ವಶ ಮಾಡುವುದು ಬಿಡಿ, ಮಠ ಮುಟ್ಟಿ ನೋಡಿ ಸಿದ್ದು!!
ಮುಖ್ಯಮಂತ್ರಿ ಸಿದ್ಧರಾಮಯ್ಯ ತನ್ನ ಸರಕಾರದ ಶವಪೆಟ್ಟಿಗೆಯ ಕೊನೆಯ ಮೊಳೆಯನ್ನು ಹೊಡೆಯಲು ಕೈಯಲ್ಲಿ ಸುತ್ತಿಗೆ ಹಿಡಿದು ನಿಂತಿದ್ದಾರೆ. ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿರುವ ಒಂದು ನೋಟಿಸೇ ಅದಕ್ಕೆ ಸಾಕ್ಷಿ. ಅದರಲ್ಲಿ ಕೇಳಿರುವ ಎರಡು ಪ್ರಶ್ನೆಗಳೇ ಸಾಕು. ಸಿದ್ಧರಾಮಯ್ಯ ಕಾಂಗ್ರೆಸ್ಸನ್ನು ಹೂಳಲು ತಾವೇ ಹೊಂಡ ತೆಗೆಯುತ್ತಿದ್ದಾರೆ ಎನ್ನುವುದು ಸ್ಪಷ್ಟ. ಆ ನೋಟಿಸ್ ಇಲ್ಲಿ ಯಥಾವತ್ತಾಗಿ ಪೋಸ್ಟ್ ಮಾಡಿದ್ದೇನೆ. ಅದರಲ್ಲಿ ಬರೆದ ಮೊದಲ ಎರಡು ಪ್ರಶ್ನೆಗಳೇ ಹೇಳುತ್ತವೆ ಸಿದ್ದು ಯಾವ ರೀತಿಯಲ್ಲಿ ತನ್ನ ಸರಕಾರವನ್ನೇ ಮುಗಿಸಲು ಪಂಚೆ ಎತ್ತಿಕಟ್ಟಿದ್ದಾರೆ ಎನ್ನುವುದನ್ನು.
ಮೊದಲ ಪ್ರಶ್ನೆ: ಧಾರ್ಮಿಕ ದತ್ತಿ ಕಾಯ್ದೆಯ ವ್ಯಾಪ್ತಿಗೆ ಮಠಗಳು, ಮಠಗಳಿಗೆ ಸೇರಿದ ದೇವಸ್ಥಾನಗಳು ಹಾಗೂ ಮಠಗಳ ನಿಯಂತ್ರಣಕ್ಕೆ ಒಳಪಟ್ಟ ಧಾರ್ಮಿಕ ಸಂಸ್ಥೆಗಳು ಮತ್ತು ಜೈನ್, ಬೌದ್ಧ, ಸಿಖ್ ಜನಾಂಗಗಳಿಗೆ ಒಳಪಟ್ಟ ಧಾರ್ಮಿಕ ಸಂಸ್ಥೆಗಳನ್ನು ಒಳಪಡಿಸಬೇಕೆ? ಬೇಡವೇ? ಒಳಪಡಿಸುವುದಿದ್ದಲ್ಲಿ ಯಾವ ರೀತಿಯಲ್ಲಿ ಮತ್ತು ಎಷ್ಟರಮಟ್ಟಿಗೆ ಒಳಪಡಿಸಬೇಕು?
2) ಯಾವುದೇ ಹಿಂದೂ ಧಾರ್ಮಿಕ ಪಂಗಡವು ಸ್ಥಾಪಿಸಿರುವ, ವ್ಯವಸ್ಥೆಗೊಳಿಸಿರುವ ಅಥವಾ ನಿರ್ವಹಿಸುತ್ತಿರುವ ಧಾರ್ಮಿಕ ಸಂಸ್ಥೆಯನ್ನು ಅಥವಾ ಧರ್ಮಾದಾಯ ದತ್ತಿಗಳನ್ನು ಧಾರ್ಮಿಕ ದತ್ತಿ ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಬೇಕೆ? ಬೇಡವೇ? ಒಳಪಡಿಸುವುದಿದ್ದಲ್ಲಿ ಯಾವ ರೀತಿಯಲ್ಲಿ ಮತ್ತು ಎಷ್ಟರಮಟ್ಟಿಗೆ ಒಳಪಡಿಸಬೇಕು?
ಮೂರನೇ ಪ್ರಶ್ನೆ, ವಿಷಯಕ್ಕೆ ಸಂಬಂಧಿಸಿದಂತೆ ಇತರೇ ಯಾವುದಾದರೂ ಸೂಕ್ತ ಸಲಹೆಗಳು ಎಂದು ಕೂಡ ಕೇಳಲಾಗಿದೆ. ಈ ಮೂರು ಪ್ರಶ್ನೆಗಳನ್ನು ಕೇಳುವ ಬದಲು ಸಿದ್ಧರಾಮಯ್ಯ ನೇರವಾಗಿ “ತಾನು ಕರ್ನಾಟಕದ ಹಿಟ್ಲರ್ ಆಗಬೇಕು ಎಂದುಕೊಂಡಿದ್ದೇನೆ. ಆಗಬೇಕಾ? ಬೇಡ್ವಾ? ಆಗುವುದಾದರೆ ಎಷ್ಟು ಆಗಬೇಕು” ಎಂದು ಕೇಳಬಹುದಿತ್ತು. ಎರಡನೇ ಪ್ರಶ್ನೆಯಾಗಿ ತನಗೆ ಹುಚ್ಚು ಹಿಡಿದಂತೆ ಆಗಿದೆ, ಎಷ್ಟಾಗಿದೆ, ವಾಸಿಯಾಗುತ್ತಾ ಇಲ್ವಾ ಎನ್ನುವುದು ಕೇಳಿದ್ರೆ ಜನ ಅದಕ್ಕೆ ಸೂಕ್ತ ಉತ್ತರ ಕೊಡುತ್ತಿದ್ದರು. ಉಡುಪಿಯ ಶ್ರೀಕೃಷ್ಣಮಠದಿಂದ ಮೂರ್ನಾಕು ಸಲ ವಿನಮ್ರಪೂರ್ವಕವಾಗಿ ಕರೆದಾಗಲೂ ಬರದೇ, ಉಡುಪಿ ಮಠದ ಸನಿಹದಿಂದ ಹಾದು ಹೋದರೂ ಒಳಗೆ ಬರುವ ಸೌಜನ್ಯವನ್ನು ತೋರದ ಒಬ್ಬ ವ್ಯಕ್ತಿ ಈಗ ಅಂತಹ ಮಠಗಳನ್ನು ಬೆಂಗಳೂರಿನಲ್ಲಿಯೇ ಕುಳಿತು ನುಂಗುವ ಪ್ಲಾನ್ ಹಾಕುತ್ತಾರಲ್ಲ, ಇಷ್ಟಾಗಿಯೂ ತಾನು ಮುಂದಿನ ಬಾರಿ ಗೆದ್ದುಬರುತ್ತೇನೆ ಎಂದು ಅಂದುಕೊಳ್ಳುತ್ತಾರಲ್ಲ, ಅವರ ಭಂಡ ಧೈರ್ಯಕ್ಕೆ ಮತ್ತು ಅವರನ್ನು ಮುಂದಿನ ಬಾರಿ ಮತ್ತೆ ಚುನಾಯಿಸಬೇಕು ಎಂದು ಅಂದುಕೊಂಡು ವೋಟ್ ಹಾಕಬೇಕು ಎಂದುಕೊಂಡಿರುವ ನಿರ್ಧರಿಸಿರುವ ಹಿಂದೂಗಳಿಗೆ ಏನು ಹೇಳಬೇಕು. ನಮಗೆ ಸಿದ್ದು ತರಹ ದೇವರಿಲ್ಲ, ಮಠಮಾನ್ಯಗಳು ಇಲ್ಲ, ನಮಗೆ ಕಷ್ಟ ಬಂದಾಗ ಸಿದ್ದು ಎನ್ನುತ್ತೇವೆ, ದೇವರೇ ಎನ್ನಲ್ಲ ಎಂದು ಸಿದ್ದುವಿಗೆ ಮತ ಹಾಕಲು ನಿರ್ಧರಿಸಿರುವ ಹಿಂದೂಗಳು ಹಾಗೇ ಅಂದುಕೊಂಡೇ ಮತ ಹಾಕಿದರೆ ಅಡ್ಡಿ ಇಲ್ಲ. ಅದು ಬಿಟ್ಟು ಕಾಂಗ್ರೆಸ್ಸಿನಲ್ಲಿರುವ ನಾವು ಹಿಂದೂಗಳಲ್ವಾ ಎಂದು ಹೇಳಿದರೆ ಇನ್ನು ಯಾರೂ ನಂಬಲ್ಲ.
ಸಿದ್ಧಗಂಗಾ ಶ್ರೀಗಳಿಗೆ ಎಷ್ಟು ಬೇಸರವಾಗಿದೆಯೋ…
ತಾನು ಮೀನು ಮಾತ್ರ ತಿಂದು ಧರ್ಮಸ್ಥಳ ದೇವಸ್ಥಾನಕ್ಕೆ ಒಳಪ್ರವೇಶಿಸಿದ್ದಲ್ಲ, ಮೀನಿನೊಂದಿಗೆ ಮಾಂಸ ಕೂಡ ತಿಂದಿದ್ದೆ ಎಂದು ವೇದಿಕೆಯಲ್ಲಿ, ಮಾಧ್ಯಮದ ಎದುರು ಹೇಳುವ ಮುಖ್ಯಮಂತ್ರಿಯನ್ನು ನಮ್ಮ ರಾಜ್ಯ ಕಂಡಿದ್ದು ಇದೇ ಮೊದಲು ಮತ್ತು ಇದೇ ಕೊನೆಯಾಗಬೇಕು ಎನ್ನುವುದು ಜನರ ಆಶಯ.
ಬಹುಶ: ಸಿದ್ಧಗಂಗಾ ಶ್ರೀಗಳು ಸಿದ್ದುವಿನ ಈ ನೋಟಿಸ್ ಓದಿದರೆ ಅದೆಷ್ಟು ನೊಂದುಕೊಳ್ಳುತ್ತಾರೋ, ಆದಿಚುಂಚನಗಿರಿ ಮಠದ ಇತರ ಸ್ವಾಮಿಗಳು ಅದೆಷ್ಟು ಬೇಸರಗೊಂಡರೋ. ಅವರ ಆಪ್ತ ಹಿತೈಷಿಗಳಿಗೆ ಮಾತ್ರ ಗೊತ್ತು. ದಿನಬೆಳಗಾದರೆ ಸಿದ್ಧರಾಮಯ್ಯ ಮಂತ್ರಿಮಂಡಲದ ಅನೇಕ ಸಚಿವರು ಸಿದ್ಧಗಂಗಾ ಶ್ರೀಗಳ ದರ್ಶನ ಪಡೆದು ಮಠಕ್ಕೆ ಸುತ್ತು ಹಾಕಿ ಬರುತ್ತಾರಾ, ಹಾಗಾದರೆ ಅದು ಕೇವಲ ನಾಟಕವಾ ಅಥವಾ ಮಠದ ಆಸ್ತಿ ಎಷ್ಟಿದೆ ಎಂದು ನೋಡಿಬರುವ ಹುನ್ನಾರವಾ? ಇದಕ್ಕೆ ಅವರು ಉತ್ತರ ಕೊಡಬೇಕು. ಇಡೀ ರಾಜ್ಯದಲ್ಲಿ ಇಷ್ಟು ವ್ಯವಸ್ಥಿತವಾಗಿ ಅನೇಕ ದಶಕಗಳಿಂದ ಅಕ್ಷರ ದಾಸೋಹ, ಅನ್ನ ದಾಸೋಹ ಮಾಡಿಕೊಂಡು ಬಂದಿರುವ ಮಠದ ಎದುರು ಇಡೀ ಸರಕಾರವನ್ನು ಮಂಡಿಯೂರುವಂತೆ ಮಾಡಿದರೂ ಅದು ಕಡಿಮೆ. ಸಿದ್ಧಗಂಗಾ ಶ್ರೀಗಳ ಪಾದಧೂಳಿಗೂ ಸಮನಲ್ಲರದವರು ಇವತ್ತು ಮಠಗಳನ್ನು, ಅವುಗಳಿಗೆ ಸಂಬಂಧಪಟ್ಟ ದೇವಸ್ಥಾನಗಳನ್ನು ಒಳಗೆ ಹಾಕುವ ಸಂಚು ನಡೆಸುತ್ತಿದ್ದಾರೆ ಎಂದ ಮೇಲೆ ಇನ್ನೇನೂ ಬಾಕಿ ಉಳಿದಿದೆ. ವಿರೇಂದ್ರ ಹೆಗ್ಗಡೆಯವರಂತೂ ಸ್ವತ: ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಎದುರೇ ಸಿಎಂ ಅನ್ನು ಝಾಡಿಸಿದ್ದಾರೆ.
ನಮ್ಮ ರಾಜ್ಯದ ಅನೇಕ ಶ್ರೀಮಂತ ದೇವಾಲಯಗಳು ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುತ್ತವೆ. ಅವುಗಳಲ್ಲಿ ಕಟೀಲು, ಕೊಲ್ಲೂರು, ಸುಬ್ರಹ್ಮಣ್ಯ ನಮ್ಮ ಕರಾವಳಿಯ ಪ್ರಮುಖ ದೇವಾಲಯಗಳ ಸಾಲಿಗೆ ಸೇರುತ್ತವೆ. ಬೇರೆ ದೇವಸ್ಥಾನಗಳನ್ನು ಬಿಡಿ, ಸ್ವತ: ಈ ದೇವಸ್ಥಾನಗಳಲ್ಲಿ ಏನಾದರೂ ಅಭಿವೃದ್ಧಿಯಾಗಬೇಕಾದರೂ ಅದಕ್ಕೆ ಮೈಲಾರ ಸುತ್ತಿ ಕೊಂಕಣಕ್ಕೆ ಬರಬೇಕು. ಕಟೀಲು ದೇವಸ್ಥಾನದಲ್ಲಿಯೇ ಬಂಗಾರದ ರಥ ಮಾಡಿಸಲು ಸರಕಾರಕ್ಕೆ ಮನವಿ ಸಲ್ಲಿಸಿ ಅಲ್ಲಿಂದ ಆಯಿತು ಎಂದು ಬರುವಾಗ ಐದು ವರ್ಷ ಆಗಿತ್ತು. ಸದ್ಯದಲ್ಲಿ ಬ್ರಹ್ಮಕಲಶೋತ್ಸವಕ್ಕೆ ಅಣಿಯಾಗುತ್ತಿರುವ ಬಪ್ಪನಾಡು ದುರ್ಗಾ ಪರಮೇಶ್ವರಿ ದೇವಸ್ಥಾನದ ಒಳಚರಂಡಿ ಕಾಮಗಾರಿಗೆ ಅಲ್ಲಿನ ಪ್ರಮುಖರು ರೂಪುರೇಶೆ ಸಿದ್ಧಪಡಿಸಿದರೆ ಅದನ್ನು ಸರಕಾರದ ಮುಂದಿಟ್ಟು ಹಣ ತರಲು ಪ್ರಯತ್ನಿಸುತ್ತೇನೆ ಎಂದು ಆ ಭಾಗದ ಶಾಸಕರು ಹೇಳುತ್ತಾರೆಂದರೆ ಹಾಗಾದರೆ ಆಯಾಯಾ ದೇವಸ್ಥಾನಗಳಲ್ಲಿ ಭಕ್ತರು ಹಾಕಿದ ಕಾಣಿಕೆಯನ್ನು ರಾಜ್ಯ ಸರಕಾರ ತನ್ನ ಹಕ್ಕು ಎಂದು ಪ್ರತಿಪಾದಿಸುತ್ತದೆಯಾ? ವರ್ಷಕ್ಕೆ ನೂರಾರು ಕೋಟಿ ದೇವಸ್ಥಾನಗಳಿಂದ ಆದಾಯ ಬರುತ್ತಿದ್ದರೂ ಸರಕಾರ ಅದರ ಒಂದು ಶೇಕಡಾ ಕೂಡ ಖರ್ಚು ಮಾಡುವುದಿಲ್ಲ. ಹಾಗಿದ್ದ ಮೇಲೆಯೂ ಈಗ ವ್ಯವಸ್ಥಿತವಾಗಿ ನಡೆಯುತ್ತಿರುವ ಮಠಗಳ ಮೇಲೆ ಕಣ್ಣು ಹಾಕಿ ಅದನ್ನು ಕೂಡ ಹಾಳುಗೆಡವಲು ಹೊರಟಿದೆ.
ಇದಕ್ಕೆಲ್ಲ ಏನು ಕಾರಣ…
ಹಿಂದೂಗಳಲ್ಲಿ ಒಗ್ಗಟ್ಟು ಇಲ್ಲದಿರುವುದೇ ಸಿದ್ದುವಿನ ಈ ಎಲ್ಲಾ ವೇಷಗಳಿಗೆ ಕಾರಣ. ಅವರಿಗೆ ಗೊತ್ತಿದೆ. ಇಂತಹ ಬಾಣಗಳನ್ನು ಬಿಡುವುದರಿಂದ ಅಲ್ಪಸಂಖ್ಯಾತರಿಗೆ ಖುಷಿಯಾಗುತ್ತದೆ. ಇದರಿಂದ ಜೆಡಿಎಸ್ ಗೆ ಹೋಗುವ ಅವರ ಮತಗಳನ್ನು ಸೆಳೆಯಬಹುದು. ಅದರೊಂದಿಗೆ ಹಿಂದೂಗಳು ಹೇಗೋ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಂದು ಹಂಚಿ ಹೋಗಿದ್ದಾರೆ. ಏನೂ ಮಾಡಿದರೂ ಹಿಂದೂಗಳು ಒಗ್ಗಟ್ಟಾಗುವುದಿಲ್ಲ. ಆದ್ದರಿಂದ ತಾನು ಮಾಡಿದರೂ ಏನೂ ಆಗುವುದಿಲ್ಲ ಎಂದು ಅಂದುಕೊಂಡಿದ್ದಾರೆ. ಇದು ಸಿದ್ಧರಾಮಯ್ಯ ತೋರಿಸುತ್ತಿರುವ ಕೆಲವು ಸ್ಯಾಂಪಲ್. ಮುಂದೆ ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇನೆ ಎಂದು ತೋರಿಸುತ್ತಿರುವ ಝಲಕ್. ಉಳಿದದ್ದು ಜನರಿಗೆ ಬಿಟ್ಟಿದ್ದು!
Leave A Reply