ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!

ನಿರೀಕ್ಷೆಯಂತೆ ಕೇಂದ್ರ ಸರಕಾರದ ಜಿಎಸ್ಟಿ ಇಳಿಕೆ ದೇಶದ ವ್ಯಾಪಾರ, ವ್ಯವಹಾರದ ಮೇಲೆ ಸಕರಾತ್ಮಕ ಪರಿಣಾಮ ಬೀರಿದೆ. ನವರಾತ್ರಿಯಿಂದ ದೀಪಾವಳಿ ತನಕದ ಹಬ್ಬದ ಸೀಸನ್ ನಲ್ಲಿ ದೇಶದಲ್ಲಿ ಸುಮಾರು 5.40 ಲಕ್ಷ ಕೋಟಿ ಮೌಲ್ಯದ ವಸ್ತುಗಳು ಮಾರಾಟವಾಗಿವೆ. ಅದೇ ರೀತಿಯಲ್ಲಿ 65 ಸಾವಿರ ಕೋಟಿ ಮೌಲ್ಯದ ಸೇವೆಗಳನ್ನು ಈ ಅವಧಿಯಲ್ಲಿ ಗ್ರಾಹಕರು ಪಡೆದಿದ್ದಾರೆ. ಇದರೊಂದಿಗೆ ಸರಕು ಹಾಗೂ ಸೇವೆ ಎರಡನ್ನೂ ಸೇರಿಸಿ 6.05 ಲಕ್ಷ ಕೋಟಿ ರೂ ವಹಿವಾಟು ನಡೆದಿದೆ.
ದೇಶದ ರಿಟೇಲ್ ಮತ್ತು ಟ್ರೇಡಿಂಗ್ ಇತಿಹಾಸದಲ್ಲೇ ಇಷ್ಟೊಂದು ಪ್ರಮಾಣದ ವಸ್ತುಗಳ ಮಾರಾಟ ಆಗಿರುವುದು ಇದೇ ಮೊದಲು. ಇದು ದೇಶದ ಆರ್ಥಿಕತೆಯ ದಿಕ್ಕನ್ನು ಬದಲಾಯಿಸಿದ “ಹಬ್ಬದ ಸೀಸನ್” ಎಂದು ಹೇಳಲಾಗುತ್ತಿದೆ. 2024 ರ ನವರಾತ್ರಿಯಿಂದ ದೀಪಾವಳಿಯವರೆಗೆ 4.24 ಲಕ್ಷ ಕೋಟಿ ರೂ ಮೌಲ್ಯದ ವಸ್ತುಗಳು ಮಾರಾಟ ಆಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ 25 ರಷ್ಟು ವಸ್ತುಗಳ ಮಾರಾಟ ದಾಖಲಾಗಿದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟದ (ಸಿಎಐಟಿ) ಸಮೀಕ್ಷಾ ವಿಭಾಗವಾದ ಸಿಐಎಟಿ ರಿಸರ್ಚ್ ಮತ್ತು ಟ್ರೇಡ್ ಡೆವಲಪ್ ಮೆಂಟ್ ಸೊಸೈಟಿ ಹೇಳಿದೆ.
ಈ ಒಟ್ಟು ಮಾರಾಟದಲ್ಲಿ ರೀಟೇಲ್ ಕ್ಷೇತ್ರದ ಪಾಲು ಶೇ 85 ರಷ್ಟಿದೆ. ಈ ಮೂಲಕ ಗೃಹ ಬಳಕೆ ವಸ್ತುಗಳು, ಸಿದ್ಧ ಉಡುಪುಗಳು ಮತ್ತು ನಿತ್ಯ ಬಳಕೆ ವಸ್ತುಗಳ ಖರೀದಿಯಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದು ಸ್ಪಷ್ಟ.
ಈ ದೀಪಾವಳಿ ಖರೀದಿ ಕುರಿತು ಸಿಎಐಟಿ ನಡೆಸಿದ ಸರ್ವೆಯಲ್ಲಿ ಪಾಲ್ಗೊಂಡ ಶೇ 72 ರಷ್ಟು ಮಾರಾಟಗಾರರು ಖರೀದಿ ಭರಾಟೆ ಜೋರಾಗಲು ಜಿಎಸ್ ಟಿ ಕಡಿತವೇ ಮೂಲ ಕಾರಣ ಎಂದು ಹೇಳಿಕೊಂಡಿದ್ದಾರೆ. ಈ ಬಾರಿಯ ಹಬ್ಬದ ಸೀಸನ್ ನಲ್ಲಿ ಖರೀದಿ ಪ್ರಕ್ರಿಯೆ ಜೋರಾಗಲು ಗ್ರಾಮೀಣ ಮತ್ತು ಅರೆ ನಗರ ಮಾರುಕಟ್ಟೆಯಲ್ಲಿ ಭಾರೀ ಪ್ರಮಾಣದ ಬೇಡಿಕೆಯೂ ಮತ್ತೊಂದು ಪ್ರಮುಖ ಕಾರಣವಾಗಿದೆ. ದೇಶಾದ್ಯಂತ ಆಗಿರುವ ಮಾರಾಟದಲ್ಲಿ ಶೇ 28 ರಷ್ಟು ಪಾಲು ಈ ಮಾರುಕಟ್ಟೆಯದ್ದಾಗಿದೆ. ಈ ಮೂಲಕ ಈ ಪ್ರದೇಶದ ಜನರಲ್ಲಿ ಕೊಳ್ಳುವಿಕೆಯ ಶಕ್ತಿ ಹೆಚ್ಚಾಗಿರುವುದು ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸುವುದು ದೇಶದ ಆರ್ಥಿಕತೆಗೆ ಹೊಸ ಉತ್ತೇಜನ ನೀಡುವ ನಿರೀಕ್ಷೆ ಇದೆ.