ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
ಇದು ನಿಜಕ್ಕೂ ಆಶ್ಚರ್ಯಕರ ಸಂಗತಿ. ನಾವು ಅಪರೂಪಕ್ಕೊಮ್ಮೆ ನಮ್ಮ ಮನೆಯ ಅಥವಾ ಅಂಗಡಿಯ ಹಳೆಯ ವಸ್ತುಗಳನ್ನು ಗುಜರಿ ಅವರಿಗೆ ನೀಡಿ ನೂರೋ, ಸಾವಿರನೋ ಸಂಪಾದಿಸಿ ಅದನ್ನೇ ಲಾಭ ಎಂದು ಅಂದುಕೊಂಡಿರುತ್ತೇವೆ. ಗುಜರಿಯವನ ಬಳಿ ಒಂದಿಷ್ಟು ಚೌಕಾಶಿ ಮಾಡಿ ಹತ್ತಿಪ್ಪತ್ತು ರೂಪಾಯಿ ಜಾಸ್ತಿ ಗಳಿಸಿದರೆ ನಮ್ಮ ಖುಷಿಗೆ ಪಾರವೇ ಇಲ್ಲ. ಆದರೆ ಹಳೆಯ ಕಡತಗಳನ್ನು ಗುಜರಿಗೆ ನೀಡುವ ಮೂಲಕ ಸರಕಾರಗಳು ಕೋಟಿ ಕೋಟಿ ಹಣ ಸಂಪಾದಿಸುತ್ತವೆ ಎನ್ನುವುದನ್ನು ನೋಡುವಾಗ ನಿಜಕ್ಕೂ ಸೋಜಿಗವಾಗುತ್ತದೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ ತಿಂಗಳು ನಡೆಸಿದ ಬೃಹತ್ ಸ್ವಚ್ಛತಾ ಅಭಿಯಾನ 5.0 ಅಡಿಯಲ್ಲಿ, ಸರಕಾರಿ ಕಚೇರಿಗಳಲ್ಲಿದ್ದ ಅನುಪಯುಕ್ತ ವಸ್ತುಗಳನ್ನು ಮಾರಾಟ ಮಾಡಿದ್ದು, ಅದರಿಂದ 800 ಕೋಟಿ ರೂ ಆದಾಯ ಗಳಿಸಿದೆ. ಈ ಮೊತ್ತವು 2023 ರಲ್ಲಿ ಇಸ್ರೋದ ಯಶಸ್ವಿ ಚಂದ್ರಯಾನ -3 ಯೋಜನೆಗೆ ವೆಚ್ಚವಾಗಿದ್ದ 615 ಕೋಟಿ ರೂಗಳಿಗಿಂರ ಅಧಿಕ ಎನ್ನುವುದು ಎಲ್ಲರಿಗೂ ಹುಬ್ಬೇರಿಸುವಂತೆ ಮಾಡಿದೆ.

ಸುಮಾರು 11.58 ಲಕ್ಷ ಕಚೇರಿಗಳಲ್ಲಿ ಅಕ್ಟೋಬರ್ 2 ರಿಂದ ಅಕ್ಟೋಬರ್ 31 ರ ನಡುವೆ ನಡೆದ ಸ್ವಚ್ಚತಾ ಕಾರ್ಯದಲ್ಲಿ ಸುಮಾರು 29 ಲಕ್ಷ ಕಡತ ವಿಲೇವಾರಿ ಮಾಡಲಾಗಿದೆ. ಜತೆಗೆ, ಉಪಯೋಗವಿಲ್ಲದ ದಾಖಲೆಗಳು, ಎಲೆಕ್ಟ್ರಾನಿಕ್ ತ್ಯಾಜ್ಯ, ಪೀಠೋಪಕರಣ, ವಾಹನ, ಯಂತ್ರೋಪಕರಣಗಳನ್ನು ಗುಜರಿಗೆ ಹಾಕಲಾಗಿದೆ. ಈ ವೇಳೆ 232 ಲಕ್ಷ ಚದರ ಅಡಿಯಲ್ಲಿ ಹರಡಿದ್ದ ವಸ್ತುಗಳನ್ನು ತೆರವುಗೊಳಿಸಲಾಗಿದೆ. ಈ ಪ್ರಮಾಣದಲ್ಲಿ ಕಚೇರಿಯನ್ನು ತೆರವುಗೊಳಿಸಿದ್ದು ಇದೇ ಮೊದಲು. 2021 ರಲ್ಲಿ ಈ ವಿಶಿಷ್ಟ ಅಭಿಯಾನವನ್ನು ಆರಂಭಿಸಲಾಗಿತ್ತು. ಅದರ ನಂತರ ಕೇಂದ್ರ ಸರಕಾರ ಸುಮಾರು 4100 ಕೋಟಿ ರೂ ಹಣ ಗಳಿಸಿದೆ. ಇದನ್ನು ಎಲ್ಲಾ ರಾಜ್ಯಗಳು ಅನುಷ್ಠಾನಕ್ಕೆ ತರುವ ಮೂಲಕ ಸ್ವಚ್ಚತೆಯಿಂದ ಆದಾಯ ಗಳಿಸುವತ್ತ ಗಮನ ಹರಿಸುವುದು ಉತ್ತಮ.









