ಮದರಸಾಗಳಲ್ಲಿ ಪ್ರತಿದಿನ ರಾಷ್ಟ್ರಗೀತೆ ಕಡ್ಡಾಯ: ಮಧ್ಯಪ್ರದೇಶ ಸರಕಾರ
ಭೋಪಾಲ್: ಸ್ವಾತಂತ್ರ್ಯ ದಿನಾಚರಣೆಯಂದು ಉತ್ತರಪ್ರದೇಶದ ಎಲ್ಲ ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡಬೇಕು ಎಂದು ಆದೇಶ ಹೊರಡಿಸಿದ್ದ ಬೆನ್ನಲ್ಲೇ, ಮಧ್ಯಪ್ರದೇಶದ ಮದರಸಾಗಳಲ್ಲಿ ಪ್ರತಿನಿತ್ಯ ರಾಷ್ಟ್ರ ಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡಬೇಕು ಎಂದು ರಾಜ್ಯ ಶಿಕ್ಷಣ ಸಚಿವ ವಿಜಯ್ ಶಾ ಹೇಳಿದ್ದಾರೆ.
ಮದರಸಾ ಮಂಡಳಿಯ 20ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, “ಎಲ್ಲ ಮದರಸಾಗಳಲ್ಲೂ ರಾಷ್ಟ್ರಗೀತೆ ಹಾಗೂ ಧ್ವಜಾರೋಹಣ ಮಾಡಬೇಕು. ಸರಕಾರಿ ಶಾಲೆಗಳಲ್ಲಿ ಈ ನಿಯಮ ಜಾರಿಯಲ್ಲಿದ್ದು, ಮದರಸಾಗಳಲ್ಲೂ ಪಾಲಿಸಬೇಕು’ ಎಂದಿದ್ದಾರೆ.
ಇದು ರಾಷ್ಟ್ರದ ಘನತೆಯ ವಿಷಯವಾಗಿದ್ದು, ರಾಷ್ಟ್ರಗೀತೆ ಹಾಡಿಸುವ ಮೂಲಕ ಮಕ್ಕಳಲ್ಲಿ ದೇಶಭಕ್ತಿ ಮೂಡಿಸಬೇಕು. ಇಲ್ಲದಿದ್ದರೆ ಇದು ದೇಶಕ್ಕೆ ಮಾಡುವ ಮೋಸವಾಗುತ್ತದೆ ಎಂದು ಹೇಳಿದ್ದಾರೆ.
ಶೈಕ್ಷಣಿಕ ಏಳಿಗೆ ದೃಷ್ಟಿಯಿಂದ ಮದರಸಾಗಳಲ್ಲಿ ಕಂಪ್ಯೂಟರ್ ಶಿಕ್ಷಣ ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಆಗಸ್ಟ್ 15ರಂದು ಸಹ ಉತ್ತರಪ್ರದೇಶದಲ್ಲಿ ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜಾರೋಹಣ ಕಡ್ಡಾಯಗೊಳಿಸಲಾಗಿತ್ತು. ಬಹುತೇಕ ಮದರಸಾಗಳಲ್ಲಿ ಅದೇಶ ಪಾಲಿಸಿದ್ದರೆ, ಕೆಲವೊಂದು ಉಲ್ಲಂಘಿಸಿದ್ದವು.
Leave A Reply