ರಾಜಶೇಖರ್ ಕೋಟ್ಯಾನ್ ದಕ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ?
ಪರಮೇಶ್ವರ್ ಅವರು ಮುಂದಿನ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಲಿ, ಭವಿಷ್ಯದಲ್ಲಿ ರಾಷ್ಟ್ರಪತಿಯಾಗಲಿ ಎಂದು ಹಾರೈಸಿದ್ರು ಬಿ ಜನಾರ್ಧನ ಪೂಜಾರಿ. ಹಾಗೇ ಪ್ರಧಾನಿ ಕೂಡ ಆಗಲಿ ಎಂದು ಹಾರೈಸಬಹುದಿತ್ತೇನೋ, ಆದರೆ ಹಾಗೆ ಹಾರೈಸಿದಂತೆ ಕಾಣಲಿಲ್ಲ. ಇದರ ಅರ್ಥ ಇಷ್ಟೇ. ಪ್ರಧಾನ ಮಂತ್ರಿಯಾಗುವುದಾದರೆ ಮತ್ತೆ ಕಾಂಗ್ರೆಸ್ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಬೇಕು. ಆ ಬಗ್ಗೆ ಪೂಜಾರಿಯವರಿಗೆ ಅನುಮಾನಗಳಿರಬಹುದು. ಇನ್ನು ಒಂದು ವೇಳೆ ಯಾವತ್ತಾದರೂ ಬಂದ್ರೂ ಕೂಡ ರಾಹುಲ್ ಗಾಂಧಿಯವರಷ್ಟು ಅರ್ಹ ವ್ಯಕ್ತಿ ಕಾಂಗ್ರೆಸ್ ನಲ್ಲಿ ಬೇರೆ ಯಾರೂ ಇಲ್ಲದೇ ಇರುವುದರಿಂದ ಪೂಜಾರಿಯವರು ಪರಮೇಶ್ವರ್ ಪ್ರಧಾನಿಯಾಗಲಿ ಎಂದು ಹೇಳಿರಲಿಕ್ಕಿಲ್ಲ.
ಪರಮೇಶ್ವರ್ ಅವರ ಮೇಲೆ ಪೂಜಾರಿಯವರಿಗೆ ಎಷ್ಟು ಪ್ರೀತಿ ಇದೆಯೋ ಗೊತ್ತಿಲ್ಲ, ಆದರೆ ಅವರಿಗೆ ಆದಷ್ಟು ಬೇಗ ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕು ಎನ್ನುವ ಆಸೆ ಇದೆ. ಆದ್ದರಿಂದ ಚುನಾವಣೆ ಆದ ಬಳಿಕ ಶಾಸಕಾಂಗ ಸಭೆಯಲ್ಲಿ ಯಾರು ಮುಖ್ಯಮಂತ್ರಿಯಾಗಬೇಕು ಎನ್ನುವ ಸಲಹೆ ಕೇಳಿ ನಂತರ ಅದಕ್ಕೆ ಹೈಕಮಾಂಡ್ ಒಪ್ಪಿಗೆ ಸಿಗಬೇಕು ಎನ್ನುವುದು ಗೊತ್ತಿದ್ದರೂ ಪೂಜಾರಿಯವರು ಪರಮೇಶ್ವರ್ ಸಿಎಂ ಆಗಲಿ ಎನ್ನುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಇನ್ನು ಜನಾರ್ಧನ ಪೂಜಾರಿಯವರಿಗೆ ಮುಂದಿನ ಬಾರಿ ಲೋಕಸಭೆಗೆ ಕಾಂಗ್ರೆಸ್ ಟಿಕೇಟ್ ಸಿಗುವುದು ನೂರಕ್ಕೆ ನೂರು ಸಾಧ್ಯವಿಲ್ಲದಿರುವುದರಿಂದ ಮತ್ತು ಪ್ರಸ್ತುತ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ಸಿನಿಂದ ಲೋಕಸಭೆಗೆ ಸಮರ್ಥ ಅಭ್ಯರ್ಥಿ ಇಲ್ಲದಿರುವುದರಿಂದ ಕಾಂಗ್ರೆಸ್ ಹೊಸ ಮುಖವೊಂದಕ್ಕೆ ಗಾಳ ಹಾಕಿದೆ. ಅವರ ಹೆಸರು ರಾಜಶೇಖರ್ ಕೋಟ್ಯಾನ್.
ಸಿನೆಮಾ ನಟ, ನಿರ್ಮಾಪಕ, ಬಿಲ್ಲವ ಮುಖಂಡ ರಾಜಶೇಖರ್ ಕೋಟ್ಯಾನ್ ಅವರನ್ನು ವಿದ್ಯುಕ್ತವಾಗಿ ಕಾಂಗ್ರೆಸ್ ಗೆ ಸೇರಿಸಿಕೊಂಡಿರುವ ಕಾಂಗ್ರೆಸ್ ಅವರಿಗೆ ದಕ್ಷಿಣ ಕನ್ನಡ ಲೋಕಸಭೆಗೆ ಟಿಕೇಟ್ ಕೊಡಲು ನಿರ್ಧರಿಸಿದೆ ಎಂದು ಪಕ್ಷದ ಒಳಗಿನ ಮೂಲಗಳಿಂದ ತಿಳಿದು ಬಂದಿದೆ. ಭರ್ಥಿ ಒಂದೂವರೆ ವರ್ಷ ಲೋಕಸಭಾ ಚುನಾವಣೆಗೆ ಸಮಯ ಇರುವುದರಿಂದ ಈಗಿನಿಂದಲೇ ತಯಾರಿ ನಡೆಸಲು ಅವರಿಗೆ ಸೂಚನೆ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ. ಜನಾರ್ಧನ ಪೂಜಾರಿ ಬಿಟ್ಟು ಹೋಗಲಿರುವ ಸ್ಥಾನಕ್ಕೆ ರಾಜಶೇಖರ್ ಕೋಟ್ಯಾನ್ ಎಷ್ಟರಮಟ್ಟಿಗೆ ತಮ್ಮ ಪ್ರಭಾವ ತೋರಿಸಬಲ್ಲರು ಎನ್ನುವುದು ಬರುವ ದಿನಗಳಲ್ಲಿ ಗೊತ್ತಾಗಲಿದೆ. ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾಗಿ ಕಾಂಗ್ರೆಸ್ ನಿಂದ ಯಾರೂ ಗೆಲ್ಲದೆ ಎರಡು ದಶಕಗಳ ಮೇಲಾಗಿದೆ. ಹೀಗಿರುವಾಗ ಈಗ ಮತ್ತೆ ಜನರು ಕಾಂಗ್ರೆಸ್ಸಿಗೆ ಮಣೆ ಹಾಕುತ್ತಾರಾ ಎನ್ನುವುದು ಕಾಣುವ ಪ್ರಶ್ನೆ. ಮುಂದಿನ ಬಾರಿಯೂ ನರೇಂದ್ರ ಮೋದಿಯವರೇ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿರುವುದರಿಂದ ಮತ್ತು ಉಳಿದ ಒಂದೂವರೆ ವರ್ಷದಲ್ಲಿ ರಾಷ್ಟ್ರದ ಆರ್ಥಿಕ ಸ್ಥಿತ್ಯಂತರಗಳನ್ನು ಮರಳಿ ಟ್ರಾಕ್ ಗೆ ತಂದರೆ ಮೋದಿಯವರನ್ನು ಹಿಡಿಯುವುದು ಕಷ್ಟ. ಆಗ ಇದೇ ಫಲಿತಾಂಶ ಪುನರಾವರ್ತನೆ ಆದರೂ ಆಗಬಹುದು.
Leave A Reply