ಉ.ಪ್ರ. ಮದರಸಾಗಳಲ್ಲಿ ಎನ್ ಸಿಇಆರ್ ಟಿ ಪುಸ್ತಕ ಪಠ್ಯವಾಗಿಸಲು ಸರ್ಕಾರ ನಿರ್ಧಾರ
ಲಖನೌ: ಉತ್ತರ ಪ್ರದೇಶದಲ್ಲಿ ಹಲವರ ವಿರೋಧದ ನಡುವೆಯೂ ಸ್ವಾತಂತ್ರ್ಯ ದಿನದಂದು ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿ ರಾಷ್ಟ್ರ ಪ್ರೇಮ ಹಾಗೂ ದಿಟ್ಟತನ ಮೆರೆದಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಮದರಸಾಗಳಲ್ಲಿರುವ ಧರ್ಮ ಬೋಧನೆ ಬಿಟ್ಟು, ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ (ಎನ್ ಸಿಇಆರ್ ಟಿ) ಪಠ್ಯಪುಸ್ತಕದನ್ವಯ ಪಾಠ ಮಾಡುವ ಕುರಿತು ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ.
ನಿರೀಕ್ಷಿತವಾಗಿಯೇ ಕೆಲವು ಮೂಲಭೂತವಾದಿಗಳು, ಎಡಬಿಡಂಗಿಗಳು ಸರ್ಕಾರದ ನಿರ್ಧಾರದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಇದು ವೈಯಕ್ತಿಕ ಆಚರಣೆ, ಸ್ವಾಂತಂತ್ರ್ಯ,ಶಿಕ್ಷಣ ಹಕ್ಕು ಕಸಿದಂತಾಗುತ್ತದೆ ಎಂದು ಹೇಳಿದ್ದಾರೆ.
ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಉತ್ತರ ಪ್ರದೇಶ ಸರ್ಕಾರ, ನಾವು ಯಾವುದೇ ಮಡಿವಂತ ಶಿಕ್ಷಣದ ವಿರುದ್ಧ ಯೋಜನೆ ರೂಪಿಸಿಲ್ಲ. ರಾಜ್ಯದ ಯಾವುದೇ ವ್ಯಕ್ತಿಯ ವೈಯಕ್ತಿಕ ಬೆಳವಣಿಗೆಗೆ ಈ ಯೋಜನೆ ಅಡ್ಡಿಯಾಗದ ಹಾಗೆ ರೂಪಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
ನಾವು ಯಾವುದೇ ಧರ್ಮ, ಜನರ ಭಾವನೆಗೆ ಧಕ್ಕೆ ಹಾಗೂ ಮಡಿವಂತಿಕೆ ಹಾಳು ಮಾಡಲು ಈ ಚಿಂತನೆ ನಡೆಸಿಲ್ಲ, ಆದರೆ ಈ ಸಮತೋಲಿತ ಶೈಕ್ಷಣಿಕ ಪದ್ಧತಿಯಿಂದ ಯಾರಿಗೂ ಅನ್ಯಾಯವಾಗುವುದಿಲ್ಲ, ಅವರನ್ನು ವಿಚಲಿತಗೊಳಿಸುವುದಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಲಕ್ಷ್ಮೀನಾರಾಯಣ್ ಚೌಧರಿ ತಿಳಿಸಿದ್ದಾರೆ.
ಪ್ರಸ್ತುತ ತಂತ್ರಜ್ಞಾನ ಯುಗ ಚಾಲ್ತಿಯಲ್ಲಿದ್ದು, ಮದರಸಾಗಳಲ್ಲಿ ಕಲಿತವರಾರೂ ಎಂಜಿನಿಯರ್, ಡಾಕ್ಟರ್, ವಿಜ್ಞಾನಿ ಹಾಗೂ ನಾಗರಿಕ ಸೇವೆಯಲ್ಲಿ ತೊಡಗಿಲ್ಲ. ಹಾಗಾಗಿ ಕೌಶಲಯುತ ತರಬೇತಿ ನೀಡಲು ಈ ಯೋಜನೆಗೆ ಕೈಹಾಕಲು ಚಿಂತನೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಸುಮಾರು 16 ಸಾವಿರ ಮದರಸಾಗಳಿದ್ದು, ಬಹುತೇಕ ಮದರಸಾಗಳು ಬರೀ ಧರ್ಮಬೋಧನೆಗೆ ಪ್ರಾಮುಖ್ಯ ನೀಡುತ್ತಿವೆ ಎಂಬ ಆರೋಪದಿಂದ ಯೋಗಿ ಆದಿತ್ಯನಾಥರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.
Leave A Reply