1975ರ ತುರ್ತು ಪರಿಸ್ಥಿತಿಯಲ್ಲಿ ಜೈಲು ಪಾಲಾದವರಿಗೆ ಸ್ವಾತಂತ್ರ ಹೋರಾಟಗಾರರ ಪಟ್ಟ
ಮುಂಬೈ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಧರ್ಪದಿಂದ ದೇಶದ ಇತಿಹಾಸದಲ್ಲೇ ಕರಾಳ ದಿನಗಳಾಗಿದ್ದ 1975ರ ತುರ್ತು ಪರಿಸ್ಥಿತಿ ವಿರೋಧಿಸಿ, ಹೋರಾಡಿ, ಜೈಲುವಾಸ ಅನುಭವಿಸಿದವರಿಗೆ ಸ್ವಾತಂತ್ರ್ಯ ಹೋರಾಟಗಾರರ ಸ್ಥಾನ ನೀಡಲು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದೆ. ಈ ಚಿಂತನೆಗೆ ಬಿಜೆಪಿ ಮತ್ತು ಶಿವಸೇನೆಯ ಎಲ್ಲ ಶಾಸಕರ, ಮುಖಂಡರ ಬೆಂಬಲವೂ ವ್ಯಕ್ತವಾಗಿದೆ.
ಈ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾಹಿತಿ ನೀಡಿದ್ದು, ‘2018ರ ಜನವರಿಯಲ್ಲಿ ನಡೆಯುವ ಪ್ರಥಮ ಸಚಿವ ಸಂಪುಟದಲ್ಲಿ ಚರ್ಚಿಸಿ, ಅಂತಿಮ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಭಾರತದ ಇತಿಹಾಸದಲ್ಲೇ ಸರ್ವಾಧಿಕಾರದ ಆಡಳಿತ ನಡೆಸಿ, ಜನರ ಸ್ವಾತಂತ್ರ್ಯವನ್ನೇ ಕಸಿದುಕೊಂಡಿದ್ದ 1975ರ ಕರಾಳ ದಿನಗಳಲ್ಲಿ, ಲಕ್ಷಾಂತರ ಜನರು ಜೈಲುವಾಸ ಅನುಭವಿಸಿದ್ದರು. ಆದ್ದರಿಂದ ಈ ಮೂಲಕ ಅವರೆಲ್ಲರಿಗೂ ಗೌರವ ನೀಡುವ ಉದ್ದೇಶ ಹೊಂದಲಾಗಿದೆ. ಅಲ್ಲದೇ ದೇಶದ ಪ್ರಜಾಪ್ರಭುತ್ವದ ಮಹತ್ವ ಸಾರಲು ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. ದೇಶದ 19 ರಾಜ್ಯಗಳಲ್ಲೂ ಈ ಚಿಂತನೆ ಜಾರಿ ತರಲು ಉದ್ದೇಶಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಈಗಾಗಲೇ 1975ರ ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿ ಜೈಲುವಾಸ ಅನುಭವಿಸಿದವರ ಸಮೀಕ್ಷೆ ಮತ್ತು ಹೋರಾಟಗಾರರನ್ನು ಗುರುತಿಸುವ ಮಹತ್ತರ ಕಾರ್ಯ ಚಾಲನೆಯಲ್ಲಿದ್ದು, ಹೋರಾಟಗಾರರಿಗೆ ಸ್ವಾಂತಂತ್ರ್ಯ ಹೋರಾಟಗಾರರ ಗೌರವಯುತ ಸ್ಥಾನ ನೀಡಲಾಗುವುದು ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಈ ನಿರ್ಧಾರಕ್ಕೆ ಪ್ರತಿ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, ಇದು ಬಿಜೆಪಿ ಸರ್ಕಾರ ರಾಜಕೀಯ. ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಕೋಟ್ಯಂತರ ಜನರು ಜೀವ ನೀಡಿದ್ದಾರೆ. ಆದರೆ ದೇಶದ ಆಂತರಿಕ ಸಮಸ್ಯೆ ವಿರುದ್ಧ ಹೋರಾಡಿದವರು ಸ್ವಾತಂತ್ರ್ಯ ಹೋರಾಟಗಾರರಾಗಲು ಅಸಾಧ್ಯ ಎಂದು ಹೇಳಿದ್ದಾರೆ.
Leave A Reply