ರಾಜ್ಯ ಸರಕಾರ ತಂದಿದ್ದ “ಅಂಕುಶ”ದ ನಿಯಮ! ಹೈಕೋರ್ಟ್ ತಡೆ.
ಕರ್ನಾಟಕ ಸರಕಾರ ಸಾರ್ವಜನಿಕ ಸ್ಥಳ ಬಳಕೆಗೆ ಖಾಸಗಿ ಸಂಸ್ಥೆಗಳಿಗೆ ನಿರ್ಬಂಧವನ್ನು ಹೇರಿತ್ತು. ಇದನ್ನು ಪ್ರಶ್ನಿಸಿ, ಸಲ್ಲಿಸಲಾಗಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ನಡೆಸಿದ ರಾಜ್ಯ ಉಚ್ಚ ನ್ಯಾಯಾಲಯ ಅದಕ್ಕೆ ತಡೆಯನ್ನು ನೀಡಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಅಂಕುಶ ಹೇರಲು ತಂದಿದ್ದ ಈ ಕಾನೂನು ನಿಮಗೆ ಬೇಕಿತ್ತಾ ಎಂದು ಭಾರತೀಯ ಜನತಾ ಪಾರ್ಟಿ ವ್ಯಂಗ್ಯ ಮಾಡಿದೆ.
ಆರ್‌ಎಸ್‌ಎಸ್ ಗುರಿಯಾಗಿಸಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಪಥ ಸಂಚಲನ, ಸಭೆ – ಸಮಾವೇಶಗಳಿಗೆ ನಿರ್ಬಂಧ ಹೇರಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ತಾತ್ಕಾಲಿಕ ತಡೆ ನೀಡಿ ನೀತಿಪಾಠ ಹೇಳಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಟಿ ಬೀಸಿದ್ದಾರೆ.
ದೆಹಲಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ” ಸರ್ಕಾರದ ಜಾಗ, ಆವರಣಗಳಲ್ಲಿ ಕಾರ್ಯಕ್ರಮ ನಡೆಸಲು ಖಾಸಗಿ ಸಂಸ್ಥೆಗಳು ಪೂರ್ವಾನುಮತಿ ಪಡೆಯಬೇಕೆಂದು ಹೊರಡಿಸಿದ ಆದೇಶಕ್ಕೆಧಾರವಾಡ ಹೈಕೋರ್ಟ್ ಪೀಠ ತಾತ್ಕಾಲಿಕ ತಡೆ ನೀಡಿದೆ. ಇದು ಸಂವಿಧಾನದ ಮೌಲ್ಯಕ್ಕೆ ಸಿಕ್ಕ ಜಯವಾಗಿದೆ” ಎಂದು ಜೋಶಿ ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಪೂರ್ವಾಗ್ರಹಪೀಡಿತವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಗುರಿಯಾಗಿಸಿಕೊಂಡು ಸರ್ಕಾರದ ಆಸ್ತಿ ನೆಪದಲ್ಲಿ ರಸ್ತೆ, ಉದ್ಯಾನವನ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರೇತರ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಜೋಷಿ ಖಂಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನದ ಮೂಲ ಆಶಯಗಳ ವಿರೋಧವಾಗಿ ನಡೆಯುತ್ತಿದೆ ಎಂಬುದಕ್ಕೆ ಹೈಕೋರ್ಟ್ ಪೀಠ ನೀಡಿದ ಈ ಮಹತ್ವದ ತೀರ್ಪೇ ಸಾಕ್ಷಿ ಎಂದ ಸಚಿವರು, ಸಂವಿಧಾನ ವಿರೋಧಿ ಕ್ರಮಗಳನ್ನು ಅನುಸರಿಸುವ ಸರ್ಕಾರಕ್ಕೆ ನ್ಯಾಯಾಲಯದ ಈ ತೀರ್ಪು ಎಚ್ಚರಿಕೆಯ ಗಂಟೆಯಾಗಿದೆ. ಈ ಸರ್ಕಾರ ಇನ್ನಾದರೂ ಸಂವಿಧಾನದ ಮೂಲ ಆಶಯ ಗೌರವಿಸುವ ಕಾರ್ಯವನ್ನು ಪಾಲಿಸಲಿ ಎಂದು ಜೋಶಿ ಸಲಹೆ ನೀಡಿದರು.
” ಆರ್‌ಎಸ್‌ಎಸ್ ಕುರಿತು ನ್ಯಾಯಾಲಯ ನೀಡಿರುವ ಆದೇಶ ಸಂವಿಧಾನದ ಆಶಯಕ್ಕೆ ಪೂರವಾಗಿದೆ. ಸಂಘದ ಶಾಖೆಯಿಂದ ಇದುವರೆಗೆ ಯಾವುದೇ ದೊಂಬಿ, ಗಲಭೆಗಳು ನಡೆದಿಲ್ಲ. ಸಂಘದ ಚಟುವಟಿಕೆಗಳನ್ನು ನಿಯಂತ್ರಿಸಲು ಹೊರಟ ಸರ್ಕಾರಕ್ಕೆ ನ್ಯಾಯಾಲಯದ ತೀರ್ಪಿನಿಂದ ಮುಖಭಂಗವಾಗಿದೆ” ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಅಭಿಪ್ರಾಯ ಪಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಕಪಾಳಮೋಕ್ಷ! ಆರ್‌ಎಸ್‌ಎಸ್ ಅನ್ನು ನಿರ್ಬಂಧಿಸಲು ಸಿಎಂ ಸಿದ್ದರಾಮಯ್ಯನವರ ಸರ್ಕಾರ ಹೊರಡಿಸಿದ್ದ ರಾಜಕೀಯ ಪ್ರೇರಿತ ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಸದಾ ದೇಶಸೇವೆಗೆ ಸಿದ್ಧರಿರುವ ಸಂಘಶಕ್ತಿಯನ್ನು ನಿರ್ಬಂಧಿಸಲು ಯಾವ ʼಕೈʼಗಳಿಗೂ ಸಾಧ್ಯವಿಲ್ಲ ಎಂದು ಕರ್ನಾಟಕ ಬಿಜೆಪಿ ಐಟಿ ಸೆಲ್, ಟ್ವೀಟ್ ಮಾಡಿದೆ.









