ಖಟರ್ ಮುಸ್ಲಿಂ ರಾಷ್ಟ್ರ ಸೌದಿಯಲ್ಲಿ ಮಹಿಳೆಯರಿಗೆ ಸ್ವತಂತ್ರ ಉದ್ದಿಮೆ ಆರಂಭಿಸಲು ಅವಕಾಶ
ರಿಯಾದ್: ಖಟರ್ ಮುಸ್ಲಿಂ ರಾಷ್ಟ್ರ ಸೌದಿ ಅರೇಬಿಯಾ ಕಾಲಕ್ಕೆ ತಕ್ಕಂತೆ ಬದಲಾವಣೆಗೆ ತೆರೆದುಕೊಳ್ಳುತ್ತಿದ್ದು, ಇದೀಗ ಮಹಿಳೆಯರಿಗೆ ಸಂಬಂಧಿಕರ ನೆರವು ಇಲ್ಲದೇ ಸ್ವಂತ ಉದ್ದಿಮೆ ಆರಂಭಿಸಲು ಅವಕಾಶ ನೀಡಿದೆ. ಈ ಮೂಲಕ ಮುಸ್ಲಿಂ ಧರ್ಮದಲ್ಲಿ ಮಹಿಳೆಯರಿಗೆ ವಿಧಿಸಲಾಗಿದ್ದ ಕಟ್ಟುಪಾಡುಗಳಿಗೆ ಕೊನೆ ಮೊಳೆ ಹೊಡೆಯಲು ಸೌದಿ ಅರೇಬಿಯಾ ಸರ್ಕಾರ ನಿರ್ಧರಿಸಿದೆ.
ಪುರುಷ ಪ್ರಧಾನ ರಾಷ್ಟ್ರದಲ್ಲಿ ಈ ಮಹತ್ವದ ನಿಯಮ ಜಾರಿಗೆ ತರುವ ಮೂಲಕ ಸೌದಿ ಅರೇಬಿಯಾ ಸರ್ಕಾರ ಹೊಸ ಇತಿಹಾಸ ಮೂಡಿಸಿದೆ. ಮಹಿಳೆಯರು ಇನ್ನು ಮುಂದೆ ಸ್ವಂತ ಉದ್ಯಮವನ್ನು ಪುರುಷರ ಸಹಕಾರವಿಲ್ಲದೇ ಆರಂಭಿಸಬಹುದು. ಅಲ್ಲದೇ ಆನ್ ಲೈನ್ ಮೂಲಕ ಸೇವೆ ಸಲ್ಲಿಸಬಹುದು ಎಂದು ಸೌದಿ ಸರ್ಕಾರದ ಉದ್ದಿಮೆ ಮತ್ತು ಹೂಡಿಕೆ ಇಲಾಖೆ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ.
ಈ ಮೊದಲು ಮಹಿಳೆಯರು ಉದ್ದಿಮೆ ನಡೆಸಲು ಪೋಷಕರನ್ನು ಹೊಂದಿರಬೇಕಿತ್ತು. ಪತಿ ಅಥವಾ ತಂದೆಯ ಅನುಮತಿ ಪಡೆಯಬೇಕಿತ್ತು. ಇದೀಗ ಆ ನಿಯಮಕ್ಕೆ ವಿರಾಮ ಹೇಳಲಾಗಿದ್ದು, ಸೌದಿ ಅರೇಬಿಯಾದ ಆದಾಯ ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಮಹಿಳೆಯರಿಗೆ ಉದ್ಯೋಗ ನೀಡುವುದರ ಜತೆಗೆ, ತೈಲೋಧ್ಯಮದಲ್ಲಿ ಬದಲಾವಣೆಗಳನ್ನು ತರಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಮೊದಲ ಬಾರಿಗೆ ಮಹಿಳಾ ಹೂಡಿಕೆದಾರರಿಗೆ ಅವಕಾಶ ನೀಡಲಾಗುತ್ತಿದೆ.
ಸೌದಿ ಅರೇಬಿಯಾದ ರಾಜ ಮಹಮ್ಮದ್ ಬಿನ್ ಸಲ್ಮಾನ್ ಈ ಕ್ರಾಂತಿಕಾರಿಕ ನಿಲುವುಗಳನ್ನು ಕೈಗೊಂಡಿದ್ದಾರೆ. ಇತ್ತೀಚೆಗೆ ಸೌದಿಯಲ್ಲಿ ಮಹಿಳೆಯರಿಗೆ ಡ್ರೈವಿಂಗ್ ಗೆ ಅನುಮತಿ ನೀಡಲಾಗಿತ್ತು. ಅಲ್ಲದೇ ಕ್ರೀಡೆಯಲ್ಲಿ ಯೋಗ ಅಳವಡಿಸಿಕೊಳ್ಳಲಾಗಿತ್ತು ಮತ್ತು ಬಹಿರಂಗವಾಗಿ ಫುಟ್ಬಾಲ್ ನೋಡಲು ಅವಕಾಶ ನೀಡಲಾಗಿತ್ತು. ಸೌದಿ ಅರೇಬಿಯಾ ಮೂಡ ನಿಯಮಗಳನ್ನು ತೊರೆದು ಇದೀಗ ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದೆ. ಅಲ್ಲದೇ ಹೊಸ ಬದಲಾವಣೆಗೆ ತೆರೆದುಕೊಂಡು ಮಹಿಳೆಯರಿಗೆ ಸ್ವಾತಂತ್ರ್ಯ ನೀಡುತ್ತಿದೆ.
Leave A Reply