ಕೃಷ್ಣ ಅಳಿಯ ಸಿದ್ಧಾರ್ಥ ಮೇಲೆ ನಡೆದ ಐಟಿ ದಾಳಿ ದ್ವೇಷದ ರಾಜಕೀಯ!

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥರ ಅಷ್ಟೂ ಸಂಪತ್ತಿನ ಮೇಲೆ ಐಟಿ ದಾಳಿ ನಡೆದದ್ದನ್ನು ಕಾಂಗ್ರೆಸ್ ಹೇಗೆ ನೋಡುತ್ತದೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಡಿಕೆಶಿವಕುಮಾರ್ ಅವರ ಆಸ್ತಿ, ಮನೆ, ಅವರು ಬಂಡವಾಳ ಹೂಡಿದ ಸ್ಥಳಗಳು, ವಿದೇಶಿ ಮಾಲ್ ಗಳು, ಅವರ ಆಪ್ತರ, ಸಂಬಂಧಿಕರ ನಿವಾಸಗಳ ಮೇಲೆ ಶೋಧ ಕಾರ್ಯ ನಡೆದಾಗ ಇದೊಂದು ದ್ವೇಷ ರಾಜಕೀಯ ಎಂದು ಕಾಂಗ್ರೆಸ್ಸಿನ ಅನೇಕ ನಾಯಕರು ಮಾಧ್ಯಮಗಳಲ್ಲಿ ಹೇಳಿಕೊಂಡರು. ಕಾಂಗ್ರೆಸ್ಸಿನ ದಕ್ಷಿಣ ಕನ್ನಡ ಕಾನೂನು ಘಟಕದ ಅಧ್ಯಕ್ಷ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಎಸಿ ವಿನಯರಾಜ್ ಅವರು ಮಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಕಚೇರಿಯ ಗಾಜು ಒಡೆದ ಗುಂಪಿನ ನೇತೃತ್ವವನ್ನು ವಹಿಸಿದ್ದರು. ಅಷ್ಟರಮಟ್ಟಿಗೆ ಡಿಕೆಶಿ ಮೇಲೆ ನಡೆದ ಶೋಧ ಕಾರ್ಯವನ್ನು ಕಾಂಗ್ರೆಸ್ಸಿಗರು ವಿರೋಧಿಸಿದ್ದರು. ಜಿಲ್ಲಾವಾರು ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆದವು. ಈಗ ಅದೇ ಪಕ್ಷದಲ್ಲಿ ಶಾಸಕ, ಸಚಿವ, ಸಂಸದ, ಸ್ಪೀಕರ್, ಮುಖ್ಯಮಂತ್ರಿ, ರಾಜ್ಯಪಾಲ, ವಿದೇಶಾಂಗ ಸಚಿವ, ಕೆಪಿಸಿಸಿ ಅಧ್ಯಕ್ಷ ಹೀಗೆ ಏನೇನು ದೊಡ್ಡ ದೊಡ್ಡ ಸ್ಥಾನಗಳಿವೆಯೋ ಅದರಲ್ಲೆಲ್ಲ ಕುಳಿತು ಬಂದ ಎಸ್ ಎಂ ಕೃಷ್ಣ ಅವರ ಅಳಿಯ ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಪಾಲಿಗೆ ಎಟಿಎಂ ಆಗಿದ್ದ ಸಿದ್ಧಾರ್ಥ ಅವರ ಆಸ್ತಿಪಾಸ್ತಿಗಳ ಮೇಲೆ ಐಟಿ ದಾಳಿಯಾದರೂ ಕಾಂಗ್ರೆಸ್ ಮೌನವಾಗಿದೆ. ಏಕೆಂದರೆ ಕೃಷ್ಣ ಈಗ ಭಾರತೀಯ ಜನತಾ ಪಾರ್ಟಿಯಲ್ಲಿದ್ದಾರೆ.
ಬಹುಶ: ಈಗಲೂ ಕೃಷ್ಣ ಕಾಂಗ್ರೆಸ್ಸಿನಲ್ಲಿದ್ದರೆ ಇದನ್ನು ಕೂಡ ದ್ವೇಷದ ರಾಜಕೀಯ ಎಂದು ಕಾಂಗ್ರೆಸ್ಸಿಗರು ಕರೆಯುತ್ತಿದ್ದರು ಎಂದು ಮತ್ತೆ ಹೇಳಬೇಕಾಗಿಲ್ಲ. ಆದರೆ ಈಗ ಕರೆಯುತ್ತಿಲ್ಲ ಎನ್ನುವುದಕ್ಕೆ ಒಂದೇ ಕಾರಣ ಕೃಷ್ಣ ಪಾಳಯ ಜಿಗಿದಿದ್ದಾರೆ. ಇಲ್ಲಿ ಈಗ ಎರಡು ಪ್ರಶ್ನೆ ಉದ್ಭವಿಸುತ್ತದೆ. ಒಂದನೇಯದಾಗಿ ಐಟಿಯನ್ನು ಮೋದಿಯವರಾಗಲೀ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ದುರುಪಯೋಗಪಡಿಸುತ್ತಿದೆಯೋ, ಇಲ್ವೋ? ಏಕೆಂದರೆ ದುರುಪಯೋಗಪಡಿಸುತ್ತಿದೆ ಎಂದರೆ ಕೃಷ್ಣ ಅವರ ಅಳಿಯನ ಕಾಫಿ ಡೇ ಆಗಲಿ ಬೇರೆ ಯಾವುದೇ ಉದ್ಯಮವನ್ನಾಗಲಿ ಮೋದಿ ಅಥವಾ ಕೇಂದ್ರದ ಬಿಜೆಪಿ ಮುಟ್ಟಲು ಹೋಗುವ ಅವಶ್ಯಕತೆ ಇರಲಿಲ್ಲ. ಏಕೆಂದರೆ ಕೃಷ್ಣ ಈಗ ಬಿಜೆಪಿ. ಅವರ ಅಳಿಯನಲ್ಲಿರುವ ಹಣದ ಒಂದು ಚಿಕ್ಕ ಭಾಗವನ್ನು ಬಿಜೆಪಿ ರಾಜ್ಯ ವಿಧಾನಸಭಾ ಚುನಾವಣೆಗೆ ಬಳಸಿದರೂ ಆರಾಮವಾಗಿ ಎಲ್ಲಾ ಅಭ್ಯರ್ಥಿಗಳಿಗೆ ಚುನಾವಣಾ ಖರ್ಚಿಗೆಂದು ಇಂತಿಂಷ್ಟು ಕೋಟಿ ಬರುತ್ತಿತ್ತು. ಇನ್ನು ಕೃಷ್ಣ ರಾಜ್ಯದ ಪ್ರಬಲ ಒಕ್ಕಲಿಗ ನಾಯಕ. ಅವರನ್ನು ಬೇಸರಪಡಿಸಿ ಚುನಾವಣಾ ಹತ್ತಿರದಲ್ಲಿರುವಾಗ ತನ್ನ ಕಾಲ ಮೇಲೆ ಕಲ್ಲು ಹಾಕಲು ಬಿಜೆಪಿ ಹೋಗುತ್ತಿರಲಿಲ್ಲ. ಇಷ್ಟಾಗಿಯೂ ಐಟಿ ದಾಳಿ ನಡೆದಿದೆ ಎಂದರೆ ಅದರ್ಥ ಕೇಂದ್ರ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಲ್ಲ ಎನ್ನುವುದು ಸ್ಪಷ್ಟ.
ಇನ್ನೊಂದು ಪ್ರಶ್ನೆ, ಸಿದ್ಧಾರ್ಥ ಅವರ ಆಸ್ತಿಗಳ ಮೇಲೆ ಐಟಿ ದಾಳಿ ಮಾಡಿದ್ದನ್ನು ಕಾಂಗ್ರೆಸ್ ಸಾಂಕೇತಿಕವಾಗಿಯೂ ಪ್ರತಿಭಟಿಸಿಲ್ಲ ಎಂದರೆ ಅವರಿಗೆ ಕೃಷ್ಣರ ಅಳಿಯ ಮಾಡಿದ್ದು ಅಕ್ರಮ ಆಸ್ತಿ ಎನ್ನುವ ಗ್ಯಾರಂಟಿ ಇದೆಯಾ? ಕೃಷ್ಣ ಅವರು ಕಾಂಗ್ರೆಸ್ಸಿನಲ್ಲಿದ್ದಾಗ ಒಮ್ಮೆ ಮಂಗಳೂರಿಗೆ ಬಂದಿದ್ದಾಗ ವರದಿಗಾರರೊಬ್ಬರು ಕೇಳಿದ್ದರು ” ಕೃಷ್ಣ ಅವರೇ, ನೀವು ರಾಜ್ಯಪಾಲರಾದ ನಂತರ ನಿಮ್ಮ ರಾಜಕೀಯ ಜೀವನ ಮುಗಿಯಿತು ಎಂದೇ ಭಾವಿಸಲಾಗಿತ್ತು. ರಾಜ್ಯಪಾಲರಾದವರು ಮತ್ತೆ ಸಕ್ರಿಯ ರಾಜಕೀಯಕ್ಕೆ ಬರುವುದು ಕಡಿಮೆ, ಹಾಗಿರುವಾಗ ನೀವು ಕೇಂದ್ರ ಸಚಿವರಾಗಿದ್ದೀರಿ, ಹೇಗೆ ಸಾಧ್ಯವಾಯಿತು?” ಅದಕ್ಕೆ ಮುಗುಳ್ನಕ್ಕ ಕೃಷ್ಣ ” ಎಲ್ಲವೂ ಕಾಂಗ್ರೆಸ್ಸ್ ಹೈಕಮಾಂಡ್ ಕೃಪೆ” ಎಂದಿದ್ದರು.
ಕೃಷ್ಣ ಕಾಂಗ್ರೆಸ್ಸಿನಲ್ಲಿದ್ದಷ್ಟು ಸಮಯ ಅವರು ದೆಹಲಿಯ ನಾಯಕರಿಗೆ ಕರ್ನಾಟಕದಿಂದ ಮಿಟಾಮಿನ್ “ಎಂ” ಕಳುಹಿಸಿ ತಮ್ಮ ಪಾಲಿನ ಕಪ್ಪವನ್ನು ಕಾಂಗ್ರೆಸ್ ಹೈಕಮಾಂಡ್ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚೇ ಕಳುಹಿಸಿಕೊಟ್ಟಿದ್ದರು. ಆದ್ದರಿಂದ ಅವರ ಅಳಿಯನನ್ನು ಮುಟ್ಟಲು ಕಾಂಗ್ರೆಸ್ ಹಿಂಜರಿಯುತ್ತಿತ್ತು. ಕೃಷ್ಣ ಅಧಿಕಾರ ಅನುಭವಿಸಿದ ಅಷ್ಟೂ ಸಚಿವಾಲಯಗಳಲ್ಲಿ ಸಿದ್ಧಾರ್ಥ ಅವರ ಹೆಸರು ನಡೆಯುತ್ತಿತ್ತು. ಆದರೆ ಬರುಬರುತ್ತಾ ಕಾಂಗ್ರೆಸ್ಸಿನ ಹಿರಿಯರು ಮೂಲೆಗುಂಪಾದಂತೆ ಕೃಷ್ಣ ಅವರು ಸೈಡ್ ಲೈನ್ ಗೆ ಸರಿದರು. ಅವರಿಗೆ ಆಗ ಸಕ್ರಿಯವಾಗಿ ರಾಜಕೀಯ ಅಂಗಣ ಕೊಟ್ಟಿದ್ದು ಬಿಜೆಪಿ. ತಮ್ಮ ಅಳಿಯನ ಅಷ್ಟೂ ಕಪ್ಪು ಹಣ ಉಳಿಸಲು ಕೃಷ್ಣರಿಗೆ ಬಿಜೆಪಿ ಬೇಕಿತ್ತಾ? ಗೊತ್ತಿಲ್ಲ, ಆದರೆ ತಪ್ಪು ಮಾಡಿದವರನ್ನು ಉಳಿಸುವ ಪ್ರಶ್ನೆ ಇಲ್ಲ, ನಿಮಗೆ ಮುಕ್ತ ಸ್ವಾತಂತ್ರ್ಯ ಇದೆ, ಯಾರನ್ನು ಬೇಕಾದರೂ ಗೆಡ್ಡಾಕ್ಕೆ ಕೆಡವಿ, ಅದು ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಎನ್ನುವ ಸಂದೇಶ ಪಡೆದುಕೊಂಡಿರುವ ಐಟಿ ಇಲಾಖೆ ರಣವೀಳ್ಯದ ಮುಂದುವರೆದ ಭಾಗವಾಗಿ ಬಲೆ ಬೀಸಿದ್ದು ಸಿದ್ಧಾರ್ಥ ಅವರನ್ನು.
ಈಗ ಕಾಂಗ್ರೆಸ್ ಮುಂದಿರುವ ಪ್ರಶ್ನೆ. ಕೃಷ್ಣರ ಋಣದಿಂದ ಇಷ್ಟು ವರ್ಷ ನಡೆಯುತ್ತಿದ್ದವರು ಈಗ ಮಲಗಿಬಿಟ್ಟಿರಾ? ತಪ್ಪು ಮಾಡಿದವರು ಯಾರೇ ಆಗಿರಲಿ ಮೋದಿ ಬಿಡಲ್ಲ ಎಂದು ಒಪ್ಪಿಕೊಳ್ಳುತ್ತಿರಾ? ಇನ್ನಾದರೂ ಡಿಕೆಶಿ ಮನೆಯಲ್ಲಿ ಶೋಧದ ಕಾರ್ಯಾಚಾರಣೆ ರಾಜಕೀಯ ದ್ವೇಷ ಎಂದು ಹೇಳುವುದನ್ನು ನಿಲ್ಲಿಸುತ್ತೀರಾ!