• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ತಾನೇ ನೇಯ್ದ ಬಲೆಯಲ್ಲಿ ಸಿಕ್ಕಿಬಿದ್ದಿದೆ ಚೀನಾ!!

TNN Correspondent Posted On July 12, 2017


  • Share On Facebook
  • Tweet It

ಒಂದೆಡೆ ರಷ್ಯಾ, ಮತ್ತೊಂದೆಡೆ ಅಮೇರಿಕ ಇವೆರಡರೊಂದಿಗೂ ಸಂಬಂಧವಿರಿಸಿಕೊಂಡು ತಾನೇನನ್ನೂ ಕಳೆದುಕೊಳ್ಳದೇ ಭಾರತ ಸಾಕಷ್ಟು ಪಡೆದುಕೊಂಡಿತ್ತು. ಅಕಸ್ಮಾತ್ ಅಮೇರಿಕವನ್ನು ಮೆಚ್ಚಿಸುವ ಭರದಲ್ಲಿ ಭಾರತವೇನಾದರೂ ಅಮೇರಿಕಾ ಮುನ್ನಡೆಸುವ ಯುದ್ಧ ತಂಡಗಳ ಸದಸ್ಯವಾಗಿಬಿಟ್ಟಿದ್ದರೆ ನಮ್ಮ ಸಾರ್ವಭೌಮತೆಗೆ ಧಕ್ಕೆ ಬಂದಿರುತ್ತಿತ್ತು. ನಾವು ಶಕ್ತಿಶಾಲಿಯಾಗಿರುತ್ತಿದ್ದೆವು ನಿಜ ಆದರೆ ದೀರ್ಘ ಕಾಲದ ಮಿತ್ರ ರಷ್ಯಾವನ್ನು ಶಾಶ್ವತವಾಗಿ ಕಳೆದುಕೊಂಡಿರುತ್ತಿದ್ದೆವು. ಈ ಕೋಪಕ್ಕೆ ರಷ್ಯ ಮತ್ತು ಚೀನಾಗಳೆರಡೂ ಪಾಕೀಸ್ತಾನಕ್ಕೆ ಆತುಕೊಂಡಿಬಿಟ್ಟಿದ್ದರೆ ನಾವು ಸಹಿಸಲಾಗದ ಗಾಯವಾಗಿರುತ್ತಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮನ್ನು ಸದಾ ಬೆಂಬಲಿಸುವ ನಂಬಲು ಯೋಗ್ಯವಾದ ರಾಷ್ಟ್ರದಿಂದ ದೂರವಾಗಿರುತ್ತಿದ್ದೆವು. ನಾವು ಎಲ್ಲವನ್ನೂ ಗೆದ್ದೆವು.

ಭಾರತ ಚೀನಾಗಳ ನಡುವೆ ಯುದ್ಧದ ಕಾರ್ಮೋಡಗಳು ದಟ್ಟವಾಗುವಂತೆ ಕಾಣುತ್ತಿವೆ. ಆದರೆ ಜಾಗತಿಕ ಗತಿ-ವಿಧಿಗಳನ್ನು ಅರ್ಥೈಸಿಕೊಂಡ ಯಾವನಾದರೂ ಚೀನಾದ ಇಂದಿನ ಹತಾಶ ಮನಸ್ಥಿತಿಯನ್ನು ನೋಡಿದರೆ ಚೀನಾ ಯುದ್ಧಕ್ಕೆಳೆಸಲಾರದೆಂದು ತಕ್ಷಣಕ್ಕೆ ನಿಶ್ಚಯಿಸಬಲ್ಲ. ಚೀನಾ ತನ್ನ ಹಿಡಿತದಲ್ಲಿರುವ ಪತ್ರಿಕೆಗಳ ಮೂಲಕ ಕೊಡುತ್ತಿರುವ ಹೇಳಿಕೆಗಳನ್ನು ನೋಡಿದರೆ, ಒಂದು ಕಾಲದಲ್ಲಿ ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ ಕೊಡುತ್ತಿತ್ತಲ್ಲ ಅದೇ ದನಿಯಿದೆ. 1962 ರಲ್ಲಿ ಯುದ್ಧಕ್ಕೆ ತಯಾರಾಗಿಲ್ಲದ ಭಾರತಕ್ಕೂ, 2017ರಲ್ಲಿ ಚೀನಾವನ್ನು ತನ್ನದೇ ವ್ಯೂಹದೊಳಗೆ ಸುತ್ತುವರೆದು ಕಟ್ಟಿಹಾಕಿರುವ ಭಾರತಕ್ಕೂ ಭೂಮ್ಯಾಗಸದಷ್ಟು ವ್ಯತ್ಯಾಸವಿದೆ. ಜಪಾನ್, ವಿಯೆಟ್ನಾಮ್, ಕೋರಿಯಾ, ತೈವಾನ್ಗಳನ್ನೆಲ್ಲ ತನ್ನೆಡೆಗೆ ಸೆಳೆದುಕೊಂಡಿರುವ ಭಾರತ, ಟಿಬೆಟ್ನಲ್ಲೂ ಕೈಯ್ಯಾಡಿಸಿ ಚೀನಾಕ್ಕೆ ಉಸಿರುಗಟ್ಟುವಂತೆ ಮಾಡುತ್ತಿದೆ. ಅಷ್ಟೇ ಅಲ್ಲ. ಜಾಗತಿಕವಾಗಿ ಚೀನಾ ಪರ ಒಲವಿರುವ ರಾಷ್ಟ್ರಗಳನ್ನೂ ತನ್ನತ್ತ ಸೆಳೆದುಕೊಂಡು ಹೊಸ ದಾಳ ಪ್ರಯೋಗಿಸುತ್ತಿದೆ.

ನರೇಂದ್ರ ಮೋದಿ ಮತ್ತು ಅಜಿತ್ ದೋವಲ್ರ ಜೋಡಿ ಹಗ್ಗ ನಡಿಗೆ ಮಾಡುತ್ತ ಅಮೇರಿಕಾಕ್ಕೆ ಹತ್ತಿರ ಬಂದಾಗಲೂ ರಷ್ಯಾದಿಂದ ದೂರವಾಗದಂತೆ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಅಮೇರಿಕದ ಜೊತೆಗೆ ಬಾಂಧವ್ಯ ವೃದ್ಧಿಸಿಕೊಂಡರೂ ರಷ್ಯಾ ಚೀನಾಗಳು ಒಂದಾಗದಂತೆ ಸಮತೋಲನ ಕಾಯ್ದುಕೊಂಡು ಬಂದಿದ್ದಾರಲ್ಲ ಅದು ಬಲು ವಿಶೇಷ. ಕೆಲ ಕಾಂಗ್ರೆಸ್ಸಿಗರು ರಷ್ಯಾದೊಂದಿಗಿನ ಭಾರತದ ಸಂಬಂಧ ಹಳಸುತ್ತಿದೆಯೆಂದು ಎದೆ ಭಾರವಾದವರಂತೆ ಮಾತನಾಡುತ್ತಾರೆ. ನೆಹರೂ ಸೋವಿಯತ್ ರಷ್ಯಾದೊಂದಿಗೆ ಬಲವಾದ ಬೆಸುಗೆ ಇಟ್ಟುಕೊಂಡಿದ್ದರಾದ್ದರಿಂದ ಆ ಬಾಂಧವ್ಯವನ್ನು ಯಾವ ಕಾರಣಕ್ಕೂ ಮುರಿಯುವಂತಿಲ್ಲ ಎಂಬುದು ಅವರ ವಾದ.

ಅಮೇರಿಕಾ ಮತ್ತು ರಷ್ಯಾಗಳ ನಡುವಣ ಶೀತಲ ಸಮರದ ನಂತರ ಜಾಗತಿಕವಾಗಿ ಅಮೇರಿಕಾ ಇಂದು ಬಲು ಪ್ರಭಾವಿಯಾಗಿ ಬೆಳೆದು ನಿಂತುಬಿಟ್ಟಿದೆ. ಶಸ್ತ್ರಾಸ್ತ್ರ ಪೂರೈಕೆಯಲ್ಲಂತೂ ನಿಸ್ಸಂಶಯವಾಗಿ ಅಮೇರಿಕಾ ಎಲ್ಲರಿಗಿಂತಲೂ ಮುಂದಿದೆ. ಹೀಗಾಗಿ ನೆಹರೂ ಹಾಕಿದ ಆಲದ ಮರಕ್ಕೆ ಜೋತಾಡುತ್ತ ರಷ್ಯಾದೊಂದಿಗಿನ ಬಾಂಧವ್ಯ ಉಳಿಸಿಕೊಳ್ಳಲು ಭಾರತ ತನ್ನ ಹಿತಾಸಕ್ತಿ ಬಲಿಕೊಡಲು ಸಿದ್ಧವಿರಲಿಲ್ಲ. ಅದಕ್ಕೇ ಅಮೇರಿಕಾದೆಡೆಗೆ ಕೈಚಾಚಿದ್ದು ಭಾರತ. ಹಾಗೆ ನೋಡಿದರೆ ರಷ್ಯಾ ಮತ್ತು ಭಾರತ ಎದುರಿಸುವ ಸಮಸ್ಯೆಗಳು ಒಂದೇ ಬಗೆಯವು. ಎರಡೂ ರಾಷ್ಟ್ರಗಳು ಸ್ಥಳೀಯ ಶಕ್ತಿಗಳಷ್ಟೇ ಅಲ್ಲ ಬದಲಿಗೆ ಜಾಗತಿಕ ನಿರ್ಣಯಕ್ಕೆ ಪುಷ್ಟಿ ಕೊಡಬಲ್ಲ ರಾಷ್ಟ್ರಗಳು. ಮೊದಲಾದರೆ ರಷ್ಯಾ ಜಾಗತಿಕ ಮಹಾಶಕ್ತಿಯಾಗಿ ಗೌರವಿಸಲ್ಪಡುತ್ತಿತ್ತು. ಆದರೆ ಅಮೇರಿಕಾದ ಷಡ್ಯಂತ್ರದಿಂದಾಗಿ ಚೂರು-ಚೂರಾದ ಮೇಲೆ ಅದೀಗ ಮಹಾಶಕ್ತಿಯೂ ಅಲ್ಲದ, ಸ್ಥಳೀಯ ಶಕ್ತಿಯಾಗಿಯಷ್ಟೇ ಉಳಿಯದ ರಾಷ್ಟ್ರವಾಯ್ತು. ಥೇಟು ಭಾರತದಂತೆ. ನಾವು ಜಾಗತಿಕ ನಿರ್ಣಯಗಳನ್ನು ಪ್ರಭಾವಿಸಬಲ್ಲೆವು ಹಾಗಂತ ಸದ್ಯಕ್ಕಂತೂ ಸುಪರ್ ಪವರ್ ರಾಷ್ಟ್ರವಲ್ಲ. ಏಷ್ಯಾದಲ್ಲಿ ಬಲಾಢ್ಯವಾಗಿ ಬೆಳೆದಿರುವುದರಿಂದ ಸ್ಥಳೀಯವಾಗಿ ದೈತ್ಯರು ನಾವೆಂಬುದನ್ನು ಯಾರೂ ಅಲ್ಲಗಳೆಯಲಾರರು. ನಮಗೆ ಚೀನಾ ಪಾಕೀಸ್ತಾನದ ಮೂಲಕ ಹೇಗೆ ಸದಾ ಕಿರಿಕಿರಿ ಮಾಡುತ್ತಿರುತ್ತದೆಯೋ ಹಾಗೆಯೇ ರಷ್ಯಾಕ್ಕೆ ಉಜ್ಬೇಕಿಸ್ತಾನದ ಸಮಸ್ಯೆ. ಹಿಂದೆ ನಿಂತು ಕೈಯ್ಯಾಡಿಸುತ್ತಿರೋದು ಅಮೇರಿಕಾ.

ಸೈದ್ಧಾಂತಿಕವಾಗಿ ನಮಗೂ ಅಮೇರಿಕಾಕ್ಕೂ ಸಾಮ್ಯಗಳೇನೂ ಇಲ್ಲ ಆದರೆ ಹೇಳಿಕೊಳ್ಳುವಂತಹ ವಿರೋಧವೂ ನಮ್ಮ ನಡುವಿಲ್ಲ. ಚೀನಾ ಮತ್ತು ರಷ್ಯಾಗಳು ಹಾಗಲ್ಲ. ಕಮ್ಯೂನಿಸಂನ ಹಿನ್ನೆಲೆಯಲ್ಲಿ ಅವೆರಡೂ ಒಂದೇ ಬಳ್ಳಿಯ ಹೂಗಳು. ಆದರೆ ಚೀನಾದ ವಿಸ್ತರಣಾವಾದೀ ಧೋರಣೆ ರಷ್ಯಾವನ್ನೂ ನಾಚಿಸುವಷ್ಟು ಜೋರಾಗಿದೆ. ರಷ್ಯಾಕ್ಕಿಂತಲೂ ಚೀನಾ ಬಲಶಾಲೀ ರಾಷ್ಟ್ರವೆಂದು ಜಗತ್ತನ್ನು ನಂಬಿಸುವಲ್ಲಿ ಯಶಸ್ವಿಯಾಗಿಬಿಟ್ಟಿದೆ. ಇತ್ತ ತನ್ನ ಸುತ್ತಲೂ ಇರುವ ರಾಷ್ಟ್ರಗಳನ್ನು ತೆಕ್ಕೆಗೆ ಹಾಕಿಕೊಂಡು ತನಗೆ ಉರುಳಾಗುತ್ತಿರುವ ಚೀನಾವನ್ನು ಸೈದ್ಧಾಂತಿಕವಾಗಿ ವಿರೋಧಿಸಲಾಗದ, ಶಕ್ತಿಯಿಂದಲೂ ಎದುರಿಸಲಾಗದ ರಷ್ಯಾದ ಗೆಳೆತನ ಇಟ್ಟುಕೊಂಡು ಭಾರತಕ್ಕೆ ಆಗಬೇಕಾಗಿರೋದಾದರೂ ಏನು? ಅದಕ್ಕೆ ಭಾರತ ಅಮೇರಿಕಾದೆಡೆ ವಾಲಿದ್ದು ಯುದ್ಧನೀತಿಯ ದೃಷ್ಟಿಯಿಂದ ಸಮರ್ಪಕವಾಗಿಯೇ ಇದೆ. ಇದನ್ನು ಗುರುತಿಸಿಯೇ ಚೀನಿ ಪತ್ರಿಕೆ ವರದಿ ಮಾಡಿದ್ದು, ‘ಭಾರತ ಹಿಂದಿನಂತಿಲ್ಲ. ತನಗೆ ಅನುಕೂಲವಾಗುವುದಾದರೆ ಎಂತಹ ನಿರ್ಣಯಗಳನ್ನು ತೆಗೆದುಕೊಳ್ಳಲೂ ಅದು ಹಿಂಜರಿಯಲಾರದು’

ಹಾಗಿದ್ದರೆ ಭಾರತಕ್ಕಿದ್ದ ಮುಂದಿನ ನಡೆಯಾದರೂ ಏನು? ಚೀನಾದ ಸಾರ್ವಭೌಮತೆಯನ್ನು ಕಂಠಮಟ್ಟ ವಿರೋಧಿಸುವ ಅಮೇರಿಕಾದ ಪಾಳಯಕ್ಕೆ ಸೇರಿ ರಷ್ಯಾ ವಿರೋಧಿಯಾಗಿ ಜಾಗತಿಕವಾಗಿ ಗುರುತಿಸಿಕೊಳ್ಳಬೇಕೋ? ಅಥವಾ ಚೀನಾಕ್ಕೆ ತಲೆಬಾಗಿದರೂ ಪರವಾಗಿಲ್ಲ, ರಷ್ಯದೊಂದಿಗೇ ಇದ್ದು ಎಪ್ಪತ್ತು ವರ್ಷಗಳಷ್ಟು ಹಳೆಯ ಬಾಂಧವ್ಯ ತುಕ್ಕು ಹಿಡಿಯದಂತೆ ಕಾಪಾಡಿಕೊಂಡು ಬರಬೇಕೋ? ಆಗಲೇ ಬಾರತದ ರಾಜನೀತಿ ಚುರುಕಾಗಿದ್ದು. ಭಾರತ ಅಮೇರಿಕಾದ ಅನುಯಾಯಿ ರಾಷ್ಟ್ರವಾಗಿ ಬದುಕುವುದು, ರಷ್ಯಾ ಚೀನಾದ ಅನುವರ್ತಿಯಾಗುವುದು ಎಂದಿಗೂ ಸಾಧ್ಯವಿಲ್ಲದ್ದು. ಅದಕ್ಕಿರುವ ಮಾರ್ಗ ಒಂದೇ. ಅಮೇರಿಕಾದ ಗೆಳೆತನ ಬಳಸಿ ಚೀನಾದ ಬಾಲ ತುಂಡರಿಸಬೇಕು. ಅತ್ತ ರಷ್ಯಾದ ಸಹಾಯದಿಂದ ಮೇಕ್ ಇನ್ ಇಂಡಿಯಾಕ್ಕೆ ಬಲ ತುಂಬಿ ಭಾರತ-ರಷ್ಯಾಗಳು ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಮಹತ್ವದ ಶಕ್ತಿಯಾಗಿ ನಿಲ್ಲಬೇಕು. ಬ್ರಹ್ಮೋಸ್ ಕ್ಷಿಪಣಿಗಳ ಅಭಿವೃದ್ಧಿ ಮತ್ತು ಮಾರಾಟದಲ್ಲಿ ದೊರೆತ ಯಶಸ್ಸಿನ ಅನುಭವವಂತೂ ಅವರಿಗೆ ಇದ್ದೇ ಇತ್ತು. ಮೋದಿ-ದೋವಲ್ ಚುರುಕಾದರು. ಇದು ರಾಜತಾಂತ್ರಿಕವಾಗಿ ಮೋದಿಯ ಮಾಸ್ಟರ್ ಸ್ಟ್ರೋಕ್.

ಮೊದಲೆಲ್ಲ ನಮ್ಮ ಕೊಳ್ಳುವಿಕೆಯ ಸಾಮರ್ಥ್ಯವೂ ಅದೆಷ್ಟು ಕಳಪೆಯದ್ದಾಗಿತ್ತೆಂದರೆ ಶಸ್ತ್ರ ಮಾರುಕಟ್ಟೆಯಲ್ಲಿ ಚೌಕಶಿ ಮಾಡಬಹುದಾದ ತಾಕತ್ತೂ ನಮಗಿರಲಿಲ್ಲ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಬಲಗೊಂಡ ಬಾರತದ ಆರ್ಥಿಕತೆ ನಮ್ಮ ಖರೀದಿ ಸಾಮಥ್ರ್ಯವನ್ನು ವೃದ್ಧಿಸಿತು. ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಶಸ್ತ್ರ ಖರೀದಿಯ ಅನೇಕ ಒಪ್ಪಂದಗಳನ್ನು ಮಾಡಿಕೊಂಡರು. ಅಮೇರಿಕ, ಜರ್ಮನಿ, ಇಸ್ರೇಲ್ಗಳೊಂದಿಗೆ ನಮ್ಮ ರಕ್ಷಣಾ ಬಾಂಧವ್ಯ ಹಿಂದೆಂದಿಗಿಂತಲೂ ಜೋರಾಯಿತು. ಹಾಗಂತ ರಷ್ಯಾದೊಂದಿಗೆ ಹಾಳುಮಾಡಿಕೊಳ್ಳಲಿಲ್ಲ. ಯಾವ ಶಸ್ತ್ರ ಕ್ಷೇತ್ರದಲ್ಲಿ ರಷ್ಯಾ ಅಮೇರಿಕಕ್ಕೆ ಸೆಡ್ಡು ಹೊಡೆಯಲಾರದೋ ಅಂತಹ ಶಸ್ತ್ರ ಒಪ್ಫಂದಗಳನ್ನು ಮಾತ್ರ ಅಮೇರಿಕದೊಂದಿಗೆೆ ಮಾಡಿಕೊಳ್ಳಲಾಯಿತು. ಅಮೇರಿಕದಿಂದ ನಾವು ಮಧ್ಯಮ ಮತ್ತು ಭಾರೀ ಯುದ್ಧ ವಿಮಾನಗಳನ್ನು, ಆ್ಯಂಟಿ ಸಬ್ಮೆರೀನ್ ಸಿಸ್ಟಮ್ಗಳನ್ನು ಮತ್ತು ದಾಳಿ ಕ್ಷಮತೆಯುಳ್ಳ ಹೆಲಿಕಾಪ್ಟರುಗಳನ್ನು ತರುವ ಒಪ್ಪಂದಕ್ಕೆ ಸಹಿ ಹಾಕಿದೆವು; ಅತ್ತ ರಷ್ಯಾದಿಂದ 42 ಸುಖೊಯ್ಗಳಿಗೆ ಮತ್ತು ವಾಯು ಸಂರಕ್ಷಣಾ ವ್ಯವಸ್ಥೆಗೆ ಒಪ್ಪಂದ ಮಾಡಿಕೊಳ್ಳಲಾಯಿತು.

ಮಾಸ್ಕೋದಲ್ಲಿ ಭಾರತ-ರಷ್ಯಾ ಜೊತೆಗೂಡಿದಾಗ ಒಟ್ಟೂ 16 ಒಪ್ಪಂದಗಳಿಗೆ ಸಹಿ ಹಾಕಲಾಯ್ತು. ಎಸ್-400ನ ಐದು ಮಿಸೈಲ್ ಸಿಸ್ಟಮ್ಗಳ ಖರೀದಿ, ಜಂಟಿಯಾಗಿ ಕಾಮೋವ್ ಹೆಲಿಕಾಪ್ಟರುಗಳು ಮತ್ತು ಒಂದಷ್ಟು ನಿರ್ದೇಶಿತ ಮಿಸೈಲುಗಳ ನಿರ್ಮಾಣವೂ ಈ ಒಪ್ಪಂದದಲ್ಲಿ ಸೇರಿತ್ತು. ಟಿ-90 ಟ್ಯಾಂಕುಗಳ ನಿರ್ಮಾಣ ಮತ್ತು ಅದನ್ನು ಭಾರತೀಕರಣಗೊಳಿಸುವ ಪ್ರಯತ್ನಕ್ಕೂ ಸಾಕಷ್ಟು ಶಕ್ತಿ ಬಂತು. ಎರಡೂ ರಾಷ್ಟ್ರಗಳ ಸಂಬಂಧಕ್ಕೆ 70 ತುಂಬಿದ್ದನ್ನು ವಿಶೇಷವಾಗಿ ಆಚರಿಸಬೇಕೆಂದು ಮೋದಿ ಕರೆ ಕೊಟ್ಟರು. ಹಾಗಂತ ರಷ್ಯಾವನ್ನು ಓಲೈಸುವ ಮಾತೇ ಇರಲಿಲ್ಲ. ವೃದ್ಧಿಸುತ್ತಿರುವ ಭಾರತ-ಅಮೇರಿಕಾ ಬಾಂಧವ್ಯದ ಕುರಿತಂತೆ ರಷ್ಯಾ ಕ್ಯಾತೆ ತೆಗೆಯುವ ಮುನ್ನವೇ ರಷ್ಯಾದ ಭಾರತೀಯ ರಾಯಭಾರಿ ಪಂಕಜ್ ಸರಣ್ ರಷ್ಯಾ ಪಾಕೀಸ್ತಾನಕ್ಕೆ ನೀಡುತ್ತಿರುವ ಸಹಕಾರದ ಕುರಿತು ತಗಾದೆ ತೆಗೆದು ಭವಿಷ್ಯದಲ್ಲಿ ಇದು ಸಂಬಂಧದಲ್ಲಿ ಬಿರುಕು ತರಬಹುದೆಂದು ಎಚ್ಚರಿಸಿದರು. ಈಗ ಎಚ್ಚರಿಕೆಯಿಂದ ಹೆಜ್ಜೆ ಇಡುವ ಸರದಿ ರಷ್ಯಾದ್ದೇ ಆಗಿತ್ತು. ಬೆಳವಣಿಗೆಯ ದಿಕ್ಕನಲ್ಲಿ ನಾಗಾಲೋಟದೊಂದಿಗೆ ಓಡುತ್ತಿರುವ ಭಾರತವನ್ನು ಬಿಟ್ಟು ದಿವಾಳಿಯೆದ್ದುಹೋಗಿರುವ ಪಾಕೀಸ್ತಾನವನ್ನು ಅಪ್ಪಿಕೊಳ್ಳುವುದಕ್ಕೆ ಅದಕ್ಕೇನು ತಲೆ ಕೆಟ್ಟಿರಲಿಲ್ಲ. ಮೋದಿ-ದೋವಲ್ ಜೋಡಿ ಗೆದ್ದಿತ್ತು. ರಷ್ಯಾ ನಮ್ಮೊಂದಿಗೆ ಚೆನ್ನಾಗಿರುತ್ತಲೇ, ಪಾಕೀಸ್ತಾನದೊಂದಿಗೂ ಸದ್ಬಾಂಧವ್ಯವನ್ನು ಹೊಂದಬೇಕೆಂಬ ಬಯಕೆಯಿಟ್ಟುಕೊಂಡು ಇಷ್ಟೂ ದಿನ ನಡೆದುಕೊಂಡಿತ್ತು. ಇನ್ನು ಅದು ನಡೆಯಲಾರದೆಂದು ಅದಕ್ಕೆ ಮನದಟ್ಟು ಮಾಡಿಕೊಡುವಲ್ಲಿ ಭಾರತ ಯಶಸ್ವಿಯಾಗಿತ್ತು. ರಕ್ಷಣೆಯಷ್ಟೇ ಅಲ್ಲದೇ ಮೂಲ ಸೌಕರ್ಯ ಅಭಿವೃದ್ಧಿಯೂ ಸೇರಿದಂತೆ ಇತರ ಅನೇಕ ಕ್ಷೇತ್ರಗಳಲ್ಲಿ ಸಹಕಾರಕ್ಕೆ ಆಹ್ವಾನ ನೀಡಿತ್ತು.

ಕಳೆದ ಏಪ್ರಿಲ್ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೇರಿಕಾದ ರಕ್ಷಣಾ ಕಾರ್ಯದರ್ಶಿ ಅಸ್ಟೋನ್ ಕಾರ್ಟರ್ ಕೂಡ ಅನೇಕ ಒಪ್ಪಂದಗಳಿಗೆ ಸಹಿ ಹಾಕಿದ್ದರು. ಮೇಕ್ ಇನ್ ಇಂಡಿಯಾದಡಿಯಲ್ಲಿ ಡಿಜಿಟಲ್ ಡಿಸ್ಪ್ಲೇ ಉಳ್ಳ ಹೆಲ್ಮೆಟ್ಗಳ ಮತ್ತು ಬಯೋಲಾಜಿಕಲ್ ಟ್ಯಾಕ್ಟಿಕಲ್ ಡಿಟೆಕ್ಷನ್ ವ್ಯವಸ್ಥೆಗಳ ಅಭಿವೃದ್ಧಿಗೆ ಆಸಕ್ತಿ ತೋರಿದರು. ಹಿಂದು ಪತ್ರಿಕೆ ಮಾಡಿದ ವರದಿಯ ಪ್ರಕಾರ ಅಮೇರಿಕಾದ ರಕ್ಷಣಾ ಇಲಾಖೆ ಭಾರತದ ಮೇಕ್ ಇನ್ ಇಂಡಿಯಾಕ್ಕೆ ಪೂರಕವಾಗಿ ನಿಲ್ಲಲೆಂದೇ ಮೊತ್ತ ಮೊದಲ ಬಾರಿಗೆ ‘ಇಂಡಿಯಾ ರ್ಯಾಪಿಡ್ ರಿಯಾಕ್ಷನ್ ಸೆಲ್’ನ್ನು ಸ್ಥಾಪಿಸಿತು. ಹೀಗೆ ರಾಷ್ಟ್ರವೊಂದನ್ನು ಕೇಂದ್ರವಾಗಿರಿಸಿಕೊಂಡು ಅಮೇರಿಕಾ ರೂಪಿಸಿದ ಮೊದಲ ವಿಭಾಗವಿದು. ಅಧ್ಯಕ್ಷೀಯ ಚುನಾವಣೆಯ ನಂತರ ಕಂಡುಬಂದ ಮಹತ್ವದ ಬದಲಾವಣೆ ಇದೊಂದೇ ಆಗಿರಲಿಲ್ಲ. ಅಮೇರಿಕಾದ ಸೆನೇಟ್ ‘ಅಮೇರಿಕಾ-ಭಾರತ ರಕ್ಷಣಾ ತಂತ್ರಜ್ಞಾನ ಮತ್ತು ಪಾಲುದಾರಿಕೆ ಕಾಯಿದೆ’ಯನ್ನು ಜಾರಿ ಮಾಡಿ ನ್ಯಾಟೋ ಮಿತ್ರರಿಗಿದ್ದಷ್ಟೇ ಸೌಲಭ್ಯ, ಸ್ಥಾನ-ಮಾನಗಳನ್ನು ಭಾರತಕ್ಕೆ ಕೊಟ್ಟು ಮಹತ್ವದ ರಕ್ಷಣಾ ಪಾಲುದಾರ ಎಂದು ಪರಿಗಣಿಸಿತು. ಎಲ್ಲಕ್ಕೂ ಮಿಗಿಲಾಗಿ ನೌಕಾ ವಲಯದಲ್ಲಿ ಅಮೇರಿಕಾ ಭಾರತದೊಂದಿಗೆ ಮಹತ್ವದ ತಂತ್ರಜ್ಞಾನವನ್ನು ಹಂಚಿಕೊಂಡಿತಷ್ಟೇ ಅಲ್ಲ, ಸಬ್ಮೆರೀನ್ಗಳ ಸುರಕ್ಷತೆ ಮತ್ತು ಸಬ್ಮೆರೀನ್ ಕದನಕ್ಕೆ ಸಂಬಂಧಪಟ್ಟಂತೆ ನೌಕೆಯಿಂದ ನೌಕೆಯ ಚರ್ಚೆಗೆ ಅವಕಾಶವನ್ನೂ ಕಲ್ಪಿಸಿತು. ವಾರ್ಷಿಕ ನೌಕಾ ಕವಾಯತಿಗೆ ಜಪಾನ್ನ್ನೂ ಸೇರಿಸುವ ಮಾತುಕತೆಗೆ ಅಂಕಿತ ಬಿತ್ತು. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನೀ ಏಕಸ್ವಾಮ್ಯವನ್ನು ಮುರಿಯುವ ಅಮೇರಿಕಾದ ಬಯಕೆಗೆ ಈಗ ಬೆಂಬಲವಾಗಿ ಭಾರತ ನಿಂತಿದ್ದುದು ಅದಕ್ಕೆ ಆನೆ ಬಲ ತಂದಿತ್ತು.

ಒಂದೆಡೆ ರಷ್ಯಾ, ಮತ್ತೊಂದೆಡೆ ಅಮೇರಿಕ ಇವೆರಡರೊಂದಿಗೂ ಸಂಬಂಧವಿರಿಸಿಕೊಂಡು ತಾನೇನನ್ನೂ ಕಳೆದುಕೊಳ್ಳದೇ ಭಾರತ ಸಾಕಷ್ಟು ಪಡೆದುಕೊಂಡಿತ್ತು. ಅಕಸ್ಮಾತ್ ಅಮೇರಿಕವನ್ನು ಮೆಚ್ಚಿಸುವ ಭರದಲ್ಲಿ ಭಾರತವೇನಾದರೂ ಅಮೇರಿಕಾ ಮುನ್ನಡೆಸುವ ಯುದ್ಧ ತಂಡಗಳ ಸದಸ್ಯವಾಗಿಬಿಟ್ಟಿದ್ದರೆ ನಮ್ಮ ಸಾರ್ವಭೌಮತೆಗೆ ಧಕ್ಕೆ ಬಂದಿರುತ್ತಿತ್ತು. ನಾವು ಶಕ್ತಿಶಾಲಿಯಾಗಿರುತ್ತಿದ್ದೆವು ನಿಜ ಆದರೆ ದೀರ್ಘ ಕಾಲದ ಮಿತ್ರ ರಷ್ಯಾವನ್ನು ಶಾಶ್ವತವಾಗಿ ಕಳೆದುಕೊಂಡಿರುತ್ತಿದ್ದೆವು. ಈ ಕೋಪಕ್ಕೆ ರಷ್ಯ ಮತ್ತು ಚೀನಾಗಳೆರಡೂ ಪಾಕೀಸ್ತಾನಕ್ಕೆ ಆತುಕೊಂಡಿಬಿಟ್ಟಿದ್ದರೆ ನಾವು ಸಹಿಸಲಾಗದ ಗಾಯವಾಗಿರುತ್ತಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮನ್ನು ಸದಾ ಬೆಂಬಲಿಸುವ ನಂಬಲು ಯೋಗ್ಯವಾದ ರಾಷ್ಟ್ರದಿಂದ ದೂರವಾಗಿರುತ್ತಿದ್ದೆವು. ನಾವು ಎಲ್ಲವನ್ನೂ ಗೆದ್ದೆವು. ಹಾಗಂತ ಬೀಗಲಿಲ್ಲ. ರಕ್ಷಣಾ ಸಚಿವ ಪರಿಕ್ಕರ್ ಚೀನಾಕ್ಕೂ ಭೇಟಿ ಕೊಟ್ಟು ತಮ್ಮ ಹಳೆಯ ದೀರ್ಘ ಕಾಲದ ಸ್ನೇಹದಲ್ಲಿ ಯಾವ ಬದಲಾವಣೆಯೂ ಇಲ್ಲವೆಂದು ಪುನರುಚ್ಚರಿಸಿದರು.

ಚೀನಾ ಗಮನಿಸದೇ ಕುಳಿತಿರುವಷ್ಟು ಮೂರ್ಖ ರಾಷ್ಟ್ರವಾಗಿರಲಿಲ್ಲ. ಭಾರತದ ಎನ್.ಎಸ್.ಜಿಗೆ ಸೇರುವ ಬಯಕೆಗೆ ತಣ್ಣೀರೆರೆಚಲೆಂದೇ ಸದಾ ಪ್ರಯತ್ನ ಮಾಡುತ್ತಲಿತ್ತು. ಚೀನಾ ಪಾಕ್ ಎಕಾನಾಮಿಕ್ ಕಾರಿಡಾರ್ ನಿರ್ಮಾಣದ ಮೂಲಕ ಪಶ್ಚಿಮ ದಿಕ್ಕಿನಲ್ಲೂ ಭಾರತದ ಕೊರಳಿಗೆ ಕೈ ಹಾಕುವ ಮತ್ತು ಪಾಕೀಸ್ತಾನದ ಮೂಲಕ ಭಾರತವನ್ನು ನಿಯಂತ್ರಣದಲ್ಲಿರಿಸುವ ತನ್ನ ಪ್ರಯತ್ನಕ್ಕೆ ವೇಗ ಕೊಟ್ಟಿತು. ಇದನ್ನು ತಡೆಯಲು ಮೋದಿ-ದೋವಲ್ ಜೋಡಿಗೆ ಈಗ ಯಾವ ಹೆದರಿಕೆಯೂ ಇರಲಿಲ್ಲ. ಒಂದೆಡೆ ಅಮೇರಿಕಾ ಮತ್ತೊಂದೆಡೆ ರಷ್ಯಾ ಬೆಂಬಲಿಕ್ಕಿದ್ದವು. ಅತ್ತ ಜಪಾನ್ ಚೀನಾದ ನೆರೆಯಾಗಿಯೂ ನಮ್ಮ ಜೊತೆಗೆ ನಿಂತಿತ್ತು. ಅವಕಾಶವನ್ನು ನೋಡಿ ಭಾರತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳಿಗೆ ಪೂರ್ಣ ಬೆಂಬಲ ನೀಡಿತು. ಚೀನಾದ ಕಾರಿಡಾರ್ ಯೋಜನೆಗೆ ಅಲ್ಲಿ ಪ್ರತಿರೋಧ ವ್ಯಕ್ತವಾಗುತ್ತಿದ್ದಂತೆ ತನ್ನೆಲ್ಲ ಹೂಡಿಕೆಯನ್ನು ಕಳೆದುಕೊಳ್ಳುವ ಭಯದಿಂದ ತತ್ತರಿಸಿದ ಚೀನಾ ಹಿಂದಿನ ಎಲ್ಲ ಬಗೆಯ ತಂತ್ರಗಳನ್ನು ಮತ್ತೆ ದಾಳವಾಗಿಸಿತು. ಪಾಕೀಸ್ತಾನವನ್ನು ಛೂ ಬಿಟ್ಟಿತು. ನಕ್ಸಲರ ದಾಳಿ ಮಾಡಿಸಿತು. ಇಲ್ಲಿನ ಬುದ್ಧಿಜೀವಿಗಳ ಮೂಲಕ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪುಗೊಳ್ಳುವಂತೆ ಪ್ರಯತ್ನ ಮಾಡಿತು. ಯಾವುದೂ ಯಶಸ್ಸು ಕಾಣಲಿಲ್ಲ. ಕೊನೆಗೆ ತಾನೇ ಅಖಾಡಾಕ್ಕಿಳಿದು ಮೋದಿ ಅಮೇರಿಕಾ-ಇಸ್ರೇಲ್ ಪ್ರವಾಸದಲ್ಲಿರುವಾಗ ಎದೆಗುಂದುವಂತೆ ಮಾಡಲು ಡೋಕ್ಲಾಂನ ವಿಷಯಕ್ಕೆ ಕ್ಯಾತೆ ತೆಗೆಯಿತು. ಇನ್ನೇನು ಯುದ್ಧ ಮಾಡಿಯೇ ಬಿಡುವ ವಾತಾವರಣ ಸೃಷ್ಟಿಸಿತು. ಆ ವೇಳೆಗೆ ಸರಿಯಾಗಿ ದಕ್ಷಿಣ ಚೀನಾ ಸಮುದ್ರಕ್ಕೆ ಲಗ್ಗೆಯಿಟ್ಟ ಅಮೇರಿಕಾ-ಜಪಾನ್ ಹಡಗುಗಳು ಚೀನಾವನ್ನು ನಡುಗಿಸಲು ಸಾಕಾಯ್ತು. ಈ ಹೊತ್ತಲ್ಲಿಯೇ ದಕ್ಷಿಣ ಚೀನಾ ಸಮುದ್ರದಲ್ಲಿ ತೈಲ ಬಾವಿ ಕೊರೆಯುವ ಭಾರತದ ಒಪ್ಪಂದವನ್ನು ನವೀಕರಿಸಿ ತೈವಾನ್ ಪತ್ರ ಕಳಿಸಿ ಚೀನಾದ ವಿರುದ್ಧ ಗುಟುರು ಹಾಕಿ ನಿಂತಿತು. ಯಾವ ದಾಳವನ್ನು ಪ್ರಯೋಗಿಸಿ ಭಾರತವನ್ನು ಸಿಕ್ಕಿಹಾಕಿಸಲು ಚೀನಾ ಯತ್ನಿಸಿತ್ತೋ ಈಗ ಅದಕ್ಕಿಂತಲೂ ಕೆಟ್ಟ ವ್ಯೂಹದಲ್ಲಿ ತಾನೇ ಸಿಲುಕಿಕೊಂಡು ತೆವಳುತ್ತಿದೆ. ಮೋದಿ ಈವರೆಗಿನ ರಾಜತಾಂತ್ರಿಕ ಯುದ್ಧದಲ್ಲಿ ಗೆದ್ದಿದ್ದಾರೆ, ಅನುಮಾನವೇ ಇಲ್ಲ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search