ಛತ್ತೀಸ್ ಗಡದ ನಕ್ಸಲ್ ಪೀಡಿತ ಪ್ರದೇಶದ ಮಕ್ಕಳಿಗೆ ಉಚಿತ ಪಾಠ ಮಾಡುವ ಸಿಆರ್ ಪಿಎಫ್ ಯೋಧರಿಗೆ ಸಲಾಂ!
ರಾಯಪುರ: ಛತ್ತೀಸ್ ಗಡ ಎಂದರೇನೆ ಹಾಗೆ. ಅದು ನಕ್ಸಲ್ ಪೀಡಿತ ಪ್ರದೇಶ. ಹಲವು ಪ್ರದೇಶಗಳಂತೂ ನಕ್ಸಲರ ಹಾವಳಿಯಿಂದ ಅಭಿವೃದ್ಧಿ ಮೆರೆತಿವೆ. ಜನರಿಗೆ ಊಟ-ತಿಂಡಿ, ಶಾಲೆ, ವಸತಿ… ಹೂಂ ಹೂಂ. ಯಾವ ಸೌಲಭ್ಯವೂ ಇಲ್ಲ. ಜತೆಗೆ ನೆಮ್ಮದಿಯಾದರೂ ಇದೆಯಾ ಅದೂ ಇಲ್ಲ.
ಏಕೆಂದರೆ, ಕೆಂಪು ಉಗ್ರರು ಅಭಿವೃದ್ಧಿ ಕುಂಠಿತಗೊಳಿಸುವ ಜತೆಗೆ ಜನರ ಬಡತನವನ್ನೇ ಬಂಡವಾಳವನ್ನಾಗಿಸಿಕೊಂಡು ಅವರನ್ನೂ ಕೆಂಪು ಉಗ್ರರನ್ನಾಗಿ ಮಾಡುತ್ತಾರೆ. ತರಬೇತಿ ನೀಡಿ, ಮನವೊಲಿಸಿ ಅವರನ್ನು ನಕ್ಸಲರನ್ನಾಗಿ ಮಾಡುತ್ತಾರೆ.
ಆದರೆ, ಇದನ್ನು ಮನಗಂಡ ನಮ್ಮ ಹೆಮ್ಮೆಯ ಕೇಂದ್ರೀಯ ಸಶಸ್ತ್ರ ಮೀಸಲು ಪಡೆಯ ಯೋಧರು ನಕ್ಸಲ್ ಪೀಡಿತ ಗ್ರಾಮವೊಂದರಲ್ಲಿ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು, ದಿನಾಲೂ ತರಗತಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆ ಮೂಲಕ ಜನರನ್ನು ಕಾಯುವ ಯೋಧರು, ಜನರ ಏಳಿಗೆಗೂ ಕಾರಣವಾಗುತ್ತಿದ್ದಾರೆ.
ಹೌದು, ಬಿಜಾಪುರದಿಂದ 8 ಕಿಲೋಮೀಟರ್ ದೂರದಲ್ಲಿರುವ, ನಕ್ಸಲರ ಅಟ್ಟಹಾಸಕ್ಕೆ ಸುದ್ದಿಯಾಗುವ ಚೆರ್ಪಾಲ್ ಎಂಬಲ್ಲಿ 85ನೇ ಬೆಟಾಲಿಯನ್ ನ ಯೋಧರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಸೇನೆಯ ನೆಲೆಯೇ ಪಾಠಶಾಲೆಯಾಗಿದ್ದು, ಪ್ರತಿದಿನ ಸುಮಾರು 40 ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದಾರೆ.
ಬರೀ ಪಾಠವೊಂದನ್ನೇ ಮಾಡುತ್ತಿಲ್ಲ. ನಾವು ಸಮಾಜಮುಖಿಗಳಾಗಿ ಕೆಲಸ ಮಾಡುತ್ತಿದ್ದೇವೆ. ಈ ವಿದ್ಯಾರ್ಥಿಗಳು ನೂರಕ್ಕೆ ನೂರರಷ್ಟು ಜ್ಞಾನ ಸಂಪಾದಿಸುತ್ತಾರೆ ಎಂಬ ವಿಶ್ವಾಸವಿದೆ. ಇವರೆಗೆ ಪ್ರೊಜೆಕ್ಟರ್ ಮೂಲಕ ಸ್ಫೂರ್ತಿ ತುಂಬುವ ಸಿನಿಮಾ ಸಹ ತೋರಿಸಿ ಪಾಠದತ್ತ ಸೆಳೆಯುತ್ತಿದ್ದೇವೆ ಎಂದು ಸಹಾಯಕ ಕಮಾಂಡಂಟ್ ಅವಿನಾಶ್ ತಿಳಿಸಿದ್ದಾರೆ.
ನಾನು ಕಠಿಣ ಪರಿಶ್ರಮದಿಂದ ಓದಿ ಮುಂದೊಂದು ದಿನ ಸಿಆರ್ ಪಿಎಫ್ ಯೋಧರ ಹಾಗೆ ಶಿಕ್ಷಕನಾಗುತ್ತೇನೆ. ನಮ್ಮ ರೀತಿಯೇ ಪಕ್ಕದ ಗ್ರಾಮಗಳ ವಿದ್ಯಾರ್ಥಿಗಳೂ ಶಾಲೆಗೆ ಹೋಗಬೇಕು ಎಂಬುದೇ ನನ್ನಾಸೆ ಎನ್ನುತ್ತಾನೆ 14 ವರ್ಷದ ಬಾಲಕನೊಬ್ಬ.
ಒಟ್ಟಿನಲ್ಲಿ ದೇಶ ಕಾಯುವ ಯೋಧರು ಸಮಾಜವನ್ನೂ ಕಾಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಯೋಧರ ಶ್ರಮ ಫಲ ನೀಡಲಿ, ಮಕ್ಕಳು ಶಿಕ್ಷಣವಂತರಾಗಿ ನಕ್ಸಲಿಸಂ ತೊಲಗಿಸಲಿ. ಎಂಬುದೇ ನಮ್ಮ ಆಶಯ. ಯೋಧರ ಶ್ರಮಕ್ಕೊಂದು ಸಲಾಂ ಇರಲಿ.
Leave A Reply