ಉಗ್ರ ಹಫೀಜ್ ಸಯೀದ್ ಬೆಂಬಲಿಸಿದ ಚೀನಾಕ್ಕೀಗ ಉಗ್ರ ದಾಳಿಯ ಭೀತಿ
ಬೀಜಿಂಗ್: ಮುಂಬೈ ದಾಳಿಯ ರೂವಾರಿ ಉಗ್ರ ಹಫೀಜ್ ಸಯೀದ್ ನನ್ನು ಜಾಗತಿಕ ಉಗ್ರರ ಪಟ್ಟಿಯಲ್ಲಿ ಸೇರಿಸಲು ವಿರೋಧಿಸಿದ್ದ ಚೀನಾವೇ ಇದೀಗ ತನ್ನ ನಾಗರೀಕರಿಗೆ ಉಗ್ರ ದಾಳಿಯ ಭೀತಿ ಇದೆ ಎಂದು ಎಚ್ಚರಿಕೆ ನೀಡಿದೆ.
ಚೀನಾ ಪಾಕಿಸ್ತಾನದ ಸಹಕಾರದಲ್ಲಿ 57 ಶತಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಒನ್ ಬೆಲ್ಟ್ ಒನ್ ರೋಡ್ ಯೋಜನೆಯ ಕಾಮಗಾರಿಯಲ್ಲಿ ಭಾಗವಹಿಸಿರುವ ಚೀನಾ ಕಾರ್ಮಿಕರ ಮೇಲೆ ಭಯೋತ್ಪಾದಕರು ಉಗ್ರ ದಾಳಿಯನ್ನು ನಡೆಸುವ ಮೂನ್ಸೂಚನೆ ಇದ್ದು, ಎಚ್ಚರದಿಂದ ಇರಬೇಕು ಎಂದು ಸೂಚನೆ ನೀಡಿದೆ.
ಪಾಕಿಸ್ತಾನದಲ್ಲಿ ಚೀನಾ ಸರ್ಕಾರದ ನೇತೃತ್ವದಲ್ಲಿ ನಾನಾ ಕಂಪೆನಿಗಳು ಕೈಗೊಂಡಿರುವ ಯೋಜನೆಗಳ ಕಾಮಗಾರಿಯಲ್ಲಿ ಚೀನಾದ ಸಾವಿರಾರು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮೇಲೆ ದಾಳಿ ಮಾಡುವ ಭೀತಿ ಚೀನಾ ವಿದೇಶಾಂಗ ಇಲಾಖೆ ವ್ಯಕ್ತಪಡಿಸಿದೆ.
ಚೀನಾ ಕಾರ್ಮಿಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಚೀನಾ ಮನವಿ ಮಾಡಿದೆ. ಕಾರ್ಮಿಕರು ತಮ್ಮ ಭದ್ರತೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಯಾವುದೇ ದಾಳಿಯ, ಆತಂಕದ ಮುನ್ಸೂಚನೆ ದೊರೆತರೆ ಕೂಡಲೇ ಪಾಕ್ ಪೊಲೀಸರಿಗೆ, ಸೈನ್ಯಕ್ಕೆ ಅಥವಾ ಚೀನಾ ರಾಯಭಾರ ಕಚೇರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದೆ.
ಕಾರ್ಮಿಕರು ಆಂತರಿಕ ಭದ್ರತೆ ಹೆಚ್ಚಿಸಿಕೊಳ್ಳಬೇಕು, ಪ್ರವಾಸಗಳನ್ನು ಕಡಿಮೆ ಮಾಡಬೇಕು, ಹೊರಗಡೆ ಜಾಸ್ತಿ ತಿರುಗಾಡಬಾರದು, ಜನರು ಅತಿಯಾಗಿ ಸೇರುವ ಕಡೆ ಹೋಗಬಾರದು ಎಂದು ಚೀನಾ ಸಲಹೆಗಳನ್ನು ನೀಡಿದೆ.
ಇಸ್ಲಾಂ ಮೂಲಭೂತವಾದಿಗಳ ಹಿಂಸಾಚಾರ, ತಾಲಿಬಾನ್, ಅಲ್ ಕೈದಾ ಸೇರಿ ನಾನಾ ಸಂಘಟನೆಗಳು ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವ ಮತ್ತು ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ತನ್ನ ಕಾರ್ಮಿಕರ ರಕ್ಷಣೆಯ ಆತಂಕವನ್ನು ಚೀನಾ ವ್ಯಕ್ತಪಡಿಸಿದೆ.
Leave A Reply