ಭಾರತಕ್ಕೆ ರಾಜತಾಂತ್ರಿಕ ಜಯ: ಸಯೀದ್ ರ್ಯಾಲಿಯಲ್ಲಿ ಭಾಗವಹಿಸಿದ ಪ್ಯಾಲೆಸ್ತೀನ್ ರಾಯಭಾರಿ ವಾಪಸ್
ದೆಹಲಿ: ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದ ರ್ಯಾಲಿಯಲ್ಲಿ 26/11 ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್ ಜತೆ ವೇದಿಕೆ ಹಂಚಿಕೊಂಡಿದ್ದ ಪ್ಯಾಲೆಸ್ತೀನ್ ರಾಯಭಾರಿಯನ್ನು ಪ್ಯಾಲೆಸ್ತೀನ್ ಭಾರತದ ಒತ್ತಡಕ್ಕೆ ಮಣಿದು ವಾಪಸ್ ಕರೆಸಿಕೊಂಡಿದೆ.
ಕಟ್ಟರ್ ಮುಸ್ಲಿಂ ರಾಷ್ಟ್ರವಾಗಿರುವ ಪ್ಯಾಲೆಸ್ತೀನ್ ಹಫೀಜ್ ಸಯೀದ್ ನನ್ನು ದೂರವಿಟ್ಟಿದ್ದು, ಭಾರತಕ್ಕೆ ದೊರೆತ ರಾಜತಾಂತ್ರಿಕ ಜಯವಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮತ್ತೊಮ್ಮೆ ಪಾಕಿಸ್ತಾನ ಮತ್ತು ಉಗ್ರ ಹಫೀಜ್ ಸಯೀದ್ ಗೆ ಕಠೋರ ಸಂದೇಶ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ನಡೆದ ರ್ಯಾಲಿಯಲ್ಲಿ ಉಗ್ರ ಹಫೀಜ್ ಸಯೀದ್ ಜತೆ ಪ್ಯಾಲೆಸ್ತೀನ್ ರಾಯಭಾರಿ ವಲೀದ್ ಅಬು ವಾಲಿ ವೇದಿಕೆ ಹಂಚಿಕೊಂಡಿದ್ದ. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಭಾರತದ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತದಲ್ಲಿರುವ ಪ್ಯಾಲೆಸ್ತೀನ್ ರಾಯಭಾರಿ ಅದ್ನಾನ್ ಅಬು ಅಲ್ ಹೈಜಾ ‘ಭಾರತದ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಪ್ಯಾಲೆಸ್ತೀನ್ ಸದಾ ಬೆಂಬಲಿಸುತ್ತದೆ. ರಾಯಭಾರಿಯನ್ನು ವಾಪಸ್ಸ್ ಕರೆಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಜೇರುಸೆಲಂ ಇಸ್ರೇಲ್ ರಾಜಧಾನಿ ಎಂದು ಘೋಷಿಸಿದ್ದ ಅಮೆರಿಕಾದ ನಿರ್ಧಾರಕ್ಕೆ ಭಾರತ ಅಮೆರಿಕ ವಿರುದ್ಧ ನಿಲುವು ತಾಳಿತ್ತು. ಅಲ್ಲದೇ ಪ್ಯಾಲೆಸ್ತೀನ್ ಗೆ ಬೆಂಬಲ ಸೂಚಿಸಿತ್ತು. ಅಂದು ಭಾರತ ನೀಡಿದ ಬೆಂಬಲದಿಂದ ಇಂದು ಉಗ್ರ ಹಫೀಜ್ ಸಯೀದ್ ಜತೆ ವೇದಿಕೆ ಹಂಚಿಕೊಂಡ ರಾಯಭಾರಿ ಅಬು ವಲಿಯನ್ನು ವಾಪಸ್ಸ್ ಕರೆಸಿಕೊಂಡಿದ್ದು, ರಾಜತಾಂತ್ರಿಕವಾಗಿ ಮತ್ತು ವಿಶ್ವಮಟ್ಟದಲ್ಲಿ ಭಾರತಕ್ಕೆ ದೊರೆತ ಗೌರವ ಎಂದು ವಿಶ್ಲೇಷಣೆ ಮಾಡಲಾಗಿದೆ. ಮುಂದಿನ ವರ್ಷ ಪ್ರಧಾನಿ ನರೇಂದ್ರ ಮೋದಿ ಪ್ಯಾಲೆಸ್ತೀನ್ ಗೆ ಭೇಟಿ ನೀಡುತ್ತಿರುವುದು ಕೂಡ ಪ್ಯಾಲೆಸ್ತೀನ್ ಈ ನಿರ್ಧಾರಕ್ಕೆ ಕೈಗೊಳ್ಳಲು ಕಾರಣ ಎನ್ನಲಾಗಿದೆ.
Leave A Reply