್ತದೆ. ಈಗಾಗಲೇ ಮೊದಲನೇ ಬಾರಿಗೆ ಕಚ್ಚಿ ಎಬಿಸಿ ಕೇಂದ್ರಕ್ಕೆ ಹೋಗಿ ಬಂದ ನಾಯಿ ಮತ್ತೊಮ್ಮೆ ಯಾರನ್ನಾದರೂ ಕಚ್ಚಿದರೆ, ಮೂರು ಸದಸ್ಯರ ತಂಡವು ತನಿಖೆ ನಡೆಸುತ್ತದೆ.
ಈತಂಡದಲ್ಲಿ ಜಾನುವಾರು ಅಧಿಕಾರಿ, ಸ್ಥಳೀಯ ಸಂಸ್ಥೆಯ ಪ್ರತಿನಿಧಿ ಮತ್ತು ಸೊಸೈಟಿ ಫಾರ್ ಪ್ರಿವೆನ್ಷನ್ ಆಫ್ ಕ್ರೂಯೆಲ್ಟಿ ಟು ಅನಿಮಲ್ಸ್ (ಎಸ್‌ಪಿಸಿಎ) ಸದಸ್ಯರು ಇರುತ್ತಾರೆ. ಈ ತಂಡವು ನಾಯಿ ದಾಳಿ ಮಾಡಲು ಪ್ರೇರೇಪಿಸಲ್ಪಟ್ಟಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತದೆ. ಯಾವುದೇ ಪುರಾವೆಗಳಿಲ್ಲದಿದ್ದರೆ, ನಾಯಿಯನ್ನು ಜೀವಾವಧಿ ಎಬಿಸಿ ಕೇಂದ್ರದಲ್ಲಿ ಇರಿಸಲಾಗುತ್ತದೆ. ಇದು ನಾಯಿಗೆ ಜೀವಮಾನ ಶಿಕ್ಷೆಯಂತಿದೆ. ಈ ಶಿಕ್ಷೆಯಿಂದ ಬಿಡುಗಡೆಯಾಗಲು, ಯಾರಾದರೂ ಅಧಿಕೃತವಾಗಿ ದತ್ತು ಪಡೆದಾಗ ಮಾತ್ರ ಸಾಧ್ಯ.
ಈ ನಿಯಮವು ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಬಹುದು. ಉತ್ತರ ಪ್ರದೇಶದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚು ಇರುವುದರಿಂದ ಈ ಆದೇಶವು ಮಹತ್ವದ್ದು. ದೇಶದಲ್ಲಿ 1.5 ಕೋಟಿ ಬೀದಿ ನಾಯಿಗಳಿದ್ದು, ಅವುಗಳಿಂದ ರೇಬೀಸ್ ಮತ್ತು ಕಡಿತ ಪ್ರಕರಣಗಳು ಹೆಚ್ಚಾಗಿವೆ. ಸುಪ್ರೀಂ ಕೋರ್ಟ್ ಕೂಡ ಈ ಸಮಸ್ಯೆಯ ಬಗ್ಗೆ ಚಿಂತೆ ವ್ಯಕ್ತಪಡಿಸಿದ್ದು, ಡೆಲ್ಹಿಯಲ್ಲಿ ನಾಯಿಗಳನ್ನು ಆಶ್ರಯಕ್ಕೆ ಕಳುಹಿಸುವಂತೆ ಆದೇಶ ನೀಡಿದೆ. ಯೋಗಿ ಸರ್ಕಾರದ ಈ ಕ್ರಮವು ಜನಸುರಕ್ಷತೆಯನ್ನು ಉನ್ನತೀಕರಿಸುತ್ತದೆ.